Latest Videos

ಕೈ ಸಂಸದ ಸಾಹು ಬಳಿ 350 ಕೋಟಿ ಪತ್ತೆ: ಜನ ಹೇಗೆ ಕಪ್ಪುಹಣ ಸಂಗ್ರಹಿಸ್ತಾರೋ ಅರ್ಥ ಆಗಲ್ಲ ಎಂದಿದ್ದ ಹಳೆ ಟ್ವೀಟ್‌ ವೈರಲ್‌

By Kannadaprabha NewsFirst Published Dec 11, 2023, 9:41 AM IST
Highlights

ಅಪನಗದೀಕರಣ ಮಾಡಿದರೂ ದೇಶದಲ್ಲಿ ಕಪ್ಪುಹಣ ನಿರ್ಮೂಲನೆ ಆಗಿಲ್ಲ ಎಂಬ ವಿಷಯ ನೋವು ತರುತ್ತದೆ. ಜನ ಹೇಗೆ ಕಪ್ಪು ಹಣ ಸಂಗ್ರಹಿಸುತ್ತಾರೋ ಅರ್ಥ ಆಗಲ್ಲ ಎಂಬ ಸಾಹು ಹಳೆಯ ಟ್ವೀಟ್‌ ವೈರಲ್‌ ಆಗಿದೆ. 

ಭುವನೇಶ್ವರ / ರಾಂಚಿ (ಡಿಸೆಂಬರ್ 11, 2023): ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಧೀರಜ್‌ ಸಾಹು ಅವರಿಗೆ ಸೇರಿದ ಮದ್ಯದ ಉದ್ದಿಮೆಗಳು ಹಾಗೂ ಇತರ ಆಸ್ತಿಪಾಸ್ತಿಗಳ ಮೇಲೆ ಸತತ 5ನೇ ದಿನವಾದ ಭಾನುವಾರ ಕೂಡ ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿ ದಾಳಿ ಮುಂದುವರಿದಿದ್ದು, ಅವರ ಬಳಿ ಸಿಕ್ಕ ನಗದಿನ ಪ್ರಮಾಣ 350 ಕೋಟಿ ರೂ. ದಾಟಿದೆ ಎಂದು ಹೇಳಲಾಗಿದೆ. 

ಶನಿವಾರದವರೆಗೆ 290 ಕೋಟಿ ರೂ. ಗಳನ್ನು ಎಣಿಸಲಾಗಿತ್ತು. ಭಾನುವಾರದವರೆಗೆ ಜಪ್ತಾದ 176 ಚೀಲ ಹಣದ ಪೈಕಿ 140 ಚೀಲದ ಹಣವನ್ನು ಎಣಿಸಲಾಗಿದೆ. ಎಣಿಸಲಾದ ಮೊತ್ತ ಸುಮಾರು 350 ಕೋಟಿ ರೂ. ದಾಟಿದೆ. 

ಇದನ್ನು ಓದಿ: ದೇಶದ ಅತಿ ದೊಡ್ಡ ಐಟಿ ರೇಡ್‌: ಕಾಂಗ್ರೆಸ್‌ ಸಂಸದನ ಬಳಿ 290 ಕೋಟಿ ರೂ; ಇನ್ನೂ ಸಿಗುತ್ತಲೇ ಇದೆ ಕಂತೆ ಕಂತೆ ನೋಟು!

ಇನ್ನೂ 36 ಚೀಲದ ಹಣ ಎಣಿಕೆ ಬಾಕಿ ಇದೆ. ಅಲ್ಲದೆ, ದಾಳಿ ವೇಳೆ ಬಚ್ಚಿಟ್ಟಿದ್ದ ಇನ್ನಷ್ಟು ಹಣ ಸಿಗಬಹುದಾಗಿದೆ. ಹೀಗಾಗಿ ನಗದು ಪ್ರಮಾಣ 400 ಕೋಟಿ ದಾಟಬಹುದು ಎಂಉದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಡಿಶಾದ ಬೊಲಾಂಗೀರ್‌ ಎಸ್‌ಬಿಐ ಶಾಖೆಯಲ್ಲಿ ಹಣ ಎಣಿಕೆ ಮಾಡಲಾಗುತ್ತಿದೆ. 

ನೂರಾರು ಕೋಟಿ ವೀರ ಸಂಸದ ಸಾಹು ಸ್ಪಷ್ಟನೆ ಕೇಳಿದ ಕಾಂಗ್ರೆಸ್‌
ರಾಂಚಿ: 350 ಕೋಟಿ ರೂ. ಗೂ ಅಧಿಕ ನಗದು ಪತ್ತೆ ಮೂಲಕ ಸುದ್ದಿಯಲ್ಲಿರುವ ತನ್ನ ರಾಜ್ಯಸಭಾ ಸಂಸದ ಧೀರಜ್‌ ಸಾಹು ಅವರಿಂದ ಕಾಂಗ್ರೆಸ್‌ ಪಕ್ಷ ಸ್ಪಷ್ಟನೆ ಬಯಸಿದೆ. ಆದಾಯ ತೆರಿಗೆ ಇಲಾಖೆ ಹಣ ಜಪ್ತಿ ಮಾಡಿರುವ ಸಾಹು ಮೌನ ಮುರಿಯಬೇಕು ಎಂದು ಸೂಚಿಸಿದೆ. ‘ಸಾಹುಗೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ’ ಎಂದು ಕಾಂಗ್ರೆಸ್‌ ಪ್ರಧಾನಿ ಕಾರ್ಯದರ್ಶಿ ಜೈರಾಂ ರಮೇಶ್‌ ಶನಿವಾರ ಹೇಳಿದ್ದರು.

 ಐಟಿ ರೇಡ್‌ ವೇಳೆ ಜಾರ್ಖಂಡ್‌ ಕಾಂಗ್ರೆಸ್‌ ಎಂಪಿ ಬಳಿ 400 ಕೋಟಿ ಹಣ! ಈವರೆಗೂ 225 ಕೋಟಿ ಕ್ಯಾಶ್‌ ಎಣಿಸಿದ ಅಧಿಕಾರಿಗಳು

ಅದರ ಬೆನ್ನಲ್ಲೇ ಹೇಳಿಕೆ ನೀಡಿರುವ ಜಾರ್ಖಂಡ್‌ ಕಾಂಗ್ರೆಸ್‌ ಉಸ್ತುವಾರಿ ಅವಿನಾಶ್‌ ಪಾಂಡೆ, ‘ಇದು ಸಾಹು ಅವರ ಖಾಸಗಿ ವಿಷಯ. ಪಕ್ಷಕ್ಕೂ ಅವರ ಹಣಕ್ಕೂ ಸಂಬಂಧ ಇಲ್ಲ. ಆದರೂ ಅವರು ಕಾಂಗ್ರೆಸ್‌ ಸಂಸದರಾಗಿರುವ ಕಾರಣ ತಮ್ಮ ಬಳಿ ಇಷ್ಟು ಹಣ ಹೇಗೆ ಬಂತು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.

ವೈರಲ್‌ ಆಯ್ತು ಸಾಹು ಹಳೆಯ ಟ್ವೀಟ್‌
ಭುವನೇಶ್ವರ: ಸಂಸದ ಧೀರಜ್‌ ಸಾಹುಗೆ ಸೇರಿದ 300 ಕೋಟಿ ರೂ .ಗೂ ಹೆಚ್ಚಿನ ಕಪ್ಪುಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಚಿತ್ರವೆಂದರೆ 2022ರ ಆಗಸ್ಟ್‌ನಲ್ಲಿ ಟ್ವೀಟೊಂದನ್ನು ಮಾಡಿದ್ದ ಸಾಹು ‘ಅಪನಗದೀಕರಣ ಮಾಡಿದರೂ ದೇಶದಲ್ಲಿ ಕಪ್ಪುಹಣ ನಿರ್ಮೂಲನೆ ಆಗಿಲ್ಲ ಎಂಬ ವಿಷಯ ನೋವು ತರುತ್ತದೆ. ಜನ ಹೇಗೆ ಕಪ್ಪು ಹಣ ಸಂಗ್ರಹಿಸುತ್ತಾರೋ ಅರ್ಥ ಆಗಲ್ಲ’ ಎಂದಿದ್ದರು. ಇದೀಗ ಅವರು ಅಂದು ಮಾಡಿದ್ದ ಟ್ವೀಟ್‌ ವೈರಲ್‌ ಆಗಿದ್ದು, ಸಾಹು ಬಣ್ಣ ಬಯಲಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಲೂಟಿ ಮಾಡಿದ ಪ್ರತಿ ಪೈಸೆಯೂ ವಾಪಸ್: ಇದು ಮೋದಿ ಗ್ಯಾರಂಟಿ; ಕಾಂಗ್ರೆಸ್‌ ಸಂಸದನ ಆಸ್ತಿ ಮೇಲಿನ ದಾಳಿಗೆ ಪ್ರಧಾನಿ ಪ್ರತಿಕ್ರಿಯೆ

click me!