ಮೆದುಳು ಸರ್ಜರಿ ಬಳಿಕ ಪ್ರಣಬ್ ಸ್ಥಿತಿ ಚಿಂತಾಜನಕ| ತಜ್ಞ ವೈದ್ಯರಿಂದ ಸತತ ನಿಗಾ: ಸೇನಾ ಆಸ್ಪತ್ರೆ| ಚಿಕಿತ್ಸೆಗೆ ಯಾವುದೇ ರೀತಿಯ ಸ್ಪಂದನೆ ತೋರಿಲ್ಲ.
ನವದೆಹಲಿ(ಆ.12): ಕೊರೋನಾ ಸೋಂಕಿನ ನಡುವೆಯೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ ತಿಳಿಸಿದೆ.
ವೆಂಟಿಲೇಟರ್‌ನಲ್ಲಿ ಪ್ರಣಬ್ ಮುಖರ್ಜಿ, ಮೆದುಳಿನ ಸರ್ಜರಿ ಯಶಸ್ವಿ!
84 ವರ್ಷದ ಪ್ರಣಬ್ ಮುಖರ್ಜಿ ಅವರು ಸೋಮವಾರ ಮಧ್ಯಾಹ್ನ 12.07 ಗಂಟೆಗೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದರು. ತಪಾಸಣೆ ವೇಳೆ ಅವರ ಮೆದುಳಿನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂತು. ಜೀವ ರಕ್ಷಣೆಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರಿಗೆ ವೆಂಟಿಲೇಟರ್ ಅಳವಡಿಕೆ ಮಾಡಲಾಗಿದ್ದು, ದೇಹ ಸ್ಥಿತಿ ವಿಷಮಗೊಂಡಿದೆ. ಅವರು ಚಿಕಿತ್ಸೆಗೆ ಯಾವುದೇ ರೀತಿಯ ಸ್ಪಂದನೆ ತೋರಿಲ್ಲ. ವಿಶೇಷ ತಜ್ಞ ವೈದ್ಯರ ತಂಡ ನಿರಂತರವಾಗಿ ಪ್ರಣಬ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ ಎಂದು ಆಸ್ಪತ್ರೆಯು ಹೇಳಿಕೆ ಬಿಡುಗಡೆ ಮಾಡಿದೆ.
ಬೇರೆ ತಪಾಸಣೆಗೆ ಹೋದಾಗ ತಮಗೆ ಕೊರೋನಾ ಇರುವುದು ಪತ್ತೆಯಾಗಿದೆ. ತಮ್ಮ ಜತೆ ಸಂಪರ್ಕ ಹೊಂದಿದ್ದವರು ಪ್ರತ್ಯೇಕವಾಗಿರಿ ಹಾಗೂ ಕೊರೋನಾ ತಪಾಸಣೆ ಮಾಡಿಸಿಕೊಳ್ಳಿ ಎಂದು ಪ್ರಣಬ್ ಅವರು ಸೋಮವಾರ ಟ್ವೀಟ್ ಮಾಡಿದ್ದರು. ಅದಾದ ಬೆನ್ನಲ್ಲೇ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿತ್ತು.
2012ರ ಜುಲೈನಿಂದ 2017ರವರೆಗೆ ಪ್ರಣಬ್ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.