10 ರಾಜ್ಯಗಳು ಕೊರೋನಾ ಗೆದ್ದರೆ ದೇಶ ಗೆದ್ದಂತೆ| ದೇಶದ ಶೇ.80 ಸೋಂಕು ಪ್ರಕರಣಗಳು ಕರ್ನಾಟಕ ಸೇರಿ 10 ರಾಜ್ಯಗಳಲ್ಲಿವೆ| ಈ ರಾಜ್ಯಗಳು ಕೊರೋನಾ ಮಣಿಸಬೇಕು: ಪ್ರಧಾನಿ ನರೇಂದ್ರ ಮೋದಿ ಕರೆ
ನವದೆಹಲಿ(ಆ.12): ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಕೊರೋನಾ ಹಾವಳಿ ತೀವ್ರವಾಗಿದೆ. ಈ 10 ರಾಜ್ಯಗಳು ಕೊರೋನಾವನ್ನು ಮಣಿಸಿದರೆ ಈ ಹೋರಾಟದಲ್ಲಿ ಇಡೀ ಭಾರತ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಅವರು ಕರ್ನಾಟಕ ಹಾಗೂ ಇತರ 9 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರ ಜತೆ ಕೊರೋನಾ ಪರಿಸ್ಥಿತಿಯ ಪರಾಮರ್ಶೆಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ದೇಶದ ಒಟ್ಟಾರೆ ಕೊರೋನಾ ಪ್ರಕರಣಗಳಲ್ಲಿ ಶೇ.80ರಷ್ಟುಪ್ರಕರಣಗಳು 10 ರಾಜ್ಯಗಳಲ್ಲೇ ಸಕ್ರಿಯವಾಗಿವೆ. ಹೀಗಾಗಿ ಈ ಹತ್ತೂ ರಾಜ್ಯಗಳು ಕೊರೋನಾ ಮಣಿಸಿದರೆ ಇಡೀ ದೇಶವೇ ವೈರಸ್ ಹಾವಳಿಯನ್ನು ಮಣಿಸಿದಂತೆ’ ಎಂಬ ಮಹತ್ವದ ಕರೆ ನೀಡಿದರು.
ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್ 3 ಸಲಹೆ!
‘ಬಿಹಾರ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣಗಳಲ್ಲಿ ಟೆಸ್ಟಿಂಗ್ ತೀವ್ರಗೊಳಿಸಬೇಕು. ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ತಗುಲಿದ 72 ತಾಸಿನೊಳಗೆ, ಆತನನ್ನು ಪತ್ತೆ ಮಾಡಿದರೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಕಂಟೈನ್ಮೆಂಟ್ (ನಿರ್ಬಂಧಿತ ಪ್ರದೇಶ), ಸೋಂಕಿತನ ಸಂಪರ್ಕ ಪತ್ತೆ ಹಚ್ಚುವಿಕೆ ಹಾಗೂ ನಿಗಾ ವಹಿಸುವಿಕೆ- ಈ ಮೂರೂ ಅಂಶಗಳು ಕೊರೋನಾ ವಿರುದ್ಧದ ಪ್ರಮುಖ ಅಸ್ತ್ರಗಳು’ ಎಂದು ಪ್ರಧಾನಿ ಹೇಳಿದರು.
‘ಇತ್ತೀಚೆಗೆ ಗುಣಮುಖರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ಯತ್ನಗಳು ಫಲ ಕೊಡುತ್ತಿವೆ ಎಂಬುದಕ್ಕೆ ಇದು ಸಾಕ್ಷಿ. ಅಲ್ಲದೆ, ಮರಣ ಪ್ರಮಾಣ ಇಳಿಕೆಯಾಗಿದ್ದು, ವಿಶ್ವದ ಮರಣ ಪ್ರಮಾಣಕ್ಕಿಂತ ಭಾರತದ ಪ್ರಮಾಣ ಕಡಿಮೆ ಇದೆ. ಇದು ತೃಪ್ತಿ ಕೊಡುವ ವಿಚಾರ’ ಎಂದೂ ಅವರು ನುಡಿದರು.
ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ!
ವಿಡಿಯೋ ಸಂವಾದದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರೆ, ಕರ್ನಾಟಕದ ಪರ ಉಪಮುಖ್ಯಮಂತ್ರಿಡಾ| .ಎನ್.ಅಶ್ವತ್ಥನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಭಾಗವಹಿಸಿದ್ದರು. ಕೊರೋನಾ ಹಾವಳಿ ಆರಂಭವಾದ ನಂತರ ಮುಖ್ಯಮಂತ್ರಿಗಳ ಜತೆಗೆ ಮೋದಿ ನಡೆಸಿದ 7ನೇ ಸಂವಾದ ಇದಾಗಿತ್ತು.
ಸದ್ಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಉತ್ತರ ಪ್ರದೇಶಗಳಲ್ಲಿ ಗರಿಷ್ಠ ಪ್ರಮಾಣದ ಸಕ್ರಿಯ ಕೊರೋನಾ ಸೋಂಕಿತರಿದ್ದಾರೆ.