ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ : 10 ಟಿಎಂಸಿ ಕಾವೇರಿ ನೀರು ಬಿಡುಗಡೆ

Published : Aug 17, 2023, 12:08 PM ISTUpdated : Aug 17, 2023, 12:09 PM IST
ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ : 10 ಟಿಎಂಸಿ ಕಾವೇರಿ ನೀರು ಬಿಡುಗಡೆ

ಸಾರಾಂಶ

ಕನ್ನಡ ನಾಡಿನ ಜೀವನದಿ ಕಾವೇರಿ ನೀರನ್ನು ಕರ್ನಾಟಕ ಕಾಂಗ್ರೆಸ್‌ ಸರ್ಕಾರವು ತಮಿಳುನಾಡಿಗೆ 10 ಟಿಎಂಸಿ ನೀರು ಹರಿಸುವ ಮೂಲಕ ಕನ್ನಡಿಗರ ಹಿತವನ್ನೇ ಬಲಿದಾನ ಮಾಡುತ್ತಿದೆ.

ಬೆಂಗಳೂರು (ಆ.17): ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿಯ ನೀರನ್ನು ಕರ್ನಾಟಕ ಕಾಂಗ್ರೆಸ್‌ ಸರ್ಕಾರವು ತಮಿಳುನಾಡಿಗೆ 10 ಟಿಎಂಸಿ ನೀರು ಹರಿಸುವ ಮೂಲಕ ಕನ್ನಡಿಗರ ಹಿತವನ್ನೇ ಬಲಿದಾನ ಮಾಡುತ್ತಿದೆ. I.N.D.I.A.ಗೆ ಒಕ್ಕೂಟದ ಜೀವದಾನಕ್ಕಾಗಿ ತಮಿಳುನಾಡಿನ ಎದುರು ಕರ್ನಾಟಕ ಸರ್ಕಾರ ದೈನೇಸಿಯಾಗಿ ಮಂಡಿಯೂರಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಾಮಾಜಿಕ ಜಾಲತಾಣದ ಮೂಲಕ ಟೀಕೆ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಂಇ ಅವರು, "ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು,ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್‌ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಹ್ಯಾಶ್‌ಟ್ಯಾಗ್‌ #ಕಾವೇರಿ ಬಳಕೆ ಮಾಡಿದ್ದಾರೆ.

ಬಾಳೆಹಣ್ಣು ದರದಲ್ಲಿ ಮಧ್ಯವರ್ತಿಗಳ ಗೋಲ್‌ಮಾಲ್‌: ರೈತರಿಂದ 25 ರೂ.ಗೆ ಖರೀದಿ, ಗ್ರಾಹಕರಿಗೆ 120 ರೂ. ಮಾರಾಟ

ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ? 2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷ ಸರಕಾರ! ತಮಿಳುನಾಡಿಗೆ ಬೆದರಿ ಶರಣಾಗಿದೆ!! ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು,ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟು ಎಂದು ಟೀಕೆ ಮಾಡಿದ್ದಾರೆ.

1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಜೀವವನ್ನೇ ತೇದರು. ಕಾವೇರಿಗಾಗಿ ಹಿಂದಿನ ಪ್ರತೀ ಸರಕಾರವೂ ಕೇಂದ್ರಕ್ಕೆ ಸಡ್ಡು ಹೊಡೆದು ತಮಿಳುನಾಡು ಅಬ್ಬರಕ್ಕೆ ಅಂಕೆ ಹಾಕಿದ್ದವು. ಇಂಥ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲೇ ಈ ಸರಕಾರವು, ನೆರೆರಾಜ್ಯ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದಾಕ್ಷಣ ಬೆದರಿ ಕೈ ಚೆಲ್ಲಿದೆ. ಸಂಕಷ್ಟ ಸ್ಥಿತಿಯ ಬಗ್ಗೆ ಕಾಂಗ್ರೆಸ್‌ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲಿಲ್ಲ, ಯಾಕೆ? ಕಾನೂನು ತಜ್ಞರ ಜತೆ, ಪ್ರತಿಪಕ್ಷ ಮುಖಂಡರ ಜತೆ ಸಮಾಲೋಚನೆ ನಡೆಸದೇ ವಾಯುವೇಗದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು? ಜನತೆಗೆ ಗೊತ್ತಾಗಬೇಕಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ. 

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿವರ್ಯರು, ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ? ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ? ಎಂದಿದ್ದಾರೆ.

ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್‌ ಕಳ್ಳರ ಪತ್ತೆಹಚ್ಚಿದ ಗೂಗಲ್‌ ಪೇ

ಕನ್ನಡಿಗರು ಕೊಟ್ಟ ಪೆನ್ ಈಗ ಗನ್ ರೂಪ ತಳೆದಿದೆಯಾ ಹೇಗೆ? ಕನ್ನಡಿಗರನ್ನು ಕೇಳಿಕೇಳಿ ಪಡೆದುಕೊಂಡ ಪೆನ್ ಈಗ ಪೆಚ್ಚಗೆ, ತೆಪ್ಪಗೆ ಮಲಗಿದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೇ ರಾಜ್ಯದ ಜಲ ಸಂಕಷ್ಟದ ಬಗ್ಗೆ ಸಭೆಯಲ್ಲೇ ಅಂಕಿ-ಅಂಶ ಸಮೇತ ಹೇಳಿದೆ. ಪಾಪ.. ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ! ಕಾವೇರಿ ಪಾಲಿಗೆ ಆ ಪಕ್ಷ ನಯವಂಚನೆ,ನಂಬಿಕೆ ದ್ರೋಹದ ಪ್ರತೀಕ.ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ.ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ.ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಂಕಷ್ಟಸೂತ್ರದ ಪಾಲನೆಗೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು