ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಭಾನುವಾರ ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಪಾಲ್ಘರ್ ಜಿಲ್ಲೆಯ ಚರೋಟಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ಪಾಲ್ಘರ್ ಜಿಲ್ಲಾ ವರಿಷ್ಠಾಧಿಕಾರಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಮುಂಬೈ (ಸೆ 4): ಟಾಟಾ ಸನ್ಸ್‌ನ ಮಾಜಿ ಚೇರ್ಮನ್ ಹಾಗೂ ವಿವಾದಿತವಾಗಿ ಚೇರ್ಮನ್ ಸ್ಥಾನದಿಂದ ಹೊರಬಿದ್ದಿದ್ದ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಭಾನುವಾರ ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪಾಲ್ಗಾರ್ ಜಿಲ್ಲೆಯ ಚರೋಟಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸೈರಸ್ ಮಿಸ್ತ್ರಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ ಎಂದು ಪಾಲ್ಘಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಚರೋಟಿಯಲ್ಲಿ ರಸ್ತೆ ಡಿವೈಡರ್‌ಗೆ ಬಡಿದು ಕಾರು ಅಪಘಾತಕ್ಕೆ ಈಡಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಸೈರಸ್ ಮಿಸ್ತ್ರಿ ಅಹಮದಾಬಾದ್‌ನಿಂದ ಮುಂಬೈಗೆ ತಮ್ಮ ಮರ್ಸಿಡೀಸ್ ಕಾರ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರು ಚಾಲಕ ಸೇರಿದಂತೆ ಆತನೊಂದಿಗೆ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಗುಜರಾತ್‌ನ ಆಸ್ಪತ್ರೆಗೆ ರವಾನಿಸಲಾಗಿದೆ. ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಲೆ, ಸೈರಸ್ ಮಿಸ್ತ್ರಿ ಸಾವಿಗೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಅತ್ಯಂತ ಕೆಟ್ಟ ಸುದ್ದಿ ಕೇಳಿದೆ. ಸಹೋದರ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ ಸೈರಸ್' ಎಂದು ಅವರು ಟ್ವೀಟ್ ಮಾಡಿದ್ದಾರೆ.
Tata Sons ex-chairman Cyrus Mistry dies in road accident
Read Story | https://t.co/5LvEeyDmRK pic.twitter.com/7UK8Lel4d7
ಕಲ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ನದಿ ಸೇತುವೆಯ ಮೇಲೆ ಚರೋಟಿ ನಾಕಾದಲ್ಲಿ ಅಪಘಾತ ಸಂಭವಿಸಿದೆ ಎಂದು ಕಲ್ಸಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಮಿಸ್ತ್ರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲ್ಸ ಗ್ರಾಮಾಂತರ ಆಸ್ಪತ್ರೆಗೆ ರವಾನಿಸಲಾಗಿದೆ . 2016 ರಲ್ಲಿ ಸೈರಸ್ ಮಿಸ್ತ್ರಿಯವರನ್ನು ಟಾಟಾ ಸನ್ಸ್ ಚೇರ್ಮನ್ ಸ್ಥಾನದಿಂದ ಹೊರಹಾಕಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಬಹಳ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಇದರ ವಿಚಾರಣೆ ಕೂಡ ನಡೆದಿತ್ತು. 2021 ರಲ್ಲಿ ಸುಪ್ರೀಂ ಕೋರ್ಟ್ ಸೈರಸ್ ಅವರ ಉಚ್ಚಾಟನೆ ಕಾನೂನುಬದ್ಧವಾಗಿದೆ ಮತ್ತು ಮೈನಾರಿಟಿ ಷೇರುದಾರರ ಹಕ್ಕುಗಳ ಮೇಲಿನ ಟಾಟಾ ಸನ್ಸ್ ನಿಯಮಗಳನ್ನು ಎತ್ತಿಹಿಡಿದಿತ್ತು.
ಯಾರಿವರು ಸೈರಸ್ ಮಿಸ್ತ್ರಿ: ಸೈರಸ್ ಮಿಸ್ತ್ರಿ ಮುಂಬೈನ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಇತ್ತೀಚೆಗೆ ನಿಧನರಾದ ಕೈಗಾರಿಕೋದ್ಯಮಿ ಪಲ್ಲೋಂಜಿ ಮಿಸ್ತ್ರಿಯವರ ಮಗ. ಲಂಡನ್ ಇಂಪೀರಿಯಲ್ ಕಾಲೇಜಿನಿಂದ ಪದವಿ ಪಡೆದಿದ್ದ ಸೈರಸ್ ಮಿಸ್ತ್ರಿ ಬಳಿಕ ಲಂಡನ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹೆಚ್ಚಿನ ಶಿಕ್ಷಣ ಪಡೆದಿದ್ದರು. ಸೈರಸ್ ಮಿಸ್ತ್ರಿ ಅವರು 2006 ರಲ್ಲಿ ಟಾಟಾ ಗ್ರೂಪ್‌ನ ಸದಸ್ಯರಾಗಿದ್ದರು. ಅವರು 2013 ರಲ್ಲಿ 43 ನೇ ವಯಸ್ಸಿನಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ನೇಮವಾಗಿದ್ದರು. 2016ರಲ್ಲಿ ವಿವಾದ ಬಳಿಕ ಅವರನ್ನು ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು.
ಮಿಸ್ತ್ರಿ ಕೇಸ್ ಗೆದ್ದ ಟಾಟಾ ಸಮೂಹ: ರತನ್ ಟಾಟಾಗೆ ದೊಡ್ಡ ಜಯ!
ಸೈರಸ್ ಮಿಸ್ತ್ರಿ (Cyrus Mistry) ಅವರು ಶಾಪೂರ್ಜಿ ಪಲ್ಲೋಂಜಿ (Shapoorji Pallonji Group) ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ವ್ಯಕ್ತಿಯಾಗಿದ್ದಾರೆ. ಸೈರಸ್ ಮಿಸ್ತ್ರಿ ಅವರ ಅಜ್ಜ, ಶಪೂರ್ಜಿ ಮಿಸ್ತ್ರಿ (Shapoorji Mistry) ಅವರು 1930 ರ ದಶಕದಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸಿದ್ದರು. ಅದೇ ಸಮಯದಲ್ಲಿ ಅವರು ಡೊರಾಬ್ಜಿ ಟಾಟಾ ಅವರಿಂದ ಟಾಟಾ ಗ್ರೂಪ್‌ನಲ್ಲಿ ಪಾಲನ್ನು ಖರೀದಿಸಿದ್ದರು. ಟಾಟಾ ಗ್ರೂಪ್‌ನಲ್ಲಿ ಶಾಪೂರ್ಜಿ ಪಲ್ಲೋಂಜಿ ಸಮೂಹ 18.5ರಷ್ಟು ಪಾಲನ್ನು ಹೊಂದಿದೆ. ಟಾಟಾ ಗ್ರೂಪ್‌ನಲ್ಲಿ (Tata Group) ಪಾಲನ್ನು ಹೊಂದಿರುವ ಏಕೈಕ ಕುಟುಂಬ ಇದಾಗಿದೆ. ಇದಲ್ಲದೆ, 66 ಪ್ರತಿಶತ ಪಾಲನ್ನು ಟಾಟಾ ಸಮೂಹದ ವಿವಿಧ ಟ್ರಸ್ಟ್‌ಗಳು ಹೊಂದಿವೆ. ಸೈರಸ್ ಮಿಸ್ತ್ರಿ ಅವರು ಟಾಟಾ ಸಮೂಹದ (Tata Group) ಆರನೇ ಅಧ್ಯಕ್ಷ ಎನಿಸಿಕೊಂಡಿದ್ದರು.
ಟಾಟಾ ಕಂಪನಿಯಿಂದ ಸೈರಸ್ ಮಿಸ್ತ್ರಿ ವಜಾ ಆಗಿದ್ದು ಹೇಗೆ?
ಪಲ್ಲೊಂಜಿ ಗ್ರೂಪ್‌ನ ವ್ಯವಹಾರಗಳು ಜವಳಿಯಿಂದ ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ವ್ಯಾಪಾರ, ಅಟೋಮೇಷನ್‌ವರೆಗೆ ವ್ಯಾಪಿಸಿದೆ. ಎಸ್‌ಪಿಜಿ ಸಮೂಹವು ಶಾಪೂರ್ಜಿ ಪಲ್ಲೋಂಜಿ ಎಂಜಿನಿಯರಿಂಗ್ ಮತ್ತು ನಿರ್ಮಾಣ, ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್, ಫೋರ್ಬ್ಸ್ ಟೆಕ್ಸ್ಟೈಲ್ಸ್, ಗೋಕಾಕ್ ಟೆಕ್ಸ್ಟೈಲ್ಸ್, ಯುರೇಕಾ ಫೋರ್ಬ್ಸ್, ಫೋರ್ಬ್ಸ್ & ಕೋ, ಎಸ್ಪಿ ಕನ್ಸ್ಟ್ರಕ್ಷನ್ ಮೆಟೀರಿಯಲ್ಸ್ ಗ್ರೂಪ್, ಎಸ್ಪಿ ರಿಯಲ್ ಎಸ್ಟೇಟ್ ಮತ್ತು ನೆಕ್ಸ್ಟ್ ಜನರಲ್ ಮುಂತಾದ ಕಂಪನಿಗಳನ್ನು ಒಳಗೊಂಡಿದೆ.