ಒಡಿಶಾ ರೈಲು ದುರಂತಕ್ಕೆ ವಿದೇಶಿ ಗಣ್ಯರ ಕಂಬನಿ: ಪುಟಿನ್, ಜಪಾನ್ ಪ್ರಧಾನಿ ಸಂತಾಪ

By Kannadaprabha NewsFirst Published Jun 4, 2023, 9:11 AM IST
Highlights

ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತಕ್ಕೆ ಸಂಬಂಧಿಸಿದಂತೆ ಹಲವು ವಿದೇಶಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಜಪಾನಿನ ಪ್ರಧಾನಿ ಫುಮಿಯೋ ಕಿಶಿಡಾ, ಕೆನಡಾ ಪ್ರಧಾನಿ (Canadian Prime Minister) ಜಸ್ಟಿನ್‌ ಟ್ರೂಡೋ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತಕ್ಕೆ ಸಂಬಂಧಿಸಿದಂತೆ ಹಲವು ವಿದೇಶಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಜಪಾನಿನ ಪ್ರಧಾನಿ ಫುಮಿಯೋ ಕಿಶಿಡಾ, ಕೆನಡಾ ಪ್ರಧಾನಿ (Canadian Prime Minister) ಜಸ್ಟಿನ್‌ ಟ್ರೂಡೋ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin), ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ನೇಪಾಳದ ಪ್ರಧಾನಿ ಪ್ರಚಂಡ, ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರೇ, (Sri Lankan Foreign Minister Ali Sabre) ಭೂತಾನ್‌ ಪ್ರಧಾನಿ ಲೋಟೆ ಶೇರಿಂಗ್‌, ಇಟಲಿ ವಿದೇಶಾಂಗ ಸಚಿವ ಆ್ಯಂಟೋನಿಯೋ ತಜಾನಿ, ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಾಬಾ ಕೊರೋಸಿ, ತೈವಾನ್‌ ಅಧ್ಯಕ್ಷ ಸಾಯ್‌ ಇಂಗ್‌-ವೆನ್‌ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಒಡಿಶಾದಲ್ಲಿ ನಡೆದಿರುವ ರೈಲು ದುರಂತಕ್ಕೆ ಸಂತಾಪಗಳನ್ನು ಸೂಚಿಸುತ್ತೇವೆ. ದುರ್ಘಟನೆಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡವರ ನೋವಿನ ಜೊತೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸುತ್ತೇನೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.  ದುರಂತದಲ್ಲಿ ಸಾವಿರಾರು ಜನ ಸಾವಿಗೀಡಾಗಿರುವುದಕ್ಕೆ ಬಹಳ ದುಃಖವಾಗಿದೆ. ಜಪಾನಿನ (Japan) ಜನರ ಪರವಾಗಿ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖವಾಗಲಿ ಎಂದು ಆಶಿಸುತ್ತೇನೆ ಎಂದು ಜಪಾನ್‌ ಪ್ರಧಾನಿ ಫುಮಿಯೋ ಕಿಶಿಡಾ (Fumio Kishida) ಹೇಳಿದ್ದಾರೆ.  

ಬಾಲಸೋರ್ ರೈಲು ದುರಂತ: ನೂರಾರು ಜನರ ಪ್ರಾಣ ರಕ್ಷಿಸಿದ ಸ್ಥಳೀಯರು: ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು

ಒಡಿಶಾದಲ್ಲಿ ನಡೆದ ರೈಲು ದುರಂತದ (Train Accident) ಸುದ್ದಿ ಕೇಳಿ ಬಹಳ ನೋವಾಗಿದೆ. ಕುಟುಂಬಸ್ಥರನ್ನು ಕಳೆದುಕೊಂಡವರ ದುಃಖದ ಜೊತೆಗೆ ನಾವಿದ್ದೇವೆ. ರಕ್ಷಣಾ ತಂಡಗಳು ಹಾಗೂ ಸಾರ್ವಜನಿಕರ ಕುಟುಂಬದ ಜೊತೆಗೆ ನಮ್ಮ ಪ್ರಾರ್ಥನೆಗಳಿವೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮುಖ್ಯಸ್ಥಸಬಾ ಕೊರೇಶಿ ಹೇಳಿದ್ದಾರೆ. 

ಇಷ್ಟೊಂದು ಸಾವಿಗೆ ಕಾರಣವೇನು: ಮುಂದೆ ಕುಳಿತವರೇ ಹೆಚ್ಚು ಸಾವು

ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಸಾವಿನ ಪ್ರಮಾಣ ಭಾರೀ ಪ್ರಮಾಣಕ್ಕೆ ಏರಲು, ರೈಲಿನ ಮುಂಭಾಗದಲ್ಲಿದ್ದ ಜನರಲ್‌ ಬೋಗಿ, ಸ್ಲೀಪರ್‌ ಬೋಗಿಗಳೇ ಕಾರಣ ಎಂಬುದು ಕಂಡು ಬಂದಿದೆ. ಅತಿ ಹೆಚ್ಚು ಹಾನಿಗೊಳಗಾದ ಕೋರಮಂಡಲ್‌ ಎಕ್ಸ್‌ಪ್ರೆಸ್‌ (Coromandel Express) ರೈಲಿನ ಮೊದಲ ಬೋಗಿ ಲಗೇಜ್‌ನದ್ದಾಗಿತ್ತು. ನಂತರದ ಎರಡು ಬೋಗಿ ಜನರಲ್‌ ಬೋಗಿಗಳಾಗಿದ್ದು, ಅದರಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನಸಂದಣಿ ಇತ್ತು. ಇನ್ನು ಅದರ ಹಿಂದೆ 5 ಸ್ಲೀಪರ್‌ ಬೋಗಿಗಳಿದ್ದು ಅಲ್ಲಿಯೂ ಜನರು ಕಿಕ್ಕಿರಿದು ತುಂಬಿದ್ದರು. ಅತಿ ಹೆಚ್ಚು ಜನರಿದ್ದ ಜನರಲ್‌ ಬೋಗಿಗಳು ಹಾಗೂ ಸ್ಲೀಪರ್‌ ಬೋಗಿಗಳು ತೀವ್ರತರವಾಗಿ ಹಾನಿಯಾದ ಕಾರಣ ಸಾವಿನ ಪ್ರಮಾಣ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ.

ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತ: ಸ್ಟೇಶನ್‌ ಮ್ಯಾನೇಜರ್‌ ಎಡವಟ್ಟೇ ದುರಂತಕ್ಕೆ ಕಾರಣ?

ಶುಕ್ರವಾರದ ಅವಘಡದಲ್ಲಿ ಕೋರಮಂಡಲ್‌ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ತಲೆಕೆಳಗಾಗಿದ್ದು, ಇತರ ಬೋಗಿಗಳ ಮೇಲೆ ಹೋಗಿ ಬಿದ್ದಿವೆ. 15 ಬೋಗಿಗಳು ಹಳಿ ತಪ್ಪಿವೆ, 7 ಬೋಗಿಗಳು ಉಲ್ಟಾ ಪಟ್ಟಾ ಆಗಿವೆ.

ಕಟ್ಟರ್‌ನಿಂದ ಬೋಗಿ ಕತ್ತರಿಸಿ ಜನರ ರಕ್ಷಿಸಿದ 300 ಎನ್‌ಡಿಆರ್‌ಎಫ್‌ ಸಿಬ್ಬಂದಿ

ತ್ರಿವಳಿ ರೈಲು ದುರಂತ ಸಂಭವಿಸಿದ ಒಡಿಶಾದ ಬಾಲಸೋರ್‌ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಸೇನೆ ಹಾಗೂ ವಾಯುಪಡೆ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸೇನೆಯ ತುಕಡಿಗಳು ಹಾಗೂ ವಾಯುಪಡೆಯ ಹೆಲಿಕಾಪ್ಟರ್‌ಗಳು ಕೋಲ್ಕತಾದಿಂದ ದೌಡಾಯಿಸಿದರು. ಸೇನೆಯ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ತಂಡಗಳು ಸ್ಥಳಕ್ಕೆ ಧಾವಿಸಿ ವೈದ್ಯಕೀಯ ಹಾಗೂ ಇತರ ಪರಿಹಾರ ಕಾರ್ಯದಲ್ಲಿ ತೊಡಗಿದವು. ಇನ್ನು ವಾಯುಪಡೆಎರಡು ಎಂಐ17 ಹೆಲಿಕಾಪ್ಟರ್‌ಗಳು ಆಗಮಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾದವು.

ಇನ್ನು 300 ಎನ್‌ಡಿಆರ್‌ಎಫ್‌ ರಕ್ಷಣಾ ಸಿಬ್ಬಂದಿ, ಮೆಟಲ್‌ ಕಟ್ಟರ್‌ಗಳು, ಶ್ವಾನ ದಳಗಳು ಹಾಗೂ ಇತರ ರಕ್ಷಕ ಸಾಧನಗಳೊಂದಿಗೆ ಶ್ಕುರವಾರ ರಾತ್ರಿಯೇ ಆಗಮಿಸಿ ಹಗಲು ರಾತ್ರಿ ರಕ್ಷಣಾ ಕಾರ್ಯ ನಡೆಸಿದರು. ಕೋಲ್ಕತಾದಿಂದ ದೌಡಾಯಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ, ರೈಲಿನ ನಜ್ಜುಗುಜ್ಜಾದ ಬೋಗಿಗಳನ್ನು ಮೆಟಲ್‌ ಕಟ್ಟರ್‌ ಬಳಸಿ ಕತ್ತರಿಸಿದರು. ಆಗ ಅದರಲ್ಲಿ ಸಿಲುಕಿಕೊಂಡಿದ್ದ ನೂರಾರು ಗಾಯಾಳುಗಳು ಹೊರಬಂದು ಆಸ್ಪತ್ರೆಗೆ ದಾಖಲಾದರು. ಇನ್ನು ಶ್ವಾನ ತಂಡಗಳು ಎಲ್ಲಿ ಜನರು ಸಿಲುಕಿದ್ದಾರೆ ಎಂಬುದನ್ನು ಶೋಧಿಸಲು ನೆರವಾದವು.

click me!