ರೇವ್ ಪಾರ್ಟಿಗಳಿಗೆ ಹಾವು ಹಾಗೂ ಹಾವಿನ ವಿಷವನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ಹಿಂದಿ ಬಿಗ್ಬಾಸ್ ವಿಜೇತ ಇಲ್ವೀಸ್ ಯಾದವ್ ಸೇರಿದಂತೆ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ
ನವದೆಹಲಿ: ರೇವ್ ಪಾರ್ಟಿಗಳಿಗೆ ಹಾವು ಹಾಗೂ ಹಾವಿನ ವಿಷವನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ಹಿಂದಿ ಬಿಗ್ಬಾಸ್ ವಿಜೇತ ಇಲ್ವೀಸ್ ಯಾದವ್ ಸೇರಿದಂತೆ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಆಗಿರುವ ಬಿಗ್‌ಬಾಸ್ ಸ್ಪರ್ಧಿ ಇಲ್ವೀಸ್ ಯಾದವ್ ಸ್ವತಃ ಈ ರೇವ್ ಪಾರ್ಟಿಯನ್ನು ಆಯೋಜಿಸುತ್ತಿದ್ದ ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಪ್ರದೇಶಗಳ ಫಾರ್ಮ್‌ಹೌಸ್‌ಗಳಲ್ಲಿ ಈ ಪಾರ್ಟಿ ಆಯೋಜನೆಯಾಗುತ್ತಿತ್ತು. ಈ ಇಲ್ವೀಸ್ ಯಾದವ್ ಯೂಟ್ಯೂಬ್ ಇನ್ಸ್ಟಾಗ್ರಾಂಗಳಲ್ಲಿ ಹಾವುಗಳನ್ನು ಬಳಸಿ ವೀಡಿಯೋ ರೆಕಾರ್ಡ್ ಮಾಡಿ ಪೋಸ್ಟ್ ಮಾಡುತ್ತಿದ್ದ.
ಪ್ರಥಮ ಮಾಹಿತಿ ವರದಿ ಆಧರಿಸಿ ಇಲ್ವೀಸ್ ಯಾದವ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರು ಜನರಲ್ಲಿ ಐವರನ್ನು ಈಗಾಗಲೇ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆದರೆ ಇಲ್ವೀಸ್ ಯಾದವ್ ಅನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರ ಬಳಿಯಿಂದ ಐದು ನಾಗರಹಾವುಗಳು ಸೇರಿದಂತೆ 9 ಹಾವುಗಳು, ಹಾವುಗಳ ವಿಷವನ್ನು ವಶಪಡಿಸಿಕೊಳ್ಳಲಾಗಿದೆ. ಹಾವುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಲ್ವೀಸ್ ಯಾದವ್ ಆಯೋಜಿಸುತ್ತಿದ್ದ ಈ ಪಾರ್ಟಿಯಲ್ಲಿ ಹೆಚ್ಚಾಗಿ ವಿದೇಶಿ ಪ್ರಜೆಗಳು ಭಾಗವಹಿಸುತ್ತಿದ್ದು, ಕಿಕ್ಕೇರಿಸಿಕೊಳ್ಳಲು ಅವರು ಹಾವಿನ ವಿಷವನ್ನು ಸೇವಿಸುತ್ತಿದ್ದರೂ ಎಂದು ಪೊಲೀಸರು ಹೇಳಿದ್ದಾರೆ. ನೋಯ್ಡಾದ ಸೆಕ್ಟರ್ 49ರ ರಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ಈ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಎನ್‌ಜಿಒ ಒಂದು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ. ಹಾವಿನ ವಿಷಕ್ಕಾಗಿ ಈ ಖದೀಮರು ಬೇರೆ ಬೇರೆ ಪ್ರದೇಶಗಳಿಂದ ಹಾವನ್ನು ಹಿಡಿದು ತರುತ್ತಿದ್ದರು.
ಬಳಿಕ ಈ ಹಾವಿನ ವಿಷವನ್ನು ತೆಗೆದು ಇಲ್ವೀಸ್ ಯಾದವ್‌ಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಭಾರಿ ಮೊತ್ತದ ಹಣದ ಆಸೆಯ ಹಿನ್ನೆಲೆಯಲ್ಲಿ ಆರೋಪಿಗಳು ಈ ಹಾವಿನ ವಿಷ ಪೂರೈಕೆಯ ಕೆಲಸವನ್ನು ಮಾಡುತ್ತಿದ್ದರು ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯ್ ಬಿಟ್ಟಿದ್ದಾರೆ. ಹಿಂದಿ ಬಿಗ್‌ಬಾಸ್ ಒಟಿಟಿ ಸೀಸನ್ 2ರಲ್ಲಿ ವಿನ್ ಆದ ಬಳಿಕ ಇಲ್ವೀಸ್ ಯಾದವ್ ಮುನ್ನಲೆಗೆ ಬಂದಿದ್ದರು.