ತೆಲಂಗಾಣ: ಭಾರತೀಯ ಹವಾಮಾನ ಇಲಾಖೆ ತೆಲಂಗಾಣದಲ್ಲಿ ಧಾರಾಕಾರ ಮಳೆಯಾಗುವ ಸೂಚನೆ ನೀಡಿತ್ತು. ಆದರೆ ಮಳೆಯ ಜೊತೆ ಆಕಾಶದಿಂದ ಮೀನುಗಳು ಕೂಡ ಉದುರಬಹುದು ಎಂದು ತೆಲಂಗಾಣದ ಜನ ಭಾವಿಸಿರಲಿಲ್ಲ. ತೆಲಂಗಾಣದ ಜಗ್ತಿಯಾಲ್ ಪಟ್ಟಣದ ಹಲವೆಡೆ ತುಂತುರು ಮಳೆಯೊಂದಿಗೆ ಆಕಾಶದಿಂದ ನೆಲಕ್ಕೆ ಮೀನುಗಳು ಕೂಡ ಉದುರಿದ್ದು, ಜನ ಈ ಮೀನಿನ ಮಳೆ ನೋಡಿ ಅಚ್ಚರಿಗೊಂಡಿದ್ದರು. ನೆಲಕ್ಕೆ ಬಿದ್ದ ಮೀನುಗಳು ವಿಲ ವಿಲ ಒದ್ದಾಡುತ್ತಿರುವ ದೃಶ್ಯಗಳನ್ನು ಜನ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನೆಲಕ್ಕೆ ಬಿದ್ದ ಮೀನನ್ನು ಹಿಡಿಯಲು ಯತ್ನಿಸುವುದನ್ನು ಕಾಣಬಹುದು.
ಇದು ಅಪರೂಪದ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಈ ಹಿಂದೆಯೂ ಸಂಭವಿಸಿದೆ. ವರದಿಯ ಪ್ರಕಾರ, ಇದು ಪ್ರಾಣಿಗಳ ಮಳೆ ಎಂದು ಕರೆಯಲ್ಪಡುವ ಅಪರೂಪದ ಹವಾಮಾನ ವಿದ್ಯಮಾನವಾಗಿದೆ. ಸಣ್ಣ ಏಡಿಗಳು, ಸಣ್ಣ ಮೀನುಗಳು ಮತ್ತು ಕಪ್ಪೆಗಳಂತಹ ಸಣ್ಣ ಜಲಚರ ಪ್ರಾಣಿಗಳು ಜಲಧಾರೆಯಿಂದ ಆಕಾಶಕ್ಕೆ ಹೀರಲ್ಪಡುತ್ತವೆ. ನಂತರ ಶಕ್ತಿ ಕಳೆದುಕೊಂಡಾಗ ಮಳೆಯ ವೇಳೆ ನೀರಿನೊಂದಿಗೆ ಭೂಮಿಗೆ ಬೀಳುತ್ತವೆ. ಇದು ಜನರನ್ನು ಅಚ್ಚರಿಗೆ ದೂಡುತ್ತದೆ.
ಆಕಾಶದಿಂದ ಮೀನಿನ ಮಳೆ... ಅಪರೂಪದ ವಿದ್ಯಾಮಾನಕ್ಕೆ ಸಾಕ್ಷಿಯಾದ ಟೆಕ್ಸಾಸ್
ಈ ವಿಚಿತ್ರ ಹವಾಮಾನದ ವಿದ್ಯಮಾನದಿಂದಾಗಿ ಮೀನುಗಳಂತಹ ಸಮುದ್ರ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಿಂದ ದೂರ ಸಾಗಿಸಲ್ಪಡುತ್ತವೆ. ಈ ಪ್ರಕ್ರಿಯೆ ಅಪರೂಪವಾಗಿದ್ದರೂ, ಜನರು ಪ್ರಾಣಿಗಳ ಮಳೆಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಉತ್ತರ ಪ್ರದೇಶದ (UP) ಭದೋಹಿ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಕಾಶದಿಂದ ಮೀನುಗಳು ಬೀಳುತ್ತಿದ್ದ ವಿಚಿತ್ರ ವಿದ್ಯಮಾನಕ್ಕೆ ಭದೋಹಿ ಜಿಲ್ಲೆಯ ಜನ ಸಾಕ್ಷಿಯಾಗಿದ್ದರು. ಬಲವಾದ ಗಾಳಿ ಮತ್ತು ಭಾರೀ ಮಳೆಯೊಂದಿಗೆ ಆ ದಿನ ಸಮುದ್ರ ಜೀವಿಗಳು ಚೌರಿಯ ಕಂಡಿಯಾ ಗೇಟ್ ಪ್ರದೇಶದ ಬಳಿ ಮಳೆಯಂತೆ ಸುರಿದಿದ್ದವು.
Fact Check: ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆ ಸುರಿದಾಗ ಬಂದದ್ದು ನೀರಲ್ಲ, ಮೀನು?
ಈ ಮೀನಿನ ಮಳೆಯನ್ನು ಪ್ರಾಣಿಗಳ ಮಳೆ ಎಂಬುದಾಗಿಯೂ ಕರೆಯುತ್ತಾರೆ. ಟೆಕ್ಸಾಸ್‌ನ ಟೆಕ್ಸರ್ಕಾನಾದಲ್ಲಿ ಈ ಹಿಂದೆ ಮೀನಿನ ಮಳೆ ಸುರಿದಿದ್ದು, ಅನೇಕ ಟೆಕ್ಸರ್ಕಾನಾ ನಿವಾಸಿಗಳು ಮಳೆಯೊಂದಿಗೆ ಆಕಾಶದಿಂದ ಬೀಳುವ ಮೀನುಗಳನ್ನು ನೋಡಿ ಆಶ್ಚರ್ಯಚಕಿತರಾದರು. ಈ ವಿಲಕ್ಷಣ ಪ್ರಾಕೃತಿಕ ವಿದ್ಯಮಾನದ ಬಗ್ಗೆ ಟೆಕ್ಸಾಸ್‌ನ ದಿ ಸಿಟಿ ಆಫ್ ಟೆಕ್ಸರ್ಕಾನಾದ ಅಧಿಕೃತ ಫೇಸ್‌ಬುಕ್ (Facebook) ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು. 2021ನೇ ಇಸವಿಯೂ ಟೆಕ್ಸರ್ಕಾನಾದಲ್ಲಿ ಇಂದು ಸುರಿದ ಮೀನುಗಳ ಮಳೆ ಸೇರಿದಂತೆ ಎಲ್ಲಾ ಟ್ರಿಕ್ಸ್‌ಗಳನ್ನು ಹೊರತೆಗೆಯುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಮೀನು ಮತ್ತು ಕಪ್ಪೆಗಳ ಮಳೆ ಇದು ಕ್ರಿ.ಶ 200 ರ ಹಿಂದಿನಿಂದಲೂ ಕಂಡು ಬಂದಿದ್ದಂತಹ ಒಂದು ವಿದ್ಯಮಾನವಾಗಿದೆ. ಇದು ಹೇಗೆ ಏಕೆ ಸಂಭವಿಸುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ನ್ಯಾಷನಲ್ ಜಿಯೋಗ್ರಫಿಯ ಪ್ರಕಾರ ಭಾರೀ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ. ನಂತರ ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ