ಅಬಕಾರಿ ನೀತಿ ಹಗರಣದಡಿ ಜೈಲು ಸೇರಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಬಿಡುಗಡೆಯಾಗಿ ಮನೆಗೆ ಮರಳಿದರೂ ಸಂಕಷ್ಟ ತಪ್ಪಿಲ್ಲ. ಇದೀಗ ಬೆಂಬಲಿಗರ ಮೇಲೆ ಹೊಸ ಕೇಸ್ ದಾಖಲಾಗಿದೆ.
ದೆಹಲಿ(ಸೆ.14) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಅಬಕಾರಿ ನೀತಿ ಹಗರಣದಡಿ ಕಳೆದ 5 ತಿಂಗಳಿನಿಂದ ಜೈಲು ಸೇರಿದ್ದ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದರೂ ಕೇಜ್ರಿವಾಲ್ ನೆಮ್ಮದಿ ಇಲ್ಲ. ಕೇಜ್ರಿವಾಲ್ ಬಿಡುಗಡೆಯನ್ನು ಆಮ್ ಆದ್ಮಿ ಪಾರ್ಟಿ ದೀಪಾವಳಿ ರೀತಿ ಸಂಭ್ರಮಿಸಿದೆ. ಇದುವೇ ಕೇಜ್ರಿವಾಲ್ ಸಂಕಷ್ಟಕ್ಕೆ ಕಾರಣವಾಗಿದೆ. ಕೇಜ್ರಿವಾಲ್ ಬಿಡುಗಡೆಯಿಂದ ಸಿಎಂ ಮನೆ ಮುಂದೆ ಸೇರಿದಂತೆ ಹಲೆವೆಡೆ ಪಟಾಕಿ ಸಿಡಿಸಿದ ಬೆಂಬಲಿಗರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಬಿಡುಗಡೆಯಾಗುತ್ತಿರುವ ಸಂಭ್ರಮದಲ್ಲಿ ಆಪ್ ಕಾರ್ಯಕರ್ತರು, ಕೇಜ್ರಿವಾಲ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಉಲ್ಲೇಖಿಸಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಪಟಾಕಿ ಸಿಡಿಸಿದ್ದೇ ಇದೀಗ ತಲೆನೋವಿಗೆ ಕಾರಣವಾಗಿದೆ. ಇದೇ ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ವಾಯು ಮಾಲಿನ್ಯ ಕಾರಣ ಪಟಾಕಿ ನಿಷೇಧಿಸಿದೆ. ಪಟಾಕಿ ಸಿಡಿಸುವುದು, ಮಾರಾಟ ಮಾಡುವುದು ಎರಡೂ ನಿಷೇಧವಾಗಿದೆ. ಇದೀಗ ಇದೇ ಕಾನೂನ ಆಪ್ ಕಾರ್ಯಕರ್ತರು, ಬೆಂಬಲಿಗರಿಗೆ ಮುಳುವಾಗಿದೆ.
Breaking: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ 6 ತಿಂಗಳ ಬಳಿಕ ಜಾಮೀನು ಮಂಜೂರು
ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಡಿಯೋಗಳ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತು. ಈ ಘಟನೆ ಕುರಿತು ಬಿಜೆಪಿ ಪ್ರಶ್ನಿಸಿತ್ತು. ದೀಪಾವಳಿ ಹಬ್ಬದಲ್ಲಿ ಹಿಂದೂಗಳ ಸಂಪ್ರದಾಯದಂತೆ ಪಟಾಕಿ ಸಿಡಿಸಲು ಅವಕಾಶವಿಲ್ಲ. ಆದರೆ ಜೈಲಿನಿಂದ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಪಟಾಕಿ ಸಿಡಿಸಲು ಅವಕಾಶವಿದೆ. ಇದು ಯಾವ ನ್ಯಾಯ? ಎಲ್ಲಿ ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.
ಆಪ್ ಕಾರ್ಯಕರ್ತರು, ಬೆಂಬಲಿಗರ ನಡೆ ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತ ಸೆಕ್ಷನ್ 223 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಆಪ್ ನಾಯಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಪಿತೂರಿ, ಷಡ್ಯಂತ್ರದಿಂದ ಆಪ್ ನಾಯಕರು ಜೈಲು ಸೇರಿದ್ದಾರೆ. ಆದರೆ ಅಂಬೇಡ್ಕರ್ ಸಂವಿಧಾನ ನಮಗೆ ರಕ್ಷಣೆ ನೀಡಿದೆ. ಷಡ್ಯಂತ್ರ ರೂಪಿಸಿ ಜೈಲಿಗೆ ಕಳುಹಿಸುತ್ತಿರುವವರ ಮುಖವಾಡ ಶೀಘ್ರದಲ್ಲೇ ಕಳಚಿ ಬೀಳಲಿದೆ ಎಂದು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಸಿಎಂ ಕೇಜ್ರಿವಾಲ್‌ಗೆ ಜಾಮೀನು: ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್..!