ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು, ನಶೆ ಏರಿದೆ, ಏನೂ ಕಾಣದಾಗಿದೆ. ಇದು ಹಾದಿ ಬೀದಿಯಲ್ಲಿ ಹೋಗುವವರ ಕತೆಯಲ್ಲ ಶಾಲಾ ಶಿಕ್ಷಕಿಯ ಫುಲ್ ಬಾಟಲ್ ಮಹಿಮೆ. ಶಾಲೆಬಂದ ಶಿಕ್ಷಕಿಗೆ ಬೋರ್ಡ್ ಎರಡೆರೆಡು ಕಂಡಿದೆ. ವಿದ್ಯಾರ್ಥಿಗಳು ಇದ್ದಾರೆ ಅನ್ನೋದೇ ಮರೆತುಹೋಗಿದೆ.
ಛತ್ತೀಸಘಡ(ಜು.23): ಮಕ್ಕಳಿಗೆ ಪಾಠ ಹೇಳಿ ಕೊಡಬೇಕಾದ, ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕಿದ್ದ ಶಿಕ್ಷಕಿಯ ಅವತಾರ ಇದೀಗ ಭಾರಿ ಸದ್ದು ಮಾಡುತ್ತಿದೆ. ಕಂಠಪೂರ್ತಿ ಕುಡಿದು ತೂರಾಡುತ್ತಾ ಶಾಲೆಗೆ ಆಗಮಿಸಿದ್ದಾರೆ. ಬಂದ ಶಿಕ್ಷಕಿಗೆ ಬೋರ್ಡ್, ಪಾಠ, ತರಗತಿ ಯಾವುದೂ ಕಾಣಿಸಿಲ್ಲ. ತರಗತಿಯೊಳಗಿದ್ದ ಕುರ್ಚಿಯೊಂದು ಮಾತ್ರ ಕಾಣಿಸಿದೆ. ನೇರವಾಗಿ ಕುರ್ಚಿ ಮೇಲೆ ಕುಳಿತಿದ್ದಾರೆ. ಇಷ್ಟೇ ನೋಡಿ ಇನ್ನೇನಾಗುತ್ತಿದೆ ಅನ್ನೋ ಅರಿವು ಶಿಕ್ಷಕಿಗೆ ಇರಲಿಲ್ಲ. ಮದ್ಯದ ಅಮಲಿನಲ್ಲಿ ಕುರ್ಚಿಯಿಂದ ಜಾರಿ ನೆಲಕ್ಕೆ ಬಿದ್ದರೂ ಯಾವುದರ ಅರಿವು ಇಲ್ಲ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಇತರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಪರಿಣಾಮ ಈ ಘಟನೆ ಬೆಳಕಿಗೆ ಬಂದಿದೆ. ಅಂದ ಹಾಗೇ ನಶೆ ಶಿಕ್ಷಕಿ ಘಟನೆ ನಡೆದಿರುವುದು ಚತ್ತೀಸಘಡದ ಟಿಕಾಯತ್‌ಗಂಜ್‌ನಲ್ಲಿ.
ಬೆಳಗ್ಗೆ ಕಂಠಪೂರ್ತಿ ಕುಡಿದ ಶಿಕ್ಷಕಿ 11 ಗಂಟೆ ಸುಮಾರಿಗೆ ಶಾಲೆಗೆ ಆಗಮಿಸಿದ್ದಾರೆ. ನೇರವಾಗಿ ತರಗತಿಯ ಒಳ ಹೊಕ್ಕ ಶಿಕ್ಷಕಿಗೆ ನಿಲ್ಲಲು ಸಾಧ್ಯವಾಗದೆ ಕುಸಿದಿದ್ದಾರೆ. ಅಮಲಿನಲ್ಲಿ ಏನೂ ಮಾಡುತ್ತಿದ್ದೇನೆ ಅನ್ನೋ ಪ್ರಜ್ಞೆಯೂ ಇಲ್ಲದಾಗಿದೆ. ವಿದ್ಯಾರ್ಥಿಗಳು ನೀಡಿದ ಮಾಹಿತಿಯಿಂದ ತಕ್ಷಣವೇ ತರಗತಿಗೆ ಬಂದ ಶಿಕ್ಷಕರು ಹಾಗೂ ಶಿಕ್ಷಣ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಅದೆಷ್ಟೇ ಎಬ್ಬಿಸಿದರೂ ಶಿಕ್ಷಕಿ ಮಾತ್ರ ಏಳುವ ಸ್ಥಿತಿಯಲ್ಲಿ ಇರಲಿಲ್ಲ. ತಕ್ಷಣ ಪ್ರಾಥಮಿಕ ಶಾಲಾ ಅಧಿಕಾರಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳಾ ಪೊಲೀಸ್ ಪೇದೆಗಳು ಪ್ರಾಥಮಿಕ ಶಾಲೆಗೆ ಆಗಮಿಸಿ ಶಿಕ್ಷಕಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಿರುವ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕಳೆದ ಕೆಲ ದಿನಗಳಿಂದ ಶಿಕ್ಷಕಿ ಕುಡಿದು ಶಾಲೆಗೆ ಆಗಮಿಸುತ್ತಿರುವುದು ಬೆಳಕಿಗೆ ಬಂದಿದೆ. ಇಂದು ಹೆಚ್ಚಾಗಿದೆ. ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಶಿಕ್ಷಕಿಗೆ ಎಚ್ಚರಿಕೆ ನೀಡಲಾಗಿದೆ. ಕುಡಿದು ಬರದಂತೆ ಸೂಚಿಸಲಾಗಿದೆ. ಇನ್ನೊಂದು ದೂರು ಬಂದರೆ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ.
ಟಿಕಾಯತ್‌ಗಂಜ್‌ನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ 54 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಟಿಕಾಯತ್‌ಗಂಜ್‌ನಲ್ಲಿರುವ ಏಕೈಕ ಪ್ರಾಥಮಿಕ ಶಾಲೆ ಇದಾಗಿದೆ. ಹೆಚ್ಚಿನ ಮೂಲಸೌಕರ್ಯವಿಲ್ಲದ ಹಳ್ಳಿ ಇದಾಗಿದೆ. ಹೀಗಾಗಿ ಈ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳ ಮಕ್ಕಳು ಇದೇ ಶಾಲೆಯನ್ನು ಆಶ್ರಯಿಸಿದ್ದಾರೆ. ಇನ್ನು ಶಾಲೆ ಕೂಡ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿರುವ ಶಾಲೆಯಲ್ಲಿ ಇದೀಗ ಹೊಸ ತಲೆನೋವು ಶುರುವಾಗಿದೆ. ಶಿಕ್ಷಕಿ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಕುಡಿತ ದಾರಿ ಹಿಡಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
ಶಿಕ್ಷಕಿಗೆ ಕೌನ್ಸಲಿಂಗ್ ನೀಡಲಾಗುವುದು. ಜೊತೆಗೆ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.