ಶಂಭು ಗಡಿಯಲ್ಲಿ ಅಶ್ರುವಾಯು ಸಿಡಿಸಿ ರೈತರ ಮೇಲೆ ಹೂಮಳೆ ಸುರಿಸಿದ  ಪೊಲೀಸರು

By Kannadaprabha News  |  First Published Dec 9, 2024, 7:08 AM IST

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಆಗ್ರಹಿಸಿ ದೆಹಲಿ ಚಲೋ ಪಾದಯಾತ್ರೆ ನಡೆಸುತ್ತಿದ್ದ ರೈತರ ಮೇಲೆ ಹರ್ಯಾಣ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.


ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾನುವಾರ ಮತ್ತೆ ಆರಂಭವಾದ 101 ರೈತರ ದೆಹಲಿ ಚಲೋ ಪಾದಯಾತ್ರೆಯನ್ನು ಹರ್ಯಾಣದ ಶಂಭು ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಎಚ್ಚರಿಕೆಯ ಹೊರತಾಗಿಯೂ ಬ್ಯಾರಿಕೇಡ್‌ ದಾಟಿ ಶಂಭುಗಡಿ ದಾಟಲು ಮುಂದಾದವರ ಮೇಲೆ ಹರ್ಯಾಣ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದು, 10 ರೈತರು ಗಾಯಗೊಂಡಿದ್ದಾರೆ. ಹೀಗಾಗಿ ಇದೀಗ ಎರಡನೇ ಬಾರಿ ಒಂದು ದಿನದ ಮಟ್ಟಿಗೆ ಪಾದಯಾತ್ರೆಯನ್ನು ರೈತರು ರದ್ದು ಮಾಡಿದ್ದಾರೆ. ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುವುದಾಗಿ ಪಂಜಾಬ್ ರೈತ ಮುಖಂಡ ಸರ್ವಾನ್‌ ಸಿಂಗ್‌ ಹೇಳಿದ್ದಾರೆ.

Tap to resize

Latest Videos

ಶುಕ್ರವಾರವೇ ಈ ರೈತರನ್ನು ತಡೆ ಹಿಡಿಯಲಾಗಿತ್ತು. ಈ ವೇಳೆ ಅವರು, ಸರ್ಕಾರವು ಮಾತುಕತೆ ನಡೆಸಲು ಮುಂದಾದರೆ ಚಲೋ ನಿಲ್ಲಿಸುವುದಾಗಿ ಹೇಳಿದ್ದರು. ಆದರೆ ಸರ್ಕಾರ ಮಾತುಕತೆಗೆ ಮುಂದಾಗದ ಕಾರಣ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಿಸಲು ಮುಂದಾದರು. ಆಗ ರೈತರನ್ನು ಶಂಭು ಗಡಿಯಲ್ಲೇ ತಡೆಹಿಡಿಯಲಾಯಿತು. ‘ದೆಹಲಿ ಆಡಳಿತದ ಅನುಮತಿ ತೋರಿಸದೆ ಯಾರನ್ನೂ ಗಡಿದಾಟಲು ಬಿಡಲ್ಲ ಮತ್ತು ನಮ್ಮ ಬಳಿ ಇರುವ ಪ್ರತಿಭಟನಾಕಾರರ ಪಟ್ಟಿಗೂ ಇಲ್ಲಿ ಸೇರಿರುವವರಿಗೂ ಸಾಕಷ್ಟು ವ್ಯತ್ಯಾಸಗಳಿವೆ’ ಎಂದರು. ಆಗ ಘರ್ಷಣೆ ಸಂಭವಿಸಿದೆ.

ಇದನ್ನೂ ಓದಿ: ಭಾರತದ ಸಾರಿಗೆ ವಲಯದ ಹೊಸ ಯುಗ, ವಿಶ್ವದ ಮೊದಲ ಹೈಪರ್‌ಲೂಪ್ ಟ್ರ್ಯಾಕ್ ಚೆನ್ನೈನಲ್ಲಿ ಉದ್ಘಾಟನೆ!

ಹೂಮಳೆ ಸುರಿಸಿ ಪೊಲೀಸರ ಗಾಂಧಿಗಿರಿ
ಈ ನಡುವೆ ಅಶ್ರುವಾಯು ಪ್ರಯೋಗದ ಬಳಿಕ, ರೈತರ ಮನವೊಲಿಸಲು ಪೊಲೀಸರು ಹೂಮಳೆ ಸುರಿಸಿ ಗಾಂಧಿಗಿರಿ ಯತ್ನವನ್ನೂ ನಡೆಸಿದರು.

ಸಿದ್ಧವಾಗಿ ಬಂದಿದ್ದ ರೈತರು
ಶನಿವಾರದ ಪ್ರತಿಭಟನೆ ವೇಳೆ ಪೊಲೀಸರು ಸಿಡಿಸಿದ ಅಶ್ರುವಾಯುವಿನಿಂದ ಹಲವು ರೈತರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ 2ನೇ ದಿನ ಪೊಲೀಸರ ಅಶ್ರುವಾಯು ಪ್ರಯೋಗ ಎದುರಿಸಲು ಗಾಗಲ್ಸ್‌(ಕನ್ನಡಕ), ಮಾಸ್ಕ್‌ ಸೇರಿ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದ್ದರು. ಪ್ರತಿಭಟನಾನಿರತರು ಬ್ಯಾರಿಕೇಡ್‌ ಸಮೀಪ ಮುನ್ನುಗ್ಗಿದಾಗ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಈ ವೇಳೆ ಮತ್ತೆ ಹಲವರು ಗಾಯಗೊಂಡರು.

ಇದನ್ನೂ ಓದಿ:ವಕ್ಫ್ ಆಸ್ತಿ ಮಾತು ಬಿಡಿ, ಈ ರೈಲು ನಿಲ್ದಾಣದ ಪಕ್ಕದ ಸ್ಥಳ ಪಾಕಿಸ್ತಾನ ಪ್ರಧಾನಿ ಆಸ್ತಿ ಎಂದ ಅಧಿಕಾರಿಗಳು!

click me!