ಬಿಹಾರದಲ್ಲಿ ಬಂಕಾದಲ್ಲಿ ನಡೆಸಿದ ದಾಳಿಯಲ್ಲಿ ನಕಲಿ ಪೊಲೀಸ್ ಸ್ಟೇಷನ್‌ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಂದಾಜು ಎಂಟು ತಿಂಗಳಿನಿಂದ ಇದು ಕಾರ್ಯನಿರ್ವಹಿಸುತ್ತಿತ್ತು. ಪೊಲೀಸ್ ಅಧಿಕಾರಿಯಂತೆ ಕಾರ್ಯನಿರ್ವಹಿಸುತ್ತಿದ್ದ ಪುರುಷ ಹಾಗೂ ಮಹಿಳೆಯನ್ನು ಈ ವೇಳೆ ಬಂಧಿಸಲಾಗಿದೆ.
ನವದೆಹಲಿ (ಆ.18): ಇಲ್ಲಿಯವರೆಗೂ ನಾವು ನಕಲಿ ಪೊಲೀಸ್ ಹಾಗೂ ನಕಲಿ ಅಧಿಕಾರಿಗಳ ಬಗ್ಗೆ ಸುದ್ದಿ ಕೇಳಿದ್ದವು. ಹೈದರಾಬಾದ್‌ನಲ್ಲಿ ನಕಲಿ ಎಸ್‌ಬಿಐ ಬ್ಯಾಂಕ್ ಬಗ್ಗೆಯೂ ಹಿಂದೊಮ್ಮೆ ಸುದ್ದಿಯಾಗಿತ್ತು. ಆದರೆ, ಈ ನಕಲಿಗಳ ಹವಾ ಎಲ್ಲಿಯವರೆಗೆ ಹೋಗಿ ಮುಟ್ಟಿದೆ ಎನ್ನುವುದು ಈ ಸುದ್ದಿ ಓದಿದ ಬಳಿಕ ಅಚ್ಚರಿಯಾಗಬಹುದು. ಬಿಹಾರದ ಬಂಕಾ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ನಕಲಿ ಪೊಲೀಸ್ ಸ್ಟೇಷನ್ ಕಾರ್ಯನಿರ್ವಹಿಸುತ್ತಿತ್ತು. ಇಷ್ಟು ದಿನಗಳ ಕಾಲ ಇದರ ಕಾರ್ಯಾಚರಣೆ ನಡೆದಿದ್ದರೂ, ಊರಿನ ಯಾರೊಬ್ಬರಿಗೂ ಇದರ ಬಗ್ಗೆ ಅನುಮಾನ ಬಂದಿರಲಿಲ್ಲ. ಬಂಕಾದ ಗೆಸ್ಟ್ ಹೌಸ್‌ವೊಂದನ್ನೇ ಇವರು ಪೊಲೀಸ್ ಠಾಣೆಯನ್ನಾಗಿ ಬದಲಾಯಿಸಿದ್ದರು. ಫೋರ್ಜರಿ ಮೂಲಕ ಸ್ಥಳೀಯ ಬಡ ಜನರಿಂದ ಹಣ ವಸೂಲಿ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದರು. ಕಾನ್ಸ್‌ಟೇಬಲ್‌ನಿಂದ ಇನ್‌ಸ್ಪೆಕ್ಟರ್‌ವರೆಗೆ ಇಲ್ಲಿ ವ್ಯಕ್ತಿಗಳಿದ್ದರು. ಯಾರೇ ನೋಡಿದರೂ, ನಿಜವಾದ ಪೊಲೀಸ್ ಆಫೀಸರ್‌ಗಳು ಎನ್ನುವಷ್ಟು ಅದ್ಭುತವಾಗಿ ಇವರೆಲ್ಲಾ ನಾಟಕವಾಡಿದ್ದ ಘಟನೆ ಬೆಳಕಿಗೆ ಬಂದಿದೆ. ಕ್ರಿಮಿನಲ್ ಒಬ್ಬನನ್ನು ಬಂಧಿಸಿ ಠಾಣೆಗೆ ಹಿಂತಿರುಗುತ್ತಿದ್ದ ವೇಳೆ, ಈ ಕುರಿತಾಗಿ ನನಗೆ ಗುಪ್ತ ಮಾಹಿತಿ ಸಿಕ್ಕಿತ್ತು ಎಂದು ಬಂಕಾ ಎಸ್‌ಎಚ್‌ಓ ಶಂಭು ಪ್ರಸಾದ್ ಯಾದವ್ ತಿಳಿಸಿದ್ದಾರೆ.
ಪೊಲೀಸ್ ಠಾಣೆಯ ರೀತಿಯದ್ದ ಬಂಕಾ ಗೆಸ್ಟ್ ಹೌಸ್‌ಗೆ ಹೋದಾಗ, ಅನಾಮಿಕ ಮಹಿಳೆ ಹಾಗೂ ಯುವಕನೊಬ್ಬ ಪೊಲೀಸ್ ಸಮವಸ್ತ್ರದೊಂದಿಗೆ ರಸ್ತೆಯ ಮೇಲೆ ನಿಂತಿದ್ದರು. ಅನುಮಾನ ಬಂದು ಇವರನ್ನು ವಿಚಾರಣೆ ಮಾಡಿದಾಗ ಸಂಪೂರ್ಣ ಮಾಹಿತಿ ತಿಳಿದುಬಂದಿದೆ. ಬಂಧಿಸಿದ ಐವರಲ್ಲಿ ಒಬ್ಬಳು ಪೊಲೀಸ್ ಇನ್ಸ್‌ಪೆಕ್ಟರ್ ಸೋಗಿನಲ್ಲಿದ್ದಳು. ಬಿಹಾರ ಪೊಲೀಸ್‌ನ ಸಮವಸ್ತ್ರವನ್ನು ಆಕೆ ಧರಿಸಿದ್ದಳಲ್ಲದೆ, ಪಿಸ್ತೂಲ್ ಕೂಡ ಹೊಂದಿದ್ದರು. ಇನ್ನೊಂದೆಡೆ, ಆಕಾಶ್ ಕುಮಾರ್ ಎನ್ನುವ ವ್ಯಕ್ತಿ ಈ ನಕಲಿ ಪೊಲೀಸ್ ಸ್ಟೇಷನ್‌ನ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಶಂಭು ಪ್ರಸಾದ್ ಯಾದವ್ ಹೇಳಿದ್ದಾರೆ.
ಹಲವರ ಬಂಧನ: ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದ ಅನಿತಾ ದೇವಿ ಎನ್ನುವ ಹುಡುಗಿಯಿಂದ ಪಿಸ್ತೂಲ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ. ಉನ್ನತ ಅಧಿಕಾರಿಗಳು ತರಬೇತಿಯ ಸಾಧನವಾಗಿ ಈ ಪಿಸ್ತೂಲ್ ನೀಡಿದ್ದಾರೆ ಎಂದು ಅವರು ಹೇಳಿದ್ದರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಮರುನೇಮಕಕ್ಕೆ ಆದೇಶಿಸಿದ್ದಾರೆ ಎಂದು ಅವರು ಜನರಿಗೆ ನಂಬಿಸಿದ್ದರು. ಸುಲ್ತಂಗಂಜ್‌ನ ಖಾನ್‌ಪುರ ನಿವಾಸಿ ಜೂಲಿ ಕುಮಾರಿ ನಕಲಿ ಪೊಲೀಸ್ ಠಾಣೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರು. ಫುಲ್ಲಿದುಮಾರ್‌ನ ಲೋಧಿಯಾ ಗ್ರಾಮದ ರಮೇಶ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಭಾಗಲ್ಪುರ್ ಜಿಲ್ಲೆಯ ಖಾನ್ಪುರ ಮೂಲದ ಆಕಾಶ್ ಕುಮಾರ್ ಎಂಬಾತನನ್ನು ಹಲವು ದಾಖಲೆಗಳು ಮತ್ತು ಪೊಲೀಸ್ ಸಮವಸ್ತ್ರದೊಂದಿಗೆ ಬಂಧಿಸಲಾಗಿದೆ. ಅದರಲ್ಲೂ ಫೇಕ್ ಪೊಲೀಸ್ ಸ್ಟೇಷನ್‌ನಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡಲು ಆಕಾಶ್ ಕುಮಾರ್, ನಕಲಿ ಪೊಲೀಸ್ ಭೋಲಾ ಯಾದವ್‌ಗೆ 70 ಸಾವಿರ ರೂಪಾಯಿಯನ್ನೂ ನೀಡಿದ್ದ. ಕಚೇರಿಯ ಕಾರ್ಯಾಚರಣೆಯಿಂದ ಹಿಡಿದು ಎಲ್ಲ ಸಿಬ್ಬಂದಿಗಳ ಮರುಸ್ಥಾಪನೆ, ಪೊಲೀಸ್ ಸಮವಸ್ತ್ರ, ಅಕ್ರಮ ಪಿಸ್ತೂಲ್ ಒದಗಿಸುವಲ್ಲಿ ಪ್ರಮುಖ ದರೋಡೆಕೋರನಾಗಿ ಫುಲಿದುಮರ್ ನಿವಾಸಿ ಭೋಲಾ ಯಾದವ್ ಹೆಸರು ಹೊರ ಬರುತ್ತಿದೆ.
Bihar Cabinet: ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲೂ ಪ್ರಸಾದ್ ಹಿರಿಯ ಪುತ್ರ ತೇಜ್ ಪ್ರತಾಪ್!
500 ರೂಪಾಯಿ ದಿನಗೂಲಿ: ಪೊಲೀಸ್ ವಿಚಾರಣೆಯ ನಂತರ, ಎಲ್ಲಾ ಆರೋಪಿಗಳು ತಮ್ಮ ಹಿರಿಯ ಅಧಿಕಾರಿ ಭೋಲಾ ಯಾದವ್ ಅವರ ಆದೇಶವನ್ನು ಅನುಸರಿಸುತ್ತಿದ್ದೇವೆ ಎಂದು ಒಪ್ಪಿಕೊಂಡರು. ಆರೋಪಿ ಭೋಲಾ ಯಾದವ್ ಫುಲಿದುಮರ್ ನೆರೆಹೊರೆಯಲ್ಲಿ ವಾಸವಾಗಿದ್ದಾನೆ. ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದಕ್ಕೆ 500 ರೂಪಾಯಿ ದಿನಗೂಲಿ ಪಡೆಯುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಅದರೊಂದಿಗೆ ಅವರ ವೈಯಕ್ತಿಕ ಬಾಣಸಿಗನನ್ನು ಪೊಲೀಸರು ಅತಿಥಿಗೃಹದಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನಿತೀಶ್ ಕುಮಾರ್ ನಿಗೂಢ ಹೆಜ್ಜೆ ಹಿಂದಿನ ರಹಸ್ಯಗಳೇನು?
ಪಾಟ್ನಾ ಸ್ಕಾರ್ಟ್ ಟೀಮ್: ಪಾಟ್ನಾ ಸ್ಕಾರ್ಟ್ ಟೀಮ್ ಹೆಸರಿನಲ್ಲಿ ಬಂಕಾದಲ್ಲಿ ಕಚೇರಿ ನಡೆಸುತ್ತಿದ್ದ ಸಂಪೂರ್ಣ ವಂಚಕರ ತಂಡ ಇದಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸತ್ಯ ಪ್ರಕಾಶ್ ತಿಳಿಸಿದ್ದಾರೆ. ಇಲ್ಲಿಂದ ಪೊಲೀಸ್ ಸಮವಸ್ತ್ರದಲ್ಲಿದ್ದ ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಕಚೇರಿಯಿಂದ ಕೆಲವು ಪೇಪರ್‌ಗಳು, ಬಿಹಾರ ಪೊಲೀಸ್ ಸಮವಸ್ತ್ರಗಳು, ಬ್ಯಾಡ್ಜ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿಯ ಮಾತಿನ ಪ್ರಕಾರ, ಈ ಗ್ಯಾಂಗ್ ಗ್ರಾಮೀಣ ಪ್ರದೇಶದ ಜನರಿಗೆ ಪೊಲೀಸ್ ನೌಕರಿ ಕೊಡಿಸುವ ಭರವಸೆ ನೀಡಿ ವಂಚಿಸುತ್ತಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.