ದೆಹಲಿ ಹಿಂಸಾಚಾರದಲ್ಲಿ ಪೊಲೀಸ್ ಪುಟ್ಟ ಬಾಲಕನಿಗೆ ಲಾಠಿಯಿಂದ ಹೊಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹೇಗೆ ಜನವಿರೋಧಿಯಾಗಿ ವರ್ತಿಸಿತು ಎಂದು ಈ ಫೋಟೋ ಮೂಲಕ ಹೇಳಲಾಗಿದೆ. ನಿಜನಾ ಈ ಸುದ್ದಿ?
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಪರ-ವಿರೋಧಿ ಪ್ರತಿಭಟನೆಯಲ್ಲಿ ಕೆಲ ದಿನಗಳಿಂದ ದೆಹಲಿ ಹೊತ್ತಿ ಉರಿದು ಸದ್ಯ ಅಲ್ಪ ಮಟ್ಟಿಗೆ ತಣ್ಣಗಾಗಿದೆ. ಈ ಕೋಮು ಹಿಂಸಾಚಾರದಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿಂಸಾಚಾರಕ್ಕೆ ಸಂಬಂಧಪಟ್ಟಹಲವು ಫೋಟೋಗಳು ಮನಕಲಕುವಂತಿವೆ.
ಸದ್ಯ ಪೊಲೀಸ್ ಪುಟ್ಟಬಾಲಕನಿಗೆ ಲಾಠಿಯಿಂದ ಹೊಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹೇಗೆ ಜನವಿರೋಧಿಯಾಗಿ ವರ್ತಿಸಿತು ಎಂದು ಈ ಫೋಟೋ ಮೂಲಕ ಹೇಳಲಾಗಿದೆ.
undefined
ಅನಿಲ್ ಕುಮಾರ್ ಯಾದವ್ ಎಂಬುವವರು ಈ ಫೋಟೋವನ್ನು ಪೋಸ್ಟ್ ಮಾಡಿ, ‘ದೆಹಲಿ ಪೊಲೀಸ್ ದೊಡ್ಡ ಭಯೋತ್ಪಾದಕನನ್ನು ಹಿಡಿದು ತಳಿಸುತ್ತಿದ್ದಾರೆ’ ಎಂದು ಹಿಂದಿಯಲ್ಲಿ ಮಾರ್ಮಿಕವಾಗಿ ಒಕ್ಕಣೆ ಬರೆದುಕೊಂಡಿದ್ದು, ಅದು 27,000 ಬಾರಿ ಶೇರ್ ಆಗಿದೆ.
ಆದರೆ ಇಂಡಿಯಾ ಟುಡೇ ಈ ಫೋಟೋ ನಿಜಕ್ಕೂ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ್ದೇ ಎಂದು ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು, ಈ ಫೋಟೋ 10 ವರ್ಷ ಹಿಂದಿನದ್ದು ಎಂಬ ವಾಸ್ತವ ತಿಳಿದಿದೆ. 2010ರಲ್ಲಿ ‘ದ ಗಾರ್ಡಿಯನ್’ ಇದೇ ಫೋಟೋವನ್ನು ಬಳಸಿ ಸುದ್ದಿಯೊಂದನ್ನು ಪ್ರಕಟಿಸಿರುವುದು ಪತ್ತೆಯಾಗಿದೆ.
ಅದರಲ್ಲಿ ‘ಬಾಂಗ್ಲಾದ ಢಾಕಾದಲ್ಲಿ ಗಾರ್ಮೆಂಟ್ ನೌಕರರು ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಾಂಗ್ಲಾ ಪೊಲೀಸ್ ಅಧಿಕಾರಿ ಪುಟ್ಟಮಗುವನ್ನೇ ಥಳಿಸಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ. ಈ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್, ಲಾಠಿ, ವಾಟರ್ ಕ್ಯಾನನ್ ಬಳಸಿದ್ದರು. ಅಲ್ಲಿಗೆ ಈ ಸುದ್ದಿ ದೆಹಲಿ ಹಿಂಸಾಚಾರಕ್ಕೆ ಅಥವಾ ಭಾರತಕ್ಕೆ ಸಂಬಂಧಪಟ್ಟಿದ್ದು ಅಲ್ಲ ಎಂಬುದು ಸ್ಪಷ್ಟ.
- ವೈರಲ್ ಚೆಕ್