
ನವದೆಹಲಿ (ಏ.13): ಹಾಗೇನಾದರೂ ದೇಶದಲ್ಲಿ 2008ರ ಮುಂಬೈ ದಾಳಿಯಂಥ ಇನ್ನೊಂದು ದಾಳಿ ನಡೆದಲ್ಲಿ, ಅದಕ್ಕೆ ನಾವು ಪ್ರತಿಕ್ರಿಯಿಸದೇ ಇದ್ದಲ್ಲಿ, ಅಂಥ ಮತ್ತೊಂದು ದಾಳಿಯನ್ನು ತಡೆಯೋದು ಹೇಗೆ ಸಾಧ್ಯ? ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಭಯೋತ್ಪಾದಕರು ಗಡಿಯ ಇನ್ನೊಂದು ಬದಿಯಲ್ಲಿದ್ದಾರೆ ಎಂಬ ಕಾರಣಕ್ಕೆ "ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ" ಎಂದು ಭಾವಿಸಬಾರದು ಎಂದೂ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದಕರು ಯಾವುದೇ ನಿಯಮವಿಟ್ಟುಕೊಂಡು ದಾಳಿ ಮಾಡೋದಿಲ್ಲ. ಭಯೋತ್ಪಾದಕರಿಗೆ ಉತ್ತರ ನೀಡುವಾಗಲೂ ಕೂಡ ನಾವು ಯಾವುದೇ ನಿಯಮಗಳನ್ನು ಹೊಂದಿರಬಾರದು ಎಂದು ಶುಕ್ರವಾರ ಸಂಜೆ ಪುಣೆಯಲ್ಲಿ ತಮ್ಮ ಪುಸ್ತಕದ "ವೈ ಭಾರತ್ ಮ್ಯಾಟರ್ಸ್" ಕುರಿತು ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ವೇಳೆ ಭಾರತವು ಯಾವ ದೇಶದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಇರಿಸಿಕೊಳ್ಳಲು ಕಷ್ಟಪಡುತ್ತಿದ್ದ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, 'ಒಂದು ನಮ್ಮ ಪಕ್ಕದಲ್ಲೇ ಇದೆ. ಇಂದಿನ ಅತಿದೊಡ್ಡ ಸವಾಲು ಏನೆಂದರೆ, ಪ್ರಮಾಣಿಕವಾಗಿ ಹೇಳುತ್ತೇನೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಪಾಕಿಸ್ತಾನದ ಜೊತೆಗಿನ ರಿಲೇಷನ್ ಬಹಳ ಕಷ್ಟ' ಎಂದಿದ್ದಾರೆ. ಮೊದಲಿನಿಂದಲೂ ಸ್ಪಷ್ಟವಾಗಿ ತಿಳಿದಿದ್ದು ಏನೆಂದರೆ, ಪಾಕಿಸ್ತಾನ ಭಯೋತ್ಪಾದನೆಯನ್ನೇ ಬಳಸಿಕೊಳ್ಳುತ್ತಿದೆ. ಆದರೆ, ನಮ್ಮ ಸರ್ಕಾರ ಇದನ್ನುಯಾವುದೇ ಸಂದರ್ಭದಲ್ಲಿ ಸಹಿಸಿಕೊಳ್ಳುತ್ತಿರಲಿಲ್ಲ. ಭಯೋತ್ಪಾದನೆಯ ವಿಚಾರವಾಗಿ ನಮ್ಮದು ಬಹಳ ಭಿನ್ನ ನೀತಿ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದರು. ಆದರೆ, ಪಾಕಿಸ್ತಾನದ ಸಮಸ್ಯೆ 2014ರ ನಂತರ ಅಥವಾ 2008ರ ಮುಂಬೈ ದಾಳಿ ನಂತರ ಶುರುವಾಗಿದ್ದಲ್ಲ. 1947ರಿಂದಲೇ ಪಾಕಿಸ್ತಾನದ ಸಮಸ್ಯೆ ಶುರುವಾಗಿದೆ ಎಂದಿದ್ದಾರೆ. "1947 ರಲ್ಲಿ, ಪಾಕಿಸ್ತಾನದ ಮೊದಲ ಜನರು ಕಾಶ್ಮೀರಕ್ಕೆ ಬಂದು ಅದರ ಮೇಲೆ ದಾಳಿ ಮಾಡಿದಾಗ, ಅದು ಭಯೋತ್ಪಾದನೆಯಾಗಿತ್ತು. ನಗರಗಳು ಮತ್ತು ಹಳ್ಳಿಗಳನ್ನು ಸುಟ್ಟುಹಾಕಲಾಯಿತು ಮತ್ತು ಅವರು ಜನರನ್ನು ದೊಡ್ಡ ಪ್ರಮಾಣದಲ್ಲಿ ಕೊಂದು ಹಾಕಿದರು. ಇವರು ಪಾಕಿಸ್ತಾನದ ವಾಯುವ್ಯ ಮುಂಭಾಗದ ಬುಡಕಟ್ಟು ಜನಾಂಗದವರು. ಕಾಶ್ಮೀರದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹಾಳುಮಾಡಲು ಪಾಕಿಸ್ತಾನ ಸೇನೆಯು ಮುಂಚೂಣಿಯಲ್ಲಿತ್ತು. ಈ ಬುಡುಕಟ್ಟು ಜನಾಂಗದ ವ್ಯಕ್ತಿಗಳಿಗೆ ನಿಮ್ಮ ಜೊತೆಯಲ್ಲೇ ನಾವು ಬರುತ್ತೇವೆ ಅನ್ನೋ ವಿಶ್ವಾಸ ಮೂಡಿಸಿ ದಾಳಿಯ ಸಂಚು ರೂಪಿಸುತ್ತಿದ್ದರು ಎಂದಿದ್ದಾರೆ.
ನಾವು ಸೈನ್ಯವನ್ನು ಕಳಿಸಿ ಕಾಶ್ಮೀರದ ಏಕೀಕರಣ ಮಾಡಿಕೊಂಡೆವು. ಭಾರತದ ಸೇನೆ ತನ್ನ ಕ್ರಮ ತೆಗೆದುಕೊಳ್ಳುವ ಹಂತದಲ್ಲಿ, ನಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿ ವಿಶ್ವಸಂಸ್ಥೆಯ ಮುಂದೆ ಹೋಗಿದ್ದವು. ಯಾವುದೇ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ, ಅಥವಾ ಯಾವುದೇ ನೆರೆಹೊರೆಯವರು ಅಥವಾ ಯಾರಾದರೂ ಭಯೋತ್ಪಾದನೆಯನ್ನು ಸಮಾಲೋಚನಾ ಟೇಬಲ್‌ಗೆ ತರಲು ಬಳಸಿದರೆ, ಇದನ್ನು ಎಂದಿಗೂ ಒಪ್ಪಿಕೊಳ್ಳಬಾರದು ಎಂದಿದ್ದಾರೆ.
ಭಾರತದ ವಿದೇಶಾಂಗ ನೀತಿಯಲ್ಲಿ ನಿರಂತರತೆಯ ಕುರಿತು ಮಾತನಾಡಿದ ಜೈಶಂಕರ್, "ಶೇ 50 ರಷ್ಟು ನಿರಂತರತೆ ಇದೆ ಮತ್ತು ಶೇಕಡಾ 50 ರಷ್ಟು ಬದಲಾವಣೆ ಆಗಿದೆ" ಎಂದು ಹೇಳಿದರು. ಅದರಲ್ಲಿ ಒಂದು ಪ್ರಮುಖ ಬದಲಾವಣೆ ಆಗಿರುವುದು ಭಯೋತ್ಪಾದನೆಯ ಬಗ್ಗೆ. 2008ರ ಮುಂಬೈ ದಾಳಿಯ ಬಳಿಕ ಭಾರತ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಿತ್ತು ಅಂದು ಎಲ್ಲಾ ಭಾರತೀಯರು ಬಯಸಿದ್ದರು. ಆದರೆ, ಅಂದಿನ ಯುಪಿಎ ಸರ್ಕಾರ ಸಾಕಷ್ಟು ಬಾರಿ ಈ ವಿಚಾರದಲ್ಲಿ ಚರ್ಚೆಗಳನ್ನೂ ನಡೆಸಿದ ಬಳಿಕ, ಪಾಕಿಸ್ತಾನಕ್ಕೆ ದಾಳಿ ಮಾಡುವ ಇಂಗಿತಕ್ಕಿಂತ ದಾಳಿ ಮಾಡದೇ ಇರುವ ಇಂಗಿತವೇ ಹೆಚ್ಚಾಗಿ ಬಲ ಪಡೆದುಕೊಂಡಿತು ಎಂದಿದ್ದಾರೆ.
ದೇಶ ವಿಭಜನೆ ಆಗಲೇ ಇಲ್ಲ ಎಂಬಂತೆ ವಿಶ್ವ ಪ್ರತಿಕ್ರಿಯಿಸುತ್ತಿದೆ, ಅಮೆರಿಕದ ಸಿಎಎ ಹೇಳಿಕೆಗೆ ಜೈಶಂಕರ್ ತಿರುಗೇಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ