ಭಾರತೀಯರನ್ನು ತಾಯ್ನಾಡಿಗೆ ಕರೆದೊಯ್ಯುವ ಹೆಮ್ಮೆ ನಮ್ಮದು | ಸೀಲ್ (ಐತಿಹಾಸಿಕ ಏರ್‌ಲಿಫ್ಟ್‌ನ ಮೊದಲ ವಿಮಾನದ ಪೈಲಟ್ ಸಂದೇಶ) | ವಂದೇ ಭಾರತ್ ಮಿಷನ್‌ನಡಿ ನಾವು 35000 ಅಡಿ ಎತ್ತರದಲ್ಲಿದ್ದೇವೆ | ನೌಕಾಪಡೆ ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆ ನಡೆಸುತ್ತಿದೆ
ಬೆಂಗಳೂರು (ಮೇ. 09): ಕೊರೋನಾ ವೈರಸ್ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್‌ಡೌನ್‌ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ ‘ವಂದೇ ಭಾರತ್ ಮಿಷನ್’ ಗುರುವಾರ ಆರಂಭವಾಗಿದೆ.
ಅಬುಧಾಬಿ ಹಾಗೂ ದುಬೈನಿಂದ 354 ಪ್ರಯಾಣಿಕರನ್ನು ಹೊತ್ತ ಎರಡು ವಿಮಾನಗಳು ಕೇರಳದಲ್ಲಿ ರಾತ್ರಿ ಬಂದಿಳಿದಿವೆ. ಹೀಗೆ ಬಂದಿಳಿದ ವಿಮಾನದ ಪೈಲಟ್‌ಗಳು ಮತ್ತು ಇತರೆ ಸಿಬ್ಬಂದಿ ಕೂಡಾ ಸುರಕ್ಷಿತೆಯ ದೃಷ್ಟಿಯಿಂದ ಪಿಪಿಇ ಕಿಟ್ ಧರಿಸಿದ್ದು ಗಮನ ಸೆಳೆಯಿತು.
ಆಪರೇಷನ್ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್: ಭಾರತೀಯರ ಕರೆತಂದ ತುಳುನಾಡ ಕುವರ!
ಈ ಪೈಕಿ ದುಬೈನಿಂದ ಕೊಚ್ಚಿಗೆ ಹೊರಟಿದ್ದ ವಿಮಾನ ಸಿಬ್ಬಂದಿ, ವಿಮಾನವು ನಿಲ್ದಾಣದಿಂದ ಹೊರಡುವ ಮುನ್ನ, ಪ್ರಯಾಣಿಕರನ್ನು ಉದ್ದೇಶಿಸಿ ಆಡಿದ ಮಾತುಗಳು ಎಲ್ಲರ ಗಮನ ಸೆಳೆದಿದೆ. ಈ ವೇಳೆ ಪೈಲಟ್ ಆಡಿದ ಮಾತಿನ ಪೂರ್ಣಪಾಠ ಹೀಗಿದೆ.
ನಮಸ್ಕಾರ. ನಾನು ನಿಮ್ಮ ಕ್ಯಾಪ್ಟನ್ ಅಚಲ್ ಶೋರಾ. ಏರ್ ಇಂಡಿಯಾ ಎಕ್ಸಪ್ರೆಸ್‌ಗೆ ನಿಮಗೆಲ್ಲಾ ಸ್ವಾಗತ. ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯನ್ನು ಸ್ವದೇಶಕ್ಕೆ ಕೊಂಡೊಯ್ಯಲು ‘ವಂದೇ ಭಾರತ್ ಮಿಷನ್’ ಅಡಿ ಹೊರಟ ಮೊದಲ ವಿಮಾನ ಇದು. ಭಾರತದ ಇತಿಹಾಸದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಮೊದಲ ವಿಮಾನ ಐಎಕ್ಸ್ 452ನಲ್ಲಿ ನಿಮ್ಮನ್ನಲ್ಲಾ ಕರೆದೊಯ್ಯುವ ಅವಕಾಶ ಸಿಕ್ಕಿರುವುದು ನನಗೆ ಮತ್ತು ನನ್ನ ತಂಡಕ್ಕೆ ಸಿಕ್ಕ ದೊಡ್ಡ ಗೌರವ.
ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ 7 ವಾರಗಳ ನಂತರ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭವಾಗಿದೆ. ಭಾರತದಲ್ಲಿ ದೇಶೀಯ ಪ್ರಯಾಣಿಕ ವಿಮಾನಗಳೂ ಹಾರಾಡುತ್ತಿಲ್ಲ. ಅಬುಧಾಬಿಯಿಂದ ಹೊರಟಿರುವ ಈ ವಿಮಾನವು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ತಲುಪಬಹುದು. ಅರಬ್ಬಿ ಸಮುದ್ರದಿಂದ 35,000 ಅಡಿ ಎತ್ತರಕ್ಕೆ ನಾವು ಹಾರಾಡಲಿದ್ದೇವೆ.
ಇದೇ ರೀತಿ ಭಾರತೀಯ ನೌಕಾಪಡೆ ಕೂಡ ‘ಆಪರೇಷನ್ ಸಮುದ್ರ ಸೇತು’ ಹೆಸರಿನಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರಾರಯಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ಭಾಗಿಯಾಗಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ನನ್ನ ಜೊತೆ ಇರುವ ಕ್ಯಾಪ್ಟನ್ ರಸ್‌ಬಿನ್, ವಿಮಾನದ ಸಿಬ್ಬಂದಿ ಅಂಜನಾ, ತಾಶಿ, ಪ್ರಿಯಾಂಕಾ, ದೀಪಕ್ ಮತ್ತು ನಾನು ಕೊರೋನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ.
ಗ್ರೀನ್ ಝೋನ್ ಉಡುಪಿಗೆ ಬರಲಿದ್ದಾರೆ 20 ಸಾವಿರ ಮಂದಿ..! ಕೊರೋನಾತಂಕ
ನಿಮ್ಮ ಸುರಕ್ಷೆಗೆ ನಾವು ಸದಾ ಬದ್ಧ. ನೀವೂ ಕೂಡ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಅನುಸರಿಸಿ. ಈ ಐತಿಹಾಸಿಕ ಕಾರಾರಯಚರಣೆಯು ಪವಿತ್ರ ಬುದ್ಧ ಪೂರ್ಣಿಮೆಯಂದು ಪ್ರಾರಂಭವಾಗಿದೆ. ನನಗೆ ಗೊತ್ತಿದೆ, ಇಂಥ ಸಂದಿಗ್ಧ ಸಮಯದಲ್ಲಿ ನಿಮ್ಮ ಕುಟುಂಬ, ಸ್ನೇಹಿತರು ಅಷ್ಟೇ ಏಕೆ ಇಡೀ ದೇಶ ನಿಮಗಾಗಿ ಕಾಯುತ್ತಿದೆ. ನಾವು ಮಾಸ್ಕ್ ಧರಿಸಿದ್ದರೂ ಅದರಡಿಯಲ್ಲಿ ನಿಮಗಾಗಿ ಎಂದಿನಂತೆ ಮುಗುಳ್ನಗುತ್ತಲೇ ಸೇವೆ ನೀಡುತ್ತೇವೆ. ನಿಮಗೆಲ್ಲರಿಗೂ ರಂಜಾನ್ ಮತ್ತು ಈದ್ ಶುಭಾಶಯಗಳು. ನಮ್ಮವರೆಲ್ಲ ತಾಯ್ನಾಡಿಗೆ ಮರಳುತ್ತಿದ್ದಾರೆ. ಜೈ ಹಿಂದ್.