ಬಾರಾಮತಿ ಕ್ಷೇತ್ರದ ಉಪ ಚುನಾವಣೆ: ಅತ್ತಿಗೆ ಸುನೇತ್ರಾ ಪವಾರ್ ವಿರುದ್ಧ NCP ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ

Published : Mar 16, 2026, 10:12 PM IST
Ajit Pawar Wife Sunetra Pawar

ಸಾರಾಂಶ

ವಿಮಾನ ದುರಂತದಲ್ಲಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಎನ್‌ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲಎಂದು ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ.

ಅತ್ತಿಗೆ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ:

ಮಹಾರಾಷ್ಟ್ರ ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ ನಂತರ ಅವರ ಸಾವಿನಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗವೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಜೊತೆಗೆ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ಮಹಾರಾಷ್ಟ್ರದ ಬಾರಾಮತಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯನ್ನು ಘೋಷಿಸಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಹಾರಾಷ್ಟ್ರದಲ್ಲಿ ಉಪ ಚುನಾವಣೆ ಏಪ್ರಿಲ್ 23 ರಂದು ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಇಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಸುಪ್ರಿಯಾ ಸುಳೆ, ಬಾರಾಮತಿಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ವಿರುದ್ಧ ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದರು. ಸುನೇತ್ರಾ ಪವಾರ್ ಅವರು ಸುಪ್ರಿಯಾ ಸುಳೆ ಅವರಿಗೆ ಅತ್ತಿಗೆ ಆಗಿದ್ದಾರೆ.

ಮಹಾರಾಷ್ಟ್ರದ 2 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಬಿಜೆಪಿ ಶಾಸಕ ಶಿವಾಜಿ ಕಾರ್ಡಿಲೆ ಅವರ ನಿಧನದ ನಂತರಪುಣೆಯ ಬಾರಾಮತಿ ಮತ್ತು ಅಹಲ್ಯಾನಗರದ ರಾಹುರಿ ವಿಧಾನಸಭಾ ಸ್ಥಾನಕ್ಕೆ ಏಪ್ರಿಲ್ 23 ರಂದು ಉಪ ಚುನಾವಣೆ ನಡೆಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ರಾಹುರಿ ಸ್ಥಾನಕ್ಕೆ ಸಂಬಂಧಿಸಿದಂತೆ, ಮಹಾ ವಿಕಾಸ್ ಅಘಾಡಿ (ಎಂವಿಎ) ಪಾಲುದಾರರು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರವನ್ನು ಅಂತಿಮಗೊಳಿಸುತ್ತಾರೆ ಎಂದು ಸುಪ್ರಿಯಾ ಸುಳೆ ಹೇಳಿದರು.

ಮತ್ತೊಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಒಮ್ಮತದ ಮೂಲಕ ಉಪಚುನಾವಣೆಯನ್ನು ಅವಿರೋಧವಾಗಿ ನಡೆಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಹಾಗಿದ್ದೂ, ಅಗತ್ಯವಿದ್ದರೆ ಬಿಜೆಪಿ ಸ್ಪರ್ಧಿಸಲು ಸಿದ್ಧವಾಗಿದೆ ಎಂದು ಒತ್ತಿ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಅತ್ತಿಗೆಯನ್ನು ಸೋಲಿಸಿದ್ದ ಸುಪ್ರಿಯಾ ಸುಳೆ

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಬಾರಮತಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಸುನೇತ್ರಾ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ ಇತ್ತಿಚೆಗೆ ಜನವರಿ 28ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಸುನೇತ್ರಾ ಪತಿ ಅಜಿತ್ ಪವಾರ್ ಅವರು ನಿಧನರಾಗಿದ್ದು, ಅವರ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಈ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸೇರಿ ಒಟ್ಟು 5 ಜನ ಸಾವನ್ನಪ್ಪಿದ್ದರು. ಪತಿ ಅಜಿತ್ ಪವಾರ್ ಸಾವಿನ ನಂತರ ಸುನೇತ್ರಾ ಅವರಿಗೆ ಮಹಾರಾಷ್ಟ್ರ ಡಿಸಿಎಂ ಪಟ್ಟ ನೀಡಲಾಗಿದೆ.

ಇದನ್ನೂ ಓದಿ: ಒಡಿಶಾದಲ್ಲಿ ರಣ ಭೀಕರ ಸುಂಟರಗಾಳಿಗೆ ಇಬ್ಬರು ಬಲಿ: 70ಕ್ಕೂ ಹೆಚ್ಚು ಮನೆಗಳಿಗೆ ಹಾನಿ: ವೀಡಿಯೋ ವೈರಲ್

ಭಾನುವಾರ(ಮಾರ್ಚ್15)ರಂದು ನಾಲ್ಕು ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಭಾರತೀಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಪುದುಚೇರಿ, ಅಸ್ಸಾಂ ಮತ್ತು ಕೇರಳದಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ, ಎಲ್ಲಾ 234 ಸ್ಥಾನಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಹಾಗೆಯೇ 294 ಸದಸ್ಯ ಬಲದ ಪಶ್ಚಿಮ ಬಂಗಾಳಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. 152 ಸ್ಥಾನಗಳಿಗೆ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದ್ದು, ಉಳಿದ 142 ಸ್ಥಾನಗಳಿಗೆ ಏಪ್ರಿಲ್ 29 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳ ಫಲಿತಾಂಶ ಮೇ 4 ರಂದು ಬರಲಿದೆ. ಇದರ ಜೊತೆಗೆ ಗೋವಾ, ಗುಜರಾತ್, ಮಹಾರಾಷ್ಟ್ರದ 2 , ಹಾಗೂ ಕರ್ನಾಟಕದ 2 ಮತ್ತು ತ್ರಿಪುರಾದ 1 ಸೇರಿ 8 ಕ್ಷೇತ್ರಗಳಿಗೆ ಇದೇ ಸಂದರ್ಭದಲ್ಲಿ ಉಪಚುನಾವಣೆ ನಡೆಯಲಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಉಪಚುನಾವಣೆಗಳು ಏಪ್ರಿಲ್ 23 ರಂದು ನಡೆಯಲಿದ್ದು, ಉಳಿದ ಕ್ಷೇತ್ರಗಳಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿವೆ.

ಇದನ್ನೂ ಓದಿ: ಹರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಬಿಡಿಸಲು ಚೀನಾಗೆ ಬೆದರಿಸುತ್ತಲೇ ನ್ಯಾಟೋ ರಾಷ್ಟ್ರಗಳ ಸಹಾಯ ಕೇಳಿದ ಟ್ರಂಪ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಯುದ್ಧದ ನಡುವೆಯೇ ಶಾಂತವಾಗಿ ಭಾರತ ಸೇರಿದ 'ಶಿವಾಲಿಕ್'​! ಗ್ಯಾಸ್​ ಸಮಸ್ಯೆಗೆ ಶೀಘ್ರ ಮುಕ್ತಿ
ರಣ ಭೀಕರ ಸುಂಟರಗಾಳಿಗೆ ಹಾರಿ ಹೋದ್ರು ನಡೆದು ಹೋಗುತ್ತಿದ್ದ ಜನ, ವಾಹನ: ಇಬ್ಬರು ಸಾವು: ವೀಡಿಯೋ