ದೆಹಲಿ ಕೋರ್ಟ್ ಮಧ್ಯಂತರ ಪರಿಹಾರ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ತಂಡ ಆಗಮಿಸಿದೆ.
ನವದೆಹಲಿ (ಮಾ.21): ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಮನ್ಸ್ ನೀಡಲು ಜಾರಿ ನಿರ್ದೇಶನಾಲಯದ (ಇಡಿ) ತಂಡವೊಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಆಗಮಿಸಿದೆ. ಸುಮಾರು ಎಂಟು ತನಿಖಾ ಅಧಿಕಾರಿಗಳು ಹಾಜರಿದ್ದು, ಆಪ್ ನಾಯಕನ ನಿವಾಸದಲ್ಲೂ ಶೋಧ ನಡೆಯುತ್ತಿದೆ ಎಂದು ವರದಿಗಳಾಗಿವೆ. ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಎಎಪಿ ನಾಯಕನಿಗೆ ಮಧ್ಯಂತರ ಪರಿಹಾರವನ್ನು ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಇನ್ನೊಂದೆಡೆ, ಹಾಗೇನಾದರೂ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾದಲ್ಲಿ ತಕ್ಷಣವೇ ಸುಪ್ರೀಂ ಕೋರ್ಟ್ ಕದ ತಟ್ಟಲು ಆಪ್ ಕೂಡ ಸಿದ್ದವಾಗಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕರಿಗೆ 10 ನೇ ಸಮನ್ಸ್ ನೀಡಲು ತನಿಖಾ ತಂಡವು ಅಲ್ಲಿಗೆ ಆಗಮಿಸಿದೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಜ್ರಿವಾಲ್: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಬಲವಂತದ ಕ್ರಮದಿಂದ ಯಾವುದೇ ಮಧ್ಯಂತರ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಇಂದು ನಿರಾಕರಿಸಿದ ಬೆನ್ನಲ್ಲಿಯೇ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಷಯದ ಬಗ್ಗೆ ತುರ್ತು ಪಟ್ಟಿ ಮತ್ತು ವಿಚಾರಣೆಗೆ ಕಾನೂನು ತಂಡ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ಇ ಡಿ ಅಧಿಕಾರಿಗಳಿಂದ ಅರವಿಂದ್ ಕೇಜ್ರಿವಾಲ್ ವಿಚಾರಣೆ ಆರಂಭವಾಗಿದೆ. PMLA ಸೆಕ್ಷನ್ 50ರ ಅಡಿ ಪ್ರಕರಣ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಡಿ ಜಂಟಿ ಆಯುಕ್ತ ಕಪಿಲ್ ರಾಜ್ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದೆ. ಕೆಲ ಸಮಯದ ಹಿಂದೆ ಕೇಜ್ರಿವಾಲ್ ನಿವಾಸಕ್ಕೆ ಅಧಿಕಾರಿಗಳು ಆಗಮಿಸಿದ್ದರು. ಅವರ ಮನೆಯಲ್ಲಿಯೇ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳೂ ತಿಳಿಸಿವೆ. ಈಗಾಗಲೇ 9 ಬಾರಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು. ಕೇಜ್ರಿವಾಲ್ ಮನೆ ಮುಂದೆ ಪೊಲೀಸರು ಕೂಡ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಲೋಕಸಭಾ ಚುನಾವಣೆ ಬೆನ್ನಲ್ಲೇ, ಇಡಿ ಸುಳಿಯಲ್ಲಿ ವಿಪಕ್ಷಗಳ ಪ್ರಮುಖ ನಾಯಕರು! ಯಾರ‍್ಯಾರು?
ದೆಹಲಿ ಸಚಿವ ಹಾಗೂ ಆಪ್ ನಾಯಕ ಸೌರಭ್ ಭಾರದ್ವಾಜ್ ಈ ಬಗ್ಗೆ ಮಾತನಾಡಿದ್ದು ''ಸಿಎಂ ಮನೆಯೊಳಗೆ ಪೊಲೀಸರು ಇರುವ ರೀತಿ ಮತ್ತು ಯಾರಿಗೂ ಪ್ರವೇಶ ನೀಡದ ರೀತಿ ನೋಡಿದರೆ ಸಿಎಂ ಮನೆ ಮೇಲೆ ದಾಳಿ ನಡೆದಿದೆ. ಸಿಎಂ ಬಂಧನಕ್ಕೆ ಸಿದ್ಧತೆ ನಡೆದಿದೆ'' ಎಂದು ಹೇಳಿದ್ದಾರೆ. ಇಡಿ ಮತ್ತು ಅವರ ಮಾಲೀಕರಾದ ಬಿಜೆಪಿಯು ನ್ಯಾಯಾಲಯಗಳನ್ನು ಗೌರವಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ದೆಹಲಿ ಸಚಿವ ಮತ್ತು ಎಎಪಿ ನಾಯಕ ಅತಿಶಿ ಹೇಳಿದ್ದಾರೆ. ಇದು ರಾಜಕೀಯ ಪಿತೂರಿ ಮತ್ತು ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ 5ನೇ ಸಮನ್ಸ್‌ಗೂ ಕ್ಯಾರೇ ಅನ್ನದ ಕೇಜ್ರಿವಾಲ್
(ಸುದ್ದಿ ಅಪ್‌ಡೇಟ್ ಆಗುತ್ತಿದೆ)