
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಾಲ್ವರು ಭಯೋತ್ಪಾದಕರ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರಳಿಸಲಾಗಿದೆ ಎಂದು ವರದಿಯಾಗಿದೆ. ಭಾರತೀಯ ಸೇನೆ ಮತ್ತು ಸ್ಥಳೀಯ ಅರೆ ಸೇನಾ ಪಡೆ ಈ ಕಾರ್ಯಾಚರಣೆಯಲ್ಲಿದ್ದು ಶೋಪಿಯಾನ್ ಗೂ ಮುನ್ನ ಪಕ್ಕದ ಕುಲ್ಗಾಮ್ ಜಿಲ್ಲೆಯಲ್ಲಿ ಕೂಬಿಂಗ್ ಆರಂಭವಾಯಿತು . ಕಾರ್ಯಾಚರಣೆಯಲ್ಲಿ 2 ಲಷ್ಕರ್-ಎ-ತೈಬಾ ಸಂಘಟನೆಗೆ ಭಯೋತ್ಪಾದಕರು ಸಾವನ್ನಪ್ಪಿದ್ದು, ಓರ್ವ ಕಾಶ್ಮೀರದ ಸ್ಥಳೀಯ ಉಗ್ರ ಎಂದು ವರದಿ ತಿಳಿಸಿದೆ. ದಕ್ಷಿಣ ಕಾಶ್ಮೀರ ಕುಲ್ಗಾಮ್ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಈ ಕಾರ್ಯಚರಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸದ್ಯ ಓರ್ವ ಉಗ್ರನಿರುವ ಬಗ್ಗೆ ಮಾಹಿತಿ ಇದ್ದು ಕಾರ್ಯಾಚರಣೆ ಮುಂದುವರೆದಿದೆ.
ಇದಕ್ಕೂ ಮುನ್ನ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ ಬಹುಮಾನ ನೀಡುವುದಾಗಿ ಕೇಂದ್ರ ಗೃಹ ಇಲಾಖೆ ಘೋಷಿಸಿರು ಪೋಸ್ಟರ್ ಅನ್ನು ಜಮ್ಮು ಕಾಶ್ಮೀರದಾದ್ಯಂತ ಅಂಟಿಸಲಾಗಿತ್ತು. ಇದಾದ ಸ್ವಲ್ಪ ಸಮಯದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಸ್ಥಳೀಯ ಅರೆ ಸೇನಾ ಪಡೆ ಕೂಬಿಂಗ್ ನಡೆಸಿದೆ. ಭಯೋತ್ಪಾದಕರನ್ನು ನಿಷ್ಕ್ರಿಯಗೊಳಿಸಲು ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ಜಂಟಿ ತಂಡಗಳು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ಇದಕ್ಕೂ ಮೊದಲು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ಈ ಹೀನಕೃತ್ಯಕ್ಕೆ ಪ್ರತಿಯಾಗಿ ಭಾರತ 'ಆಪರೇಷನ್ ಸಿಂದೂರ್' ಎಂಬ ಹೆಸರಿನಲ್ಲಿ ಪಾಕ್ ಬೆಂಬಲಿತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪ್ರತೀಕಾರಾತ್ಮಕ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತವು ವೈಮಾನಿಕ ದಾಳಿ ನಡೆಸಿತು. ಇದಾದ ನಂತರ ಪಾಕಿಸ್ತಾನ ಸೇನಾ ದಾಳಿ ನಡೆಸಿತು. ಪ್ರತ್ಯುತ್ತರವಾಗಿ ಭಾರತ ಕೂಡ ತೀವ್ರವಾಗಿ ಸೇನಾ ಕಾರ್ಯಾಚರಣೆ ನಡೆಸಿ ಪ್ರಬಲ ಉತ್ತರ ನೀಡಿತು. ತದ ನಂದರ ಕದನ ವಿರಾಮ ಘೋಷಿಸಲಾಯ್ತು. ಆದ್ರೆ ಭಾರತ ಮಾತ್ರ ಉಗ್ರರ ವಿರುದ್ಧ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ದಾಳಿಯನ್ನೂ ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಬಲವಾದ ಪ್ರತಿಕ್ರಿಯೆ ಪಾಕಿಸ್ತಾನಕ್ಕೆ ನೀಡಿದೆ.
ಪಹಲ್ಗಾಮ್ ದಾಳಿಯ ಕೆಲವೇ ದಿನಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಏಪ್ರಿಲ್ 25 ರಂದು ಬಿಜ್‌ಬೆಹರಾದಲ್ಲಿರುವ ಉಗ್ರ ಥೋಕರ್ ನ ನಿವಾಸವನ್ನು ಐಇಡಿಗಳನ್ನು ಬಳಸಿ ಸ್ಫೋಟಿಸಿ ಧ್ವಂಸ ಮಾಡಿದ್ದರು. ಸುಂದರವಾದ ಪಹಲ್ಗಾಮ್ ನ ಬೈಸರನ್ ಕಣಿವೆಯ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ದಾಳಿ ನಡೆಸಲು ಥೋಕರ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಬಲವಾಗಿ ನಂಬಲಾಗಿದೆ. 2018 ರಲ್ಲಿ ಥೋಕರ್ ಅಟ್ಟಾರಿ-ವಾಘಾ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿ ಬಳಿಕ ಕಳೆದ ವರ್ಷ ಕಣಿವೆ ಮೂಲಕ ಮರಳಿ ಭಾರತಕ್ಕೆ ಬಂದಿದ್ದನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ