
ಗಾಜಿಯಾಬಾದ್: 13 ವರ್ಷದಿಂದ ಕೋಮಾದಲ್ಲಿದ್ದು, ಮಂಗಳವಾರ ದಯಾಮರಣದ ಮೂಲಕ ಇಹಲೋಕ ತ್ಯಜಿಸಿದ ಹರೀಶ್ ರಾಣಾ (31) ಅವರ ಅಂತ್ಯಕ್ರಿಯೆಯನ್ನು ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸ್ಮಶಾನದಲ್ಲಿ ಬುಧವಾರ ನೆರವೇರಿಸಲಾಯಿತು.
ಹರೀಶ್ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ ಎಂದು ಬ್ರಹ್ಮಕುಮಾರಿಯ ಸೋದರಿ ಲವ್ಲಿಯವರು ತಿಳಿಸಿದರು.‘ನನ್ನ ಮಗ ಈಗ ಸುಖಮಯ ಸ್ಥಾನದಲ್ಲಿದ್ದಾನೆ. ಯಾರೂ ಅಳಬೇಡಿ’ ಎಂದು ಅಂತ್ಯಕ್ರಿಯೆಗೆ ಬಂದಿದ್ದವರ ಬಳಿ ವಿನಂತಿ ಮಾಡುತ್ತಾ, ಹರೀಶ್ ಅವರ ತಂದೆ ಅಶೋಕ್ ರಾಣಾ ಮಗನಿಗೆ ಭಾವುಕ ವಿದಾಯ ಹೇಳಿದರು. ಪಂಜಾಬ್ ವಿವಿಯಲ್ಲಿ ಓದುತ್ತಿದ್ದ ಹರೀಶ್, 2013ರಲ್ಲಿ 4ನೇ ಮಹಡಿಯಿಂದ ಬಿದ್ದು ಕೋಮಾ ಸ್ಥಿತಿ ತಲುಪಿದ್ದರು. ಕೃತಕ ಜೀವರಕ್ಷಕಗಳಿಂದ ಉಸಿರಾಡುತ್ತಿದ್ದ ಅವರಿಗೆ ದೇಶದಲ್ಲೇ ಮೊದಲ ಬಾರಿ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಮಾ.24ರಂದು ಅವರು ನಿಧನರಾಗಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ 28,480 ಕೋಟಿ ರು. ಅಂದಾಜು ವೆಚ್ಚದ 10 ವರ್ಷಗಳ ಅವಧಿಯ ಪರಿಷ್ಕೃತ ಉಡಾನ್ ಯೋಜನೆಗೆ ಅನುಮೋದನೆ ನೀಡಿದೆ.ಯೋಜನೆಯಡಿ ಈಗಾಗಲೇ ಅಸ್ತಿತ್ವದಲ್ಲಿರುವ ಆದರೆ ಬಳಕೆಯಲ್ಲಿಲ್ಲದ್ದ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಿ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಮುಂದಿನ 8 ವರ್ಷಗಳಲ್ಲಿ ಈ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 12,159 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಇದರ ಜತೆಗೆ, ಯೋಜನೆಯಡಿ ಮುಂದಿನ 8 ವರ್ಷಗಳಲ್ಲಿ 3,661 ಕೋಟಿ ವೆಚ್ಚದಲ್ಲಿ 200 ಆಧುನಿಕ ಹೆಲಿಪ್ಯಾಡ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವೂ ಇದೆ. ಇನ್ನು ಉಡಾನ್ ಏರ್ಪೋರ್ಟ್‌ಗಳಲ್ಲಿ ಕಾರ್ಯಾಚರಣೆಗೆ ಮುಂದೆ ಬರುವ ವಿಮಾನಯಾನ ಕಂಪನಿಗಳಿಗೆ ಮುಂದಿನ 10 ವರ್ಷಗಳ ವರೆಗೆ ಏರ್‌ಲೈನ್ಸ್ ಕಂಪನಿಗಳಿಗೆ ವಯಬಿಲಿಟಿ ಗ್ಯಾಪ್ ಫಂಡಿಂಗ್(ವಿಜಿಎಫ್) ರೂಪದಲ್ಲಿ 10,043 ಕೋಟಿ ರು.ನಷ್ಟು ಹಣಕಾಸು ನೆರವು ಕಲ್ಪಿಸಲೂ ಉದ್ದೇಶಿಸಲಾಗಿದೆ. ಈ ಸಂಬಂಧ ಬಜೆಟ್‌ನಲ್ಲೂ ಅಗತ್ಯ ಹಣಕಾಸು ನೆರವು ಒದಗಿಸಲು ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ