
ಚೆನ್ನಾಗಿ ಸಾಕಿ ಪಳಗಿಸಿದ ಆನೆಗಳನ್ನು ದೇಗುಲಗಳಲ್ಲಿ ಬಳಸುತ್ತಾರೆ. ಅಲ್ಲದೇ ಕೆಲವು ಕಠಿಣ ಕೆಲಸಗಳಾದ ಮರದ ದಿಮ್ಮಿಗಳನ್ನು ಲೋಡ್ ಮಾಡುವುದು, ಇತರ ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಇಂತಹ ಹಲವು ರೀತಿಯ ಕಾರ್ಯಾಚರಣೆಗೆ ಬಳಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಕಾಡಾನೆಯನ್ನು ಅಪಘಾತದಿಂದಾಗಿ ನದಿಗೆ ಬಿದ್ದ ಟೊಯೋಟಾ ಫಾರ್ಚುನರ್ ಕಾರನ್ನು ನದಿಯಿಂದ ಮೇಲೆತ್ತಲು ಬಳಸಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿಈಗ ಭಾರಿ ವೈರಲ್ ಆಗುತ್ತಿದೆ. ಕೇರಳದಲ್ಲಿ ಈ ಘಟನೆ ನಡೆದಿದೆ.
ರಸ್ತೆ ಅಪಘಾತ ನಂತರ ಈ ಟೊಯೋಟಾ ಕಾರು ನದಿಗೆ ಬಿದ್ದು ಸಿಲುಕಿಕೊಂಡಿತ್ತು. ನದಿ ತೀರದ ಮರಳಿನಲ್ಲಿ ಇದು ಸಿಲುಕಿಕೊಂಡಿದ್ದರಿಂದ ಅದನ್ನು ಮೇಲೆತ್ತುವುದು ಅಷ್ಟು ಸುಲಭವಿರಲಿಲ್ಲ, ಹೀಗಾಗಿ ಆನೆಯೊಂದನ್ನು ಕರೆಸಿ ಈ ಟೊಯೋಟಾ ಫಾರ್ಚುನರ್ ಕಾರನ್ನು ನದಿಯಿಂದ ಮೇಲೆತ್ತಲಾಗಿದೆ. ಇನ್‌ಸ್ಟಾಗ್ರಾಮ್ ಬಳಕೆದಾರ ಸೈದ್ ಅಲವಿಕೋಯ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ., ಇದುವರೆಗೆ ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಬಿಳಿ ಬಣ್ಣದ ಟೊಯೋಟಾ ಫಾರ್ಚೂನರ್ ನದಿಯ ತಳದಲ್ಲಿ ಸಿಲುಕಿಕೊಂಡಿತ್ತು, ಅದರ ಮೂರು ಚಕ್ರಗಳು ನೀರಿನಲ್ಲಿ ಮುಳುಗಿದ್ದವು. ಆನೆ ಅಲ್ಲಿಗೆ ಬರುವವರೆಗೂ ಆ ಭಾರವಾದ ಎಸ್‌ಯುವಿಯನ್ನು ಅಲ್ಲಿಂದ ಎತ್ತುವ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು. ಹೀಗಾಗಿ ಆನೆಯನ್ನು ಕರೆಸಲಾಗಿತ್ತು. ಬಳಿಕ ಮಾಲೀಕನೊಂದಿಗೆ ಬಂದ ಆನೆ ಈ ಎಸ್‌ಯುವಿ ಗಾಡಿಯನ್ನು ಆಟಿಕೆಯ ಕಾರಿನಂತೆ ಸುಲಭವಾಗಿ ಮೇಲೆಳೆದಿದೆ.
ವಾಹನದ ಮುಂಭಾಗದ ಆಕ್ಸಲ್‌ಗೆ ಹಗ್ಗವನ್ನು ಬಿಗಿಯಲಾಯಿತು. ನಂತರ ಆ ಹಗ್ಗವನ್ನು ಬಾಯಿಯೊಳಗೆ ಹಾಕಿಕೊಂಡ ಆನೆ ಕೆಲವೇ ನಿಮಿಷಗಳಲ್ಲಿ ತನ್ನ ಸೊಂಡಿಲಿನಿಂದ ಹಿಡಿದು, ಮಾವುತನ ಸೂಚನೆಯ ಮೇರೆಗೆ ಕಾರನ್ನು ಎಳೆಯಲು ಪ್ರಾರಂಭಿಸಿತು.. ಕೆಲವೇ ಸೆಕೆಂಡುಗಳಲ್ಲಿ ಆನೆ ಆ ಭಾರವಾದ ಎಸ್‌ಯುವಿ ಗಾಡಿಯನ್ನು ಗಟ್ಟಿಯಾದ ನೆಲದ ಮೇಲೆ ತಂದು ನಿಲ್ಲಿಸಿದೆ.
'ತಿರುವೆಗೆಪ್ಪುರ ಶಂಕರನಾರಾಯಣನ್ ನಮ್ಮ ಪುಟ್ಟ ಆನೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಈ ಎಸ್‌ಯುವಿ ಗಾಡಿ ಆನೆ ಪಾಲಿಗೆ ಆಟದ ಕಾರಿನಂತೆ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾರ್ಸ್ ಪವರ್ ಅಲ್ಲ ಎಲಿಫೆಂಟ್ ಪವರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬೀಶ್ಟ್ ಫಾರ್ಚುನರ್ ಅಲ್ಲ, ಬೀಶ್ಟ್ ಶಂಕರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ