
ಆನೆಮರಿಗಳ ಮುದ್ದಾದ ವಿಡಿಯೋಗಳು ಆಗಾಗ ವೈರಲ್ ಆಗ್ತಿರ್ತವೆ. ಗುಂಡು ಗುಂಡಾಗಿರುವ ಮುದ್ದಾದ ಆನೆಮರಿಗಳು ತಮ್ಮ ಹಿಂಡಿನಲ್ಲಿ ತುಂಟಾಟ ಮಾಡುವುದಲ್ಲದೇ ತಮ್ಮ ಕೇರ ಟೇಕರ್‌ಗಳ ಜೊತೆಗೂ ಮುದ್ದಾದ ಒಡನಾಟವನ್ನು ಇರಿಸಿಕೊಂಡಿರುತ್ತವೆ. ಅದೇ ರೀತಿ ಇಲ್ಲೊಂದು ಆನೆಮರಿ ಕೇರ್‌ಟೇಕರ್ ತನ್ನ ಜೊತೆ ಆಟ ಆಡೋಕೆ ಬರ್ತಿಲ್ಲ, ಎಂದು ಸಿಟ್ಟು ಮಾಡ್ಕೊಂಡು ಗುರ್ ಗುರ್ ಅಂತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರ ಮುಖದಲ್ಲಿ ನಗು ತರಿಸುತ್ತಿದೆ.
wildlife.report ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಧ್ವನಿ ಹೆಚ್ಚಿಸಿ ಕೇಳಿ, ಈ ಮರಿ ಆನೆ ತನ್ನ ಆರೈಕೆದಾರನ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ ಮತ್ತು ಆರೈಕೆ ಮಾಡುವವ ಆಟವಾಡಲು ನಿರಾಕರಿಸಿದಾಗ, ಅದು ಸಣ್ಣದಾದರೂ ಪ್ರಬಲವಾದ ಘರ್ಜನೆ ಮಾಡಿ ವಿರೋಧ ವ್ಯಕ್ತಪಡಿಸಿತು ಎಂದು ಬರೆದಿದ್ದಾರೆ. ಅತ್ಯಂತ ಸೌಮ್ಯವಾದ ದೈತ್ಯರು ಸಹ ನಾಟಕ ಮಾಡ್ತಾರೆ ಎಂದು ಬರೆದಿದ್ದಾರೆ. ವೀಡಿಯೋದಲ್ಲಿ ತಾಯಿಯ ಜೊತೆ ಇರುವ ಆನೆಮರಿಯೊಂದು ಕ್ಯಾಮರಾದಲ್ಲಿ ಸೆರೆಯಾಗದೇ ದೂರ ನಿಂತಿರುವ ತನ್ನ ಕೇರ್ ಟೇಕರ್‌ನನ್ನು ಆಟಕ್ಕೆ ಬರುವಂತೆ ಕರೆಯುತ್ತಿದ್ದು, ಆಕೆ ಬಾರದೇ ಹೋದಾಗ ಗುರ್ ಗುರ್ ಎನ್ನುತ್ತಿರುವ ಸದ್ದು ಬಹಳ ಜೋರಾಗಿಯೇ ಕೇಳಿಸುತ್ತಿದೆ. ತಾಯಿ ಆನೆ ಈ ವೇಳೆ ಹಸಿರು ಹುಲ್ಲನ್ನು ಎಳೆದು ತಿನ್ನುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ವೀಡಿಯೋ ನೋಡಿದ ಅನೇಕರು ಈ ಮರಿಯ ತಾಯಿಗೆ ಸಮಸ್ಯೆ ಏನು ಅಂತ ಗೊತ್ತಾಗಿದೆ ಹಾಗಾಗಿ ಬೇಬಿ ಬಂದು ಸ್ವಲ್ಪ ಆಹಾರ ತಿನ್ನು ಅಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಆ ಮರಿ ಆನೆ ಜೊತೆ ಆಟ ಆಡುವಂತೆ ಕೇರ್ ಟೇಕರ್‌ಗೆ ಮನವಿ ಮಾಡಿದ್ದಾರೆ. ಚಿಕ್ಕ ಮರಿ ಆನೆಯೊಂದಿಗೆ ಆಟವಾಡದಿರುವುದು ಯುದ್ಧ ಅಪರಾಧವೆಂದು ಪರಿಗಣಿಸಲಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಪುಟಾಣಿ ಆನೆಯ ತಲೆ ಮೇಲಿರುವ ಪುಟ್ಟ ಪುಟ್ಟ ಕೂದಲು ತುಂಬಾ ಮುದ್ದಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಆಟ ನಿಲ್ಲಿಸಿ ಊಟಕ್ಕೆ ಬರುವಂತೆ ಆನೆಮರಿಯ ತಾಯಿ ಕರೆಯುತ್ತಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ತಾಯಾನೆಗಳು ಮರಿಯಾನೆಯನ್ನು ಬಹಳ ಜಾಗರೂಕವಾಗಿ ನೋಡಿಕೊಳ್ಳುತ್ತವೆ. ಹಾಗೆಯೇ ಆನೆಗಳ ಮತ್ತೊಂದು ವೈರಲ್ ಆದ ವೀಡಿಯೋದಲ್ಲಿ ಎರಡು ಆನೆಗಳು ತಮ್ಮ ಗುಂಪಿನ ಮರಿಯಾನೆಗೆ ಮೇಲೇರಿ ಸಾಗುವುದಕ್ಕೆ ಸಹಾಯ ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರದ ಕಾಲಿಕುಂಡ ಶ್ರೇಣಿಯ ಸಂಕ್ರೈಲ್ ಬೀಟ್ ಪ್ರದೇಶದಲ್ಲಿ 13ರಿಂದ 14ರಷ್ಟಿದ್ದ ಕಾಡಾನೆಗಳ ಹಿಂಡು ಹನ್ರಿಭಂಗ ಅರಣ್ಯವನ್ನು ಪ್ರವೇಶಿಸಿದ್ದು, ಈ ವೇಳೆ ಮೇಲೇರಲಾಗದ ಆನೆಮರಿಯನ್ನು ಎರಡು ದೊಡ್ಡಾನೆಗಳು ಸೇರಿ ಮೇಲೇ ಹತ್ತಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಎರಡು ಆನೆಗಳು ಆ ಪುಟಾಣಿ ಮರಿಯಾನೆಯನ್ನು ತಮ್ಮ ಜೊತೆ ಕರೆದೊಯ್ಯುವುದಕ್ಕಾಗಿ ಅದನ್ನು ಮೇಲೆ ಹತ್ತಲೂ ಸಹಾಯ ಮಾಡುವುದನ್ನು ಕಾಣಬಹುದು. ಇದೇ ವೀಡಿಯೋದಲ್ಲಿ ಜನ ಆನೆಗಳತ್ತ ಕೂಗಿ ಬೊಬ್ಬೆ ಹೊಡೆಯುವುದನ್ನು ಕಾಣಬಹುದು. ವೀಡಿಯೋ ನೋಡಿದ ಅನೇಕರು ಆನೆಗಳ ಹಿಂದೆ ಕಿರುಚಾಡುತ್ತಿರುವ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಆನೆಗಳು ಬಹಳ ಬುದ್ಧಿವಂತ ಹಾಗೂ ಭಾವುಕ ಪ್ರಾಣಿಗಳಾಗಿವೆ. ಹಿಂಡಿನಲ್ಲಿಯೇ ಅವುಗಳು ಹೆಚ್ಚಾಗಿ ವಾಸ ಮಾಡುತ್ತವೆ. ತಮ್ಮ ಹಿಂಡಿನಲ್ಲಿ ಮರಿಗಳಿದ್ದಾಗ ಬಹಳವೇ ಜಾಗರೂಕವಾಗಿರುವ ಈ ಆನೆಗಳು ಆ ಮರಿಗಳಿಗೆ ಎಲ್ಲೂ ಅನಾಹುತವಾಗದಂತೆ ಬಹಳ ಜತನದಿಂದ ಕಾಪಾಡುತ್ತವೆ. ಮರಿಗಳ ಜೊತೆ ಸಾಗುವ ವೇಳೆ ಹಿಂದೆ ಮುಂದೆ ಅಕ್ಕ ಪಕ್ಕ ಇತರ ದೊಡ್ಡ ಆನೆಗಳಿದ್ದು, ಒಂದು ರೀತಿಯ ಜೆಡ್ ಪ್ಲಸ್ ಭದ್ರತೆಯನ್ನು ಮರಿಗಳಿಗೆ ಒದಗಿಸುತ್ತವೆ. ಆನೆಗಳು ಒಂದು ವ್ಯವಸ್ಥಿತ ಸಾಮಾಜಿಕ ಕಟ್ಟಳೆಯಡಿ ಬಾಳುತ್ತವೆ. ಗಂಡಾನೆ ಮತ್ತು ಹೆಣ್ಣಾನೆಯ ಸಾಮಾಜಿಕ ಜೀವನಗಳು ಬಲು ಭಿನ್ನವಾಗಿದೆ. ಹೆಣ್ಣಾನೆಗಳು ತಮ್ಮ ಸಂಪೂರ್ಣ ಜೀವನವನ್ನು ಒಂದು ನಿಕಟವಾಗಿ ಬಂಧಿಸಲ್ಪಟ್ಟ ಕುಟುಂಬದಲ್ಲಿಯೇ ಕಳೆಯುತ್ತವೆ.
ಈ ಕುಟುಂಬವು ಕೇವಲ ಹೆಣ್ಣಾನೆಗಳನ್ನು ಮಾತ್ರ ಒಳಗೊಂಡಿದ್ದು ತಾಯಿ, ಮಗಳು, ಸಹೋದರಿಯರು, ಸೋದರತ್ತೆ ಮತ್ತು ಚಿಕ್ಕಮ್ಮಂದಿರನ್ನು ಒಳಗೊಂಡಿರುತ್ತದೆ. ಗುಂಪಿನಲ್ಲಿ ಅತಿ ಹೆಚ್ಚು ವಯಸ್ಸಾದ ಆನೆಯು ಈ ಕುಟುಂಬದ ಯಜಮಾನಿಯಾಗಿ ಪ್ರಧಾನ ಮಾತೃವಿನ ಸ್ಥಾನದಲ್ಲಿರುತ್ತಾಳೆ. ಇದಕ್ಕೆ ವ್ಯತಿರಿಕ್ತವಾಗಿ ವಯಸ್ಕ ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಿಯೇ ಬಾಳುತ್ತವೆ. ಹೆಣ್ಣಾನೆಯ ಸಾಮಾಜಿಕ ವಲಯವು ತನ್ನ ಸಣ್ಣ ಕುಟುಂಬಕ್ಕೇ ಸೀಮಿತವಾಗಿರುವುದಿಲ್ಲ. ತನ್ನ ಗುಂಪಿನ ಆಸುಪಾಸಿನಲ್ಲಿ ಸುಳಿದಾಡುವ ಗಂಡಾನೆಗಳು ಮತ್ತು ಇತರ ಗುಂಪುಗಳು ಇವುಗಳೊಡನೆಯೂ ಸಂಪರ್ಕವಿರಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹೆಣ್ಣಾನೆಗಳ ಕುಟುಂಬವು 5 ರಿಂದ 15 ವಯಸ್ಕ ಹೆಣ್ಣಾನೆಗಳು ಮತ್ತು ಅನೇಕ ಎಳೆಯ ಮಕ್ಕಳನ್ನು (ಗಂಡು ಮತ್ತು ಹೆಣ್ಣು) ಒಳಗೊಂಡಿರುತ್ತದೆ.
ಇದನ್ನೂ ಓದಿ: ಆಗಷ್ಟೇ ಮಾಡಿದ ಹೊಸ ರಸ್ತೆಯ ಡಾಮರ್ ಕದ್ದು ಮನೆಗೆ ಹೊತ್ತೊಯ್ದ ಜನ
ಇದನ್ನೂ ಓದಿ: 1 ಲೀಟರ್ ಮೂತ್ರದಿಂದ 6 ಗಂಟೆಗೆ ಬೇಕಾಗುವಷ್ಟು ಕರೆಂಟ್ ಉತ್ಪಾದನೆ: ಆಫ್ರಿಕನ್ ಮಕ್ಕಳ ಅದ್ಭುತ ಅವಿಷ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ