ಯಾವುದೇ ಚುನಾವಣೆಯಲ್ಲಿ 2 ಮತ್ತು 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ಚುನಾವಣಾ ಆಯೋಗ ಸೂಚಿಸುವ ಶುಲ್ಕ ಕಟ್ಟಿ, ತಾವು ಸ್ಪರ್ಧಿಸಿದ ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರದ ಯಾವುದೇ ಮತಯಂತ್ರಗಳನ್ನು ಆಯ್ಕೆ ಮಾಡಿಕೊಂಡು ತಪಾಸಣೆ ಮಾಡಬಹುದಾಗಿರುತ್ತದೆ.
ನವದೆಹಲಿ (ಜು 17): ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ತಿರುಚಲಾಗಿದೆ ಎಂದು ಆರೋಪಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ, ಬೇಕಾದ ಮಷಿನ್ ಆಯ್ದುಕೊಂಡು ತಪಾಸಣೆ ಮಾಡುವ ವಿನೂತನ ಅವಕಾಶವೊಂದನ್ನು ಕೇಂದ್ರ ಚುನಾವಣಾ ಆಯೋಗ ಕಲ್ಪಿಸಿದೆ.
ಹೀಗಾಗಿ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ 2 ಮತ್ತು 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ಚುನಾವಣಾ ಆಯೋಗ ಸೂಚಿಸುವ ಶುಲ್ಕ ಕಟ್ಟಿ, ತಾವು ಸ್ಪರ್ಧಿಸಿದ ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರದ ಯಾವುದೇ ಮತಯಂತ್ರಗಳನ್ನು ಆಯ್ಕೆ ಮಾಡಿಕೊಂಡು ತಪಾಸಣೆ ಮಾಡಬಹುದಾಗಿರುತ್ತದೆ.
ಈ ಕುರಿತ ಕೆಲ ಮಾರ್ಗಸೂಚಿಗಳನ್ನು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಈ ಅವಕಾಶ ಇವಿಎಂಗಳ ಕುರಿತಾದ ಇದ್ದ ಅನುಮಾನಗಳನ್ನು ನಿವಾರಿಸುತ್ತದೆ ಎಂದು ಆಯೋಗ ಹೇಳಿದೆ.
ಅವಕಾಶ ಏಕೆ?:
ಕಳೆದ ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಿಸಿದ ಬಳಿಕ ಇವಿಎಂಗಳಲ್ಲಿ ಅಳವಡಿಸಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳನ್ನು ತಿರುಚಲಾಗಿದೆ. ಹೀಗಾಗಿ ಇವಿಎಂಗಳು ಮತ್ತು ಬರ್ನ್ಂಟ್ ಮೆಮೆರಿ ಪರಿಶೀಲನೆಗೆ ಅವಕಾಶ ಕೋಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ 8 ಪರಾಜಿತ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.
ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಅಂದರೆ ಏ.26ರಂದು, ಇವಿಎಂ ಬದಲು ಹಿಂದಿನ ಮತಚೀಟಿ ವ್ಯವಸ್ಥೆಯನ್ನೇ ಮರಳಿ ತರಬೇಕೆಂದು ಕೋರಿದದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಆದರೆ ಇದೇ ವೇಳೆ, ಚುನಾವಣೆಯಲ್ಲಿ 2 ಮತ್ತು 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ಕ್ಷೇತ್ರದ ಶೇ.5ರಷ್ಟು ಇವಿಎಂಗಳಲ್ಲಿನ ಮೈಕ್ರೋ ಕಂಟ್ರೋಲರ್ ಚಿಪ್‌ಗಳ ತಪಾಸಣೆಗೆ ಕೋರಿಕೆ ಸಲ್ಲಿಸಬಹುದು. ಇದಕ್ಕೆ ಆಯೋಗ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು ಎಂದು ಕೋರ್ಟ್ ಅವಕಾಶ ನೀಡಿತ್ತು. ಈ ಅವಕಾಶದ ಅನ್ವಯ ಕೇಂದ್ರ ಚುನಾವಣಾ ಆಯೋಗ ಇದೀಗ ಈ ನಿರ್ಧಾರ ಪ್ರಕಟಿಸಿದೆ.
ಅಭ್ಯರ್ಥಿಗಳಿಗೆ ಏನು ಅವಕಾಶ?:
ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ವಿಧಾನಸಭಾ ಕ್ಷೇತ್ರದ ಯಾವುದೇ ಮತಗಟ್ಟೆ ಅಥವಾ ಮಷಿನ್‌ನ ಸೀರಿಯಲ್ ನಂಬರ್ ನಮೂದಿಸಿ ಅದರ ಪರೀಕ್ಷೆಗೆ ಕೋರಿಕೆ ಸಲ್ಲಿಸಬಹುದು. ಇದಲ್ಲದೇ ಬೇರೆ ಬೇರೆ ಮತಗಟ್ಟೆಯ ಬ್ಯಾಲಟ್ ಯುನಿಟ್, ಕಂಟ್ರೋಲ್ ಯುನಿಟ್ ಅಥವಾ ವಿವಿಪ್ಯಾಟ್ ಮಿಕ್ಸ್ ಮಾಡಿ ತಪಾಸಣೆಗೆ ಒಳಪಡಿಸುವ ಅವಕಾಶವನ್ನೂ ಆಯೋಗ ನೀಡಿದೆ.
ಒಂದು ವೇಳೆ ಮಿಕ್ಸ್ ಅವಕಾಶ ಬಳಸಿಕೊಂಡರೆ, ಇವಿಎಂ ಯಂತ್ರವು ತನ್ನ ಮೂರೂ ಯುನಿಟ್‌ಗಳು ನೈಜ ಭಾಗ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ವಯಂ ತಪಾಸಣೆಗೆ ಒಳಪಡುತ್ತದೆ. ಈ ಮೂಲಕ ಮತಯಂತ್ರದ ಎಲ್ಲಾ ಮೂರು ಯುನಿಟ್‌ಗಳ ಜೊತೆ ಸಮನ್ವಯ ಸಾಧಿಸುತ್ತದೆ. ಇಂಥ ಸಮನ್ವಯ ಆದ ಬಳಿಕ ಅದನ್ನು ಪರೀಕ್ಷೆಗೆ ಅಭ್ಯರ್ಥಿಗಳಿಗೆ ನೀಡಲಾಗುವುದು.
ಕಾಂಗ್ರೆಸ್ ಬಟನ್ ಒತ್ತಿದರೆ ಬಿಜೆಪಿಗೆ ಮತ: ಸುಳ್ಳು ಸುದ್ದಿ ಹಬ್ಬಿಸಿದ್ದ ಸೈಯದ್ ಇಮಾದುಲ್ಲಾಅರೆಸ್ಟ್
ಏನು ತಪಾಸಣೆ?
ಇವಿಎಂಗಳ ಕುರಿತು ಅನುಮಾನ ಹೊಂದಿರುವ ಅಭ್ಯರ್ಥಿಗಳು ತಮಗೆ ನೀಡಿದ ಎವಿಎಂಗಳಲ್ಲಿ ಯಾವುದೇ ರೀತಿ ಬೇಕಾದರೂ ಅಣಕು ಮತದಾನ ನಡೆಸಬಹುದು. ಬಳಿಕ ತಾವು ಚಲಾಯಿಸಿ ಮತಗಳು ಯಾರಿಗೆ ಚಲಾವಣೆಯಾಗುತ್ತಿದೆ. ಮತ ಚಲಾವಣೆಯಾದ ಅಭ್ಯರ್ಥಿ ಪರವಾಗಿಯೇ ವಿವಿಪ್ಯಾಟ್‌ನಲ್ಲೂ ಪ್ರತಿ ಮುದ್ರಣವಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.
ಎಷ್ಟು ವೆಚ್ಚ?
ಪ್ರತಿ ಯುನಿಟ್ ತಪಾಸಣೆಗೆ 40,000 ರು. ಶುಲ್ಕ ಮತ್ತು ಜಿಎಸ್ಟಿಯನ್ನು ಅಭ್ಯರ್ಥಿಗಳು ಪಾವತಿಸಬೇಕು. ಒಂದು ವೇಳೆ ಇವಿಎಂನಲ್ಲಿ ದೋಷ ಕಂಡುಬಂದರೆ ಪೂರ್ಣ ಹಣ ಮರಳಿಸಲಾಗುವುದು. ಫಲಿತಾಂಶ ಪ್ರಕಟವಾದ 7 ದಿನಗಳಲ್ಲಿ ಅಭ್ಯರ್ಥಿಗಳು ಇಂಥ ಮನವಿ ಸಲ್ಲಿಸಬಹುದಾಗಿರುತ್ತದೆ. ಹಾಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜು.19ರ ಬಳಿಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಇವಿಎಂ ತಿರುಚಬಹುದು: ಎಲಾನ್ ಮಸ್ಕ್ ನುಡಿ ಭಾರತದಲ್ಲಿ ಭಾರಿ ವಿವಾದ!