
ನವದೆಹಲಿ(ಜು.06): ಚೀನಾ ಮೂಲದ ಕಂಪನಿಗಳ ಮೇಲೆ ಸರ್ಕಾರದ ಪ್ರಹಾರ ಮುಂದುವರಿದಿದೆ. ವಿವೋ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ದೆಹಲಿ, ಮೇಘಾಲಯ, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಒಟ್ಟು 44 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಚೀನಾದ ಎಂಐ ಕಂಪನಿ ಮೇಲೆ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ಕೆಲ ದಿನ ಹಿಂದೆ ದೆಹಲಿ ಪೊಲೀಸರು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವೋ ವಿತರಕರ ಕಚೇರಿ ಮೇಲೆ ದಾಳಿ ಮಾಡಿದ ವೇಳೆ, ಕಂಪನಿಯಲ್ಲಿ ಕೆಲ ಚೀನಿ ಷೇರುದಾರರು ತಮ್ಮ ಗುರುತಿನ ದಾಖಲೆಗಳನ್ನು ತಿರುಚಿದ್ದು ಕಂಡುಬಂದಿತ್ತು. ಅವರು ಹೀಗೆ ಮಾಡಿದ್ದು, ಕಂಪನಿಯ ಹಣ ಅಕ್ರಮ ಹಣ ವರ್ಗಾವಣೆ ಉದ್ದೇಶದಿಂದ ಇರಬಹುದು ಎಂದು ಪ್ರಕರಣ ದಾಖಲಿಸಲಾಗಿತ್ತು. ಇದೇ ಆಧಾರದಲ್ಲಿ ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿವೋ ಕಂಪನಿ, ನಕಲಿ ಕಾಗದಪತ್ರ, ಖೊಟ್ಟಿಕಂಪನಿಗಳನ್ನು ಸ್ಥಾಪಿಸಿಕೊಂಡು ಅವುಗಳ ಮೂಲಕ ಭಾರತದಲ್ಲಿ ತೆರಿಗೆ ವಂಚಿಸಿದ ಹಣವನ್ನು ಚೀನಾಕ್ಕೆ ರವಾನಿಸುತ್ತಿರಬಹುದೆಂಬುದು ಇಡಿ ಅಧಿಕಾರಿಗಳ ಅಂದಾಜು.
ಇದೇ ರೀತಿ ಅಕ್ರಮ ನಡೆಸಿದ್ದಕ್ಕಾಗಿ ಚೀನಾ ಮೂಲದ ಕ್ಸಿಯೋಮಿ ಕಂಪನಿಯ 5551 ಕೋಟಿ ಠೇವಣಿಯನ್ನು ಕಳೆದ ಏಪ್ರಿಲ್‌ನಲ್ಲಿ ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಅಲ್ಲದೆ ಕಳೆದ ಫೆಬ್ರುವರಿ ತಿಂಗಳಲ್ಲಿ ಚೀನಾ ಮೂಲದ ಹುವಾಯ್ ಕಂಪನಿ ಮೇಲೆ ನಡೆದ ದಾಳಿಯಲ್ಲೂ ಅದು ತೆರಿಗೆ ವಂಚನೆ ನಡೆಸಿದ್ದು ಕಂಡುಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ