ತಾಜ್‌ ಕಟ್ಟದಿದ್ದರೆ ಪೆಟ್ರೋಲ್‌ ದರ 40 ರು. ಆಗಿರುತ್ತಿತ್ತು: ಓವೈಸಿ ವ್ಯಂಗ್ಯ

By Suvarna NewsFirst Published Jul 6, 2022, 9:37 AM IST
Highlights

* ಆಡಳಿತ ಪಕ್ಷಕ್ಕೆ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ತಿರುಗೇಟು 

* ತಾಜ್‌ ಕಟ್ಟದಿದ್ದರೆ ಪೆಟ್ರೋಲ್‌ ದರ 40 ರು. ಆಗಿರುತ್ತಿತ್ತು: ಓವೈಸಿ ವ್ಯಂಗ್ಯ

* ಶಹಜಹಾನ್‌ ಹಣ ಉಳಿಸಿ ಮೋದಿಗೆ ಕೊಡಬೇಕಿತ್ತು

ನವದೆಹಲಿ(ಜು.06): ದೇಶದಲ್ಲಾಗುತ್ತಿರುವ ಸಮಸ್ಯೆಗಳಿಗೆ ಸದಾ ಮೊಘಲ್‌ ದೊರೆಗಳು ಮತ್ತು ಮುಸ್ಲಿಮರನ್ನು ಹೊಣೆ ಮಾಡುವ ಆಡಳಿತ ಪಕ್ಷಕ್ಕೆ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ತಿರುಗೇಟು ನೀಡಿದ್ದಾರೆ. ‘ಒಂದು ವೇಳೆ ಶಹಜಹಾನ್‌ ತಾಜ್‌ ಮಹಲ್‌ ನಿರ್ಮಾಣ ಮಾಡದೇ ಇದ್ದಿದ್ದರೆ ದೇಶದಲ್ಲಿ ಇಂದು ಪೆಟ್ರೋಲ್‌ 40 ರು.ಗೆ ಸಿಗುತ್ತಿತ್ತು’ ಎಂದು ವ್ಯಂಗ್ಯ ಮಾಡಿದ್ದಾರೆ.

‘ದೇಶದಲ್ಲಿ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಣದುಬ್ಬರ ಗರಿಷ್ಠಕ್ಕೇರಿದೆ. ಡೀಸೆಲ್‌ ಒಂದು ಲೀಟರ್‌ಗೆ 102 ರು. ಆಗಿದೆ. ಇದಕ್ಕೆಲ್ಲ ಕಾರಣವಾಗಿರುವುದು ಔರಂಗಜೇಬ್‌ನೇ ಹೊರತು ಪ್ರಧಾನಿ ನರೇಂದ್ರ ಮೋದಿಯಲ್ಲ. ನಿರುದ್ಯೋಗಕ್ಕೆ ಸಾಮ್ರಾಟ ಅಶೋಕ ಕಾರಣ. ಪೆಟ್ರೋಲ್‌ ಬೆಲೆ 115 ರು. ಆಗಿರುವುದಕ್ಕೆ ತಾಜ್‌ಮಹಲ್‌ ಕಟ್ಟಿದ ರಾಜ ಕಾರಣ. ಒಂದು ವೇಳೆ ಶಹಜಹಾನ್‌ ತಾಜ್‌ ಮಹಲ್‌ ಕಟ್ಟದಿದ್ದರೆ ಪೆಟ್ರೋಲ್‌ 40 ರು.ಗೆ ಸಿಗುತ್ತಿತ್ತು’ ಎಂದು ವ್ಯಂಗ್ಯ ಮಾಡಿದ್ದಾರೆ.

‘ಶಹಜಹಾನ್‌ ಕೆಂಪುಕೋಟೆ ಮತ್ತು ತಾಜ್‌ಮಹಲ್‌ ಕಟ್ಟದೇ ಆ ಹಣವನ್ನು ಉಳಿತಾಯ ಮಾಡಿ 2014ರಲ್ಲಿ ಮೋದಿ ಅವರಿಗೆ ನೀಡಬೇಕಾಗಿತ್ತು. ದೇಶದಲ್ಲಿ ಎಲ್ಲಾ ಸಮಸ್ಯೆಗಳಿಗೂ ಮುಸ್ಲಿಮರನ್ನು ಮತ್ತು ಮೊಘಲರನ್ನು ಗುರಿ ಮಾಡಲಾಗುತ್ತದೆ. ನಾವು ಏನೇ ಮಾಡಿದರು ಭಾರತವನ್ನು ತೊರೆಯುವುದಿಲ್ಲ. ನಾವು ಭಾರತವನ್ನು ಪ್ರೀತಿಸುತ್ತೇವೆ. ನಾವು ಇಲ್ಲಿಯೇ ಬದುಕುತ್ತೇವೆ, ಇಲ್ಲಿಯೇ ಸಾಯುತ್ತೇವೆ’ ಎಂದು ಹೇಳಿದ್ದಾರೆ.

ಭಾರತ ಆದಿವಾಸಿಗಳು, ದ್ರಾವಿಡರ ಸ್ವತ್ತು: ಠಾಕ್ರೆ, ಮೋದಿಗೆ ಸೇರಿದ್ದಲ್ಲ: ಒವೈಸಿ

ಭಾರತ, ದ್ರಾವಿಡರು ಮತ್ತು ಆದಿವಾಸಿಗಳಿಗೆ ಸೇರಿದ್ದು, ತನಗಾಗಲೀ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆಗಾಗಲೀ, ಎನ್‌ಸಿಪಿ ನಾಯಕ ಶರದ್‌ ಪವಾರ್‌ಗಾಗಲೀ, ಪ್ರಧಾನಿ ನರೇಂದ್ರ ಮೋದಿಗಾಗಲೀ ಸೇರಿದ್ದಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಮಹಾರಾಷ್ಟ್ರದ ಬಿವಾಂಢಿಯಲ್ಲಿ ನಡೆದ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಇವರೆಲ್ಲರೂ 600 ವರ್ಷಗಳ ಇತಿಹಾಸ ಮಾತನಾಡುತ್ತಾರೆ, ನಾನು 65,000 ವರ್ಷಗಳ ಉದಾಹರಣೆ ಕೊಡುತ್ತೇನೆ. ಈ ದೇಶ ಠಾಕ್ರೆ, ಪವಾರ್‌, ಓವೈಸಿ, ಮೋದಿ ಅಥವಾ ಅಮಿತ್‌ ಶಾಗೆ ಸೇರಿದ್ದಲ್ಲ. ಭಾರತ ದ್ರಾವಿಡರು ಮತ್ತು ಆದಿವಾಸಿಗಳ ಸ್ವತ್ತು ಎಂದು ಹೇಳಿದ್ದಾರೆ. ಈ ಎಲ್ಲಾ ಪಕ್ಷಗಳು ಓಟನ್ನು ಬಲಪಡಿಸಿಕೊಳ್ಳುವುದಕ್ಕಾಗಿ ಮಾತ್ರ ಮಾತನಾಡುತ್ತವೆ. ಅಲ್ಪಸಂಖ್ಯಾತರ ಮೇಲೆ ದಾಳಿಯಾದಾಗ ಸುಮ್ಮನಿರುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

click me!