ಭಾರತೀಯ ಶಿಕ್ಷಣ ಕ್ಷೇತ್ರದ ‘ದಾದಾ’, ಮಾಜಿ ರಾಜ್ಯಪಾಲ, ಪದ್ಮಶ್ರೀ ಡಾ. ಡಿ.ವೈ. ಪಾಟೀಲ್ ನಿಧನ!

Published : Aug 04, 2026, 01:20 PM IST
DY Patil

ಸಾರಾಂಶ

ಪದ್ಮಶ್ರೀ ಪುರಸ್ಕೃತ, ಬಿಹಾರ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಡಾ. ಡಿ.ವೈ. ಪಾಟೀಲ್ (91) ಅವರು ಕೊಲ್ಲಾಪುರದಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅವರು, 182ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಅವರ ಅಗಲಿಕೆಯು ಶೈಕ್ಷಣಿಕ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಮುಂಬೈ: ದೇಶದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ನಾಯಕ, ಬಿಹಾರ, ತ್ರಿಪುರ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಜ್ಞಾನದೇವ್ ಯಶವಂತರಾವ್ (ಡಿ.ವೈ.) ಪಾಟೀಲ್ (91) ಅವರು ವಯೋಸಹಜ ಅನಾರೋಗ್ಯದಿಂದ ಕೊಲ್ಲಾಪುರದ ಕಸ್ಬಾ ಬಾವ್ಡಾದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅಭಿಮಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳಿಂದ ಪ್ರೀತಿಯಿಂದ "ದಾದಾ" ಎಂದೇ ಕರೆಯಲ್ಪಡುತ್ತಿದ್ದ ಡಾ. ಪಾಟೀಲ್ ಅವರ ಅಗಲಿಕೆಯು ಭಾರತೀಯ ಶೈಕ್ಷಣಿಕ ಮತ್ತು ಸಾರ್ವಜನಿಕ ರಂಗದ ಒಂದು ಸುವರ್ಣ ಯುಗದ ಅಂತ್ಯವನ್ನು ಸೂಚಿಸಿದೆ.

ಅಜ್ಜನ ಅಗಲಿಗೆ ತಿಳಿಸಿದ ಮೊಮ್ಮಕ್ಕಳು

ಮಾಜಿ ಕಾಂಗ್ರೆಸ್ ನಾಯಕರಾಗಿದ್ದ ಡಾ. ಡಿ.ವೈ. ಪಾಟೀಲ್ ಅವರು ಪುತ್ರರಾದ ಕಾಂಗ್ರೆಸ್ ಎಂಎಲ್‌ಸಿ ಸತೇಜ್ ಪಾಟೀಲ್, ಸಂಜಯ್ ಪಾಟೀಲ್, ಅಜಿಂಕ್ಯ ಪಾಟೀಲ್ ಹಾಗೂ ಪುತ್ರಿ ಡಾ. ನಂದಿತಾ ಪಾಲ್ಶೆಟ್ಕರ್ ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಲಕ್ಷಾಂತರ ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಅಜ್ಜನ ಅಗಲಿಕೆಯ ಕುರಿತು ತೀವ್ರ ಶೋಕ ವ್ಯಕ್ತಪಡಿಸಿರುವ ಡಿ.ವೈ. ಪಾಟೀಲ್ ಪಿಂಪ್ರಿ ಸಂಸ್ಥೆಯ ಪ್ರೊ-ವೈಸ್ ಚಾನ್ಸೆಲರ್ ಸ್ಮಿತಾ ಜಾಧವ್, "ನಮ್ಮ ಪ್ರೀತಿಯ ಸಂಸ್ಥಾಪಕರು, ಗೌರವಾನ್ವಿತ ಡಾ. ಡಿ.ವೈ. ಪಾಟೀಲ್ ಸರ್ ಅವರ ದುಃಖಕರ ನಿಧನದ ಸುದ್ದಿಯನ್ನು ತೀವ್ರ ಭಾರವಾದ ಹೃದಯದಿಂದ ತಿಳಿಸುತ್ತಿದ್ದೇನೆ. ಅವರ ದೂರದೃಷ್ಟಿಯ ನಾಯಕತ್ವ, ಶಿಕ್ಷಣದ ಬಗೆಗಿನ ಅಚಲ ಬದ್ಧತೆ ಮತ್ತು ಅಸಾಧಾರಣ ಪರಂಪರೆಯು ಅಸಂಖ್ಯಾತ ಜನರ ಜೀವನ ಹಾಗೂ ಸಂಸ್ಥೆಗಳನ್ನು ರೂಪಿಸಿದೆ. ಅವರ ನಿಧನವು ಇಡೀ ಡಿ.ವೈ. ಪಾಟೀಲ್ ಸಮೂಹ ಸಂಸ್ಥೆಗಳ ಕುಟುಂಬಕ್ಕೆ ತುಂಬಲಾರದ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ

ಶಿಕ್ಷಣ ರಂಗದ ಅಭೂತಪೂರ್ವ ಸಾಮ್ರಾಜ್ಯ

ಅಕ್ಟೋಬರ್ 22, 1935 ರಂದು ಜನಿಸಿದ ಡಾ. ಪಾಟೀಲ್ ಅವರು ಶೈಕ್ಷಣಿಕ ಅವಕಾಶಗಳ ವಿಸ್ತರಣೆ ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದರು.

182ಕ್ಕೂ ಹೆಚ್ಚು ಸಂಸ್ಥೆಗಳು ವೈವಿಧ್ಯಮಯ ಶಿಕ್ಷಣ

ತಮ್ಮ ಹೆಮ್ಮೆಯ 'ಡಿ.ವೈ. ಪಾಟೀಲ್ ಗ್ರೂಪ್' ಮೂಲಕ ದೇಶದ ಅತಿ ದೊಡ್ಡ ಖಾಸಗಿ ಶಿಕ್ಷಣ ಜಾಲಗಳಲ್ಲಿ ಒಂದನ್ನು ಅವರು ಕಟ್ಟಿಬೆಳೆಸಿದರು. ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಕೃಷಿ, ಅಂತರರಾಷ್ಟ್ರೀಯ ಶಾಲೆಗಳು ಸೇರಿದಂತೆ 182 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ 7ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ವೃತ್ತಿಪರ ಶಿಕ್ಷಣವು ಎಲ್ಲರಿಗೂ ಸಿಗುವಂತೆ ಮಾಡಿದರು.

ವೈದ್ಯಕೀಯ ಜೊತೆಗೆ ತ್ರಿಪುರ, ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲ

ಉನ್ನತ ಶಿಕ್ಷಣ ಮಾತ್ರವಲ್ಲದೆ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗುವಂತೆ ಮಾಡಲು ಹಲವು ಬಹು-ವಿಶೇಷ (Multi-speciality) ಆಸ್ಪತ್ರೆಗಳನ್ನು ನಿರ್ಮಿಸಿದರು. ಶಿಕ್ಷಣ ಕ್ಷೇತ್ರದ ಜೊತೆಗೆ ಡಾ. ಪಾಟೀಲ್ ಅವರು ರಾಜಕೀಯ ಹಾಗೂ ಆಡಳಿತ ರಂಗದಲ್ಲೂ ತಮ್ಮದೇ ಆದ ವಿಶಿಷ್ಟ ಮುದ್ರೆಯೊತ್ತಿದ್ದರು. ಆರಂಭದಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾಗಿ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು.

ಆಡಳಿತಾತ್ಮಕ ನಾಯಕತ್ವ ಮತ್ತು ಸಾರ್ವಜನಿಕರೊಂದಿಗಿನ ನಿಕಟ ಬಾಂಧವ್ಯಕ್ಕಾಗಿ ಗುರುತಿಸಿಕೊಂಡಿದ್ದ ಅವರನ್ನು ಭಾರತ ಸರ್ಕಾರವು ತ್ರಿಪುರ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ರಾಜಪಾಲರನ್ನಾಗಿ ನೇಮಕ ಮಾಡಿತ್ತು.

ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರವು 1991 ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಶ್ರೀ' ನೀಡಿ ಗೌರವಿಸಿತು. ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ವೃತ್ತಿಪರರನ್ನು, ವೈದ್ಯರನ್ನು ಹಾಗೂ ಎಂಜಿನಿಯರ್‌ಗಳನ್ನು ದೇಶಕ್ಕೆ ನೀಡಿದ ಸಂಸ್ಥೆಗಳನ್ನು ಸ್ಥಾಪಿಸಿದ ಡಾ. ಡಿ.ವೈ. ಪಾಟೀಲ್ ಅವರ ನಿಧನಕ್ಕೆ ದೇಶದ ರಾಜಕೀಯ ಧುರೀಣರು, ಶಿಕ್ಷಣ ತಜ್ಞರು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬರೋಬ್ಬರಿ 97 ನದಿಗಳು ಹರಿಯುವ ಏಕೈಕ ಜಿಲ್ಲೆ..! ಎಲ್ಲೋ ಅಲ್ಲ ನಮ್ಮ ದೇಶದಲ್ಲೇ ಇದೆ..!
ಇನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಮೂತ್ರಪಿಂಡ ಕಸಿ! ಕೇಂದ್ರ ಸರ್ಕಾರ ಹೊಸ ಯೋಜನೆ ಘೋಷಣೆ