Kempegowda International Airport ಮುಂಬೈ-ಬೆಂಗಳೂರು ನಡುವಿನ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ಡೋರ್‌ನಲ್ಲಿ ಸಮಸ್ಯೆ ಕಂಡಿದ್ದರಿಂದ ಪ್ರಯಾಣಿಕೊಬ್ಬ ಅಂದಾಜು 100 ನಿಮಿಷ ಅಂದರೆ, 1 ಗಂಟೆ 40 ನಿಮಿಷಗಳ ಕಾಲ ವಿಮಾನದ ಟಾಯ್ಲೆಟ್‌ನಲ್ಲಿಯೇ ಕಾಲ ಕಳೆದಿರುವ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರು (ಜ.17): ವಿಮಾನದ ಸುರಕ್ಷತೆ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ವರದಿಯಾಗಿದೆ. ಮಂಗಳವಾರ ಮುಂಬೈ-ಬೆಂಗಳೂರು ನಡುವೆ ಸಂಚಾರ ಮಾಡುವ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಂದಾಜು 100 ನಿಮಿಷಗಳ ಕಾಲ ಟಾಯ್ಲೆಟ್‌ನಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿದೆ. ವಿಮಾನದ ಟಾಯ್ಲೆಟ್ ಡೋರ್ ಲಾಕ್ ಆಗಿದ್ದರಿಂದ ಹಾಗೂ ಅದನ್ನು ತೆಗೆಯಲು ಸಾಧ್ಯವಾಗದ ಕಾರಣ 1 ಗಂಟೆ 40 ನಿಮಿಷಗಳ ಕಾಲ ವಿಮಾನದ ಟಾಯ್ಲೆಟ್‌ನಲ್ಲಿಯೇ ಕಳೆದಿದ್ದಾರೆ. ಮಂಗಳವಾರ ಮುಜಾನೆ ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಟಾಯ್ಲೆಟ್‌ನಿಂದ ಹೊರಬರಲು ಸಾಧ್ಯವಾಗದೇ ಪ್ರಯಾಣಿಕ ಆಘಾತಗೊಂಡಿದ್ದ ಎಂದು ವರದಿಯಾಗಿದೆ. ಪ್ರಯಾಣಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಪೈಸ್ ಜೆಟ್ ಕಂಪನಿ ಕೂಡ ಈ ವಿಚಾರದಲ್ಲಿ ಅಧಿಕೃತವಾಗಿ ಹೇಳಿಕೆ ನೀಡಬೇಕಿದೆ. ಮಂಗಳವಾರ ಮುಂಜಾನೆ 2 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ SG-268 ಫ್ಲೈಟ್‌ನಲ್ಲಿ ಈ ಘಟನೆ ನಡೆದಿದೆ. ಮೂಲತಃ ಸೋಮವಾರ ರಾತ್ರಿ 10.55ಕ್ಕೆ ಹೊರಡಬೇಕಾಗಿದ್ದ ವಿಮಾನ ಹೊರಡುವುದು ತಡವಾಗಿತ್ತು.
ಕೆಐಎ ಮೂಲಗಳ ವರದಿಯ ಪ್ರಕಾರ, ವಿಮಾನದ 14ಡಿ ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕ, ವಿಮಾನ ಟೇಕ್‌ಆಫ್ ಆಗಿ ಸೀಟ್‌ಬೆಲ್ಟ್ ಸೈನ್‌ಗಳು ಆಫ್ ಆದ ಬಳಿಕ ಟಾಯ್ಲೆಟ್‌ಗೆ ಹೊಕ್ಕಿದ್ದ. ಆದರೆ, ವಿಮಾನದ ಟಾಯ್ಲೆಟ್ ಡೋರ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನಲೆಯಲ್ಲಿಯೇ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇದರಿಂದಾಗಿ ಇಡೀ ಪ್ರಯಾಣದ ಪೂರ್ತಿ ಅವರು ಟಾಯ್ಲೆಟ್‌ನಲ್ಲಿಯೇ ಕಳೆದಿದ್ದಾರೆ.
ಕೆಐಎ ನಿಲ್ದಾಣಕ್ಕೆ ವಿಮಾನ ಬಂದ ಬಳಿಕ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್‌ಗೆ ಈ ವಿಚಾರ ತಿಳಿದು, ಅವರು ಸಹಾಯಕ್ಕೆ ಧಾವಿಸಿದ್ದರು. ವಿಮಾನದಲ್ಲಿದ್ದ ಸಿಬ್ಬಂದಿ ಕೂಡ ಬಾಗಲನ್ನು ತೆಗೆಯುವ ಪ್ರಯತ್ನ ಮಾಡಿದ್ದರಾದರೂ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಮಧ್ಯ ಮಾರ್ಗದಲ್ಲಿಯೇ ಪರಿಸ್ಥಿತಿಯ ಗಂಭೀರತೆ ಅರಿತ ವಿಮಾನದ ಗಗನಸಖಿ, ಪೇಪರ್‌ನಲ್ಲಿ ನೋಟ್ ಬರೆದು ಅದನ್ನು ಪ್ರಯಾಣಿಕರಿಗೆ ತಲುಪಿಸಿದ್ದರು. ಆದಷ್ಟು ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಿ, ನಿಮ್ಮನ್ನು ಪಾರು ಮಾಡುವುದಾಗು ಅದರಲ್ಲಿ ಬರೆಯಲಾಗಿತ್ತು. ಅದರೊಂದಿಗೆ ನೋಟ್‌ನಲ್ಲಿ ಪ್ರಯಾಣಿಕರಿಗೆ ಶಾಂತವಾಗಿ ಇರುವಂತೆ ಸೂಚಿಸಲಾಗಿತ್ತು. ಟಾಯ್ಲೆಟ್ ಕಮೋಡ್‌ನ ಲಿಡ್‌ಅನ್ನು ಕ್ಲೋಸ್ ಮಾಡಿ ಅದರ ಮೇಲೆ ಕುಳಿತುಕೊಳ್ಳಿ ಎಂದು ತಿಳಿಸಲಾಗಿತ್ತು. ಅದರೊಂದಿಗೆ ವಿಮಾನ ಇಳಿಯುವ ವೇಳೆ ಆದಷ್ಟು ರಕ್ಷಣೆಯಿಂದ ಇರುವಂತೆ ತಿಳಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ಇಂಜಿನಿಯರ್ ಇದರ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ತಿಳಿಸಲಾಗಿತ್ತು.
ಇಂಡಿಗೋ ಪೈಲಟ್‌ಗೆ ಹಲ್ಲೆ ಮಾಡಿದ ವ್ಯಕ್ತಿ ಹನಿಮೂನ್‌ಗಾಗಿ ಗೋವಾಗೆ ಹೋಗ್ತಿದ್ದ!
ಮಂಗಳವಾರ ಮುಂಜಾನೆ 3.42 ಗಂಟೆಗೆ ವಿಮಾನ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿತ್ತು. ವಿಮಾನ ಲ್ಯಾಂಡ್ ಆದ ಬೆನ್ನಲ್ಲಿಯೇ ಗ್ರೌಂಡ್ ಸ್ಟಾಫ್ ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಎರಡು ಗಂಟೆಗಳ ಕಠಿಣ ಸಮಯದ ಬಳಿಕ, ತಮ್ಮ ಆತಂಕವನ್ನು ಯಶಸ್ವಿಯಾಗಿ ಸಹಿಸಿಕೊಂಡಿದ್ದ ವ್ಯಕ್ತಿಯನ್ನು ಟಾಯ್ಲೆಟ್‌ನ ಬಾಗಿಲು ಒಡೆದು ರಕ್ಷಿಸಲಾಯಿತು. ಘಟನೆಯಿಂದ ಉಂಟಾಗಿದ್ದ ಯಾವುದೇ ದೈಹಿಕ ಅಥವಾ ಮಾನಸಿಕ ತೊಂದರೆಯನ್ನು ಪರಿಹರಿಸಲು ಪ್ರಯಾಣಿಕರನ್ನು ತಕ್ಷಣವೇ ಪ್ರಥಮ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ವಾಯುಸೇನೆಯ ತರಬೇತಿ ವಿಮಾನ ಪತನ : ಇಬ್ಬರು ಪೈಲಟ್‌ಗಳ ದಾರುಣ ಸಾವು