ಪೊಲೀಸರ ಮುಂದೆಯೇ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿನಿ

Published : Oct 18, 2025, 05:17 PM IST
Delhi University Professor Slapped by Student

ಸಾರಾಂಶ

Professor Slapped by Student: ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನಲ್ಲಿ, ವಿದ್ಯಾರ್ಥಿ ಸಂಘಟನೆಗಳ ನಡುವಿನ ವಿವಾದಕ್ಕೆ ಸಂಬಂಧಿಸಿದ ಸಭೆಯ ವೇಳೆ ವಿದ್ಯಾರ್ಥಿನಿಯೊಬ್ಬಳು ಪೊಲೀಸರ ಸಮ್ಮುಖದಲ್ಲೇ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿನಿ

ನವದೆಹಲಿ: ದೆಹಲಿ ವಿವಿಗೆ ಸೇರಿದ ಡಾ ಭೀಮ್ ರಾವ್‌ ಅಂಬೇಡ್ಕರ್ ಕಾಲೇಜಿನ ಪ್ರೊಫೆಸರ್‌ ಒಬ್ಬರಿಗೆ ವಿದ್ಯಾರ್ಥಿನಿಯೊರ್ವಳು ಪೊಲೀಸರ ಮುಂದೆಯೇ ಕೆನ್ನೆಗೆ ಬಾರಿಸಿದಂತಹ ಘಟನೆ ನಡೆದಿದೆ. ಪ್ರೊಫೆಸರ್ ಹಾಗೂ ವಿದ್ಯಾರ್ಥಿಗಳ ನಡುವಣ ತೀವ್ರ ವಾಗ್ವಾದದ ನಂತರ ದೆಹಲಿ ಯುನಿವರ್ಸಿಟಿ ಸ್ಟುಡೆಂಡ್ ಯೂನಿಯನ್‌ನ ಜಂಟಿ ಕಾರ್ಯದರ್ಶಿ ದೀಪಿಕಾ ಜಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆಯ ಇತರ ಸದಸ್ಯರು ಪ್ರೊಫೆಸರ್‌ಗೆ ಥಳಿಸಿದ್ದಾರೆ. ಈ ಆಘಾತಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಕನಿಗೆ ಥಳಿಸಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ದೆಹಲಿ ವಿಶ್ವವಿದ್ಯಾಲಯದ ಬೋಧಕ ಸಮುದಾಯವೂ ಕೂಡ ವಿದ್ಯಾರ್ಥಿನಿಯ ಈ ಉದ್ಧಟತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯನ್ನು ಖಂಡಿಸಿದ್ದಾರೆ.

ವಿದ್ಯಾರ್ಥಿ ಸಂಘಟನೆಯ ಚುನಾವಣೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಘಟನೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಲೇಜಿನ ಶಿಸ್ತು ಸಮಿತಿಯ ಸಭೆಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಶಿಕ್ಷಕ ಸುಜಿತ್ ಕುಮಾರ್ ಅದರ ಸಂಚಾಲಕರಾಗಿದ್ದಾರೆ. ಹೆಸರು ಹೇಳಲು ಇಚ್ಚಿಸದ ದೆಹಲಿ ಯುನಿವರ್ಸಿಟಿಯ ಪ್ರೊಫೆಸರ್ ಒಬ್ಬರು ಈ ಘಟನೆಯನ್ನು ಖಂಡಿಸಿದ್ದು, ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ(National Students' Union of India) ಎನ್‌ಎಸ್‌ಯುಐನ ಅಭ್ಯರ್ಥಿ ಗೆದ್ದು ಅಧ್ಯಕ್ಷರಾಗಿದ್ದರು. ಆದರೆ ಎಬಿವಿಪಿಯವರು ಇತರ ಎರಡು ಪೋಸ್ಟ್‌ಗಳಲ್ಲಿ ಗೆಲುವು ಸಾಧಿಸಿದ್ದರು. ಆದರೆ ಎನ್‌ಎಸ್‌ಯುಐನಿಂದ ಚುನಾವಣೆಗೆ ನಿಂತು ಗೆದ್ದ ವಿಜಯಶಾಲಿಯನ್ನು ಎಬಿವಿಪಿ ಬೆಂಬಲಿಗರು ಥಳಿಸಿದ್ದು, ಈ ಹಲ್ಲೆಗೆ ಸಂಬಂಧಿಸಿದಂತೆ ಆತ ದೂರು ದಾಖಲಿಸಿದ್ದ.

ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ಸಭೆ ನಡೆದಿದ್ದು, ಎಬಿವಿಪಿ ಸದಸ್ಯರು ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್ (ಡಿಟಿಎಫ್) ಹೇಳಿಕೆಯಲ್ಲಿ ತಿಳಿಸಿದೆ. ಶಿಕ್ಷಕರ ಮೇಲೆ ಹಲ್ಲೆ ಮಾಡಿದ ದೀಪಿಕಾ ಝಾ ಕೂಡ ಈ ಎಬಿವಿಪಿ ಸದಸ್ಯರಾಗಿದ್ದಾರೆ. ಎಬಿವಿಪಿ ಸದಸ್ಯರು ಈ ಸಭೆಗೆ ಅನುಮತಿ ಇಲ್ಲದೇ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯ ಸಿಸಿಟಿವಿ ದೃಶ್ಯ ವೈರಲ್

ಸಭೆ ನಡೆದ ಕೋಣೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಅದರಲ್ಲಿ ದೀಪಿಕಾ ಝಾ ಪಕ್ಕದಲ್ಲಿ ಸೋಫಾದಲ್ಲಿ ಪ್ರೊಫೆಸರ್ ಸುಜಿತ್ ಕುಮಾರ್ ಕುಳಿತಿದ್ದಾರೆ. ಹಲವಾರು ಅಪರಿಚಿತ ಜನರೊಂದಿಗೆ ಅವರು ಚರ್ಚೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ. ಇದೇ ಸಭೆಯಲ್ಲಿ ಕನಿಷ್ಠ ನಾಲ್ಕು ದೆಹಲಿ ಪೊಲೀಸ್ ಸಿಬ್ಬಂದಿಗಳು ಸಹ ಇದ್ದಾರೆ. ಚರ್ಚೆ ಬಿಸಿಯಾಗುತ್ತಿದ್ದಂತೆ, ವಿದ್ಯಾರ್ಥಿನಿ ದೀಪಿಕಾ ಝಾ ಎದ್ದು ನಿಂತು ಕುಮಾರ್‌ಗೆ ಕಪಾಳಮೋಕ್ಷ ಮಾಡುವಂತೆ ತೋರುತ್ತದೆ. ನಂತರ ಒಬ್ಬ ಮಹಿಳಾ ಪೊಲೀಸ್ ಝಾ ಅವರನ್ನು ದೂರ ಎಳೆದುಕೊಂಡು ದೂರದಲ್ಲಿ ಕೂರಿಸುತ್ತಾಳೆ. ಈ ಮಧ್ಯೆ, ಆ ಪ್ರೊಫೆಸರ್‌ ಪ್ರತಿಕ್ರಿಯಿಸಲು ಎದ್ದೇಳಲು ಪ್ರಯತ್ನಿಸುತ್ತಿರುವಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಮತ್ತೆ ಅವರಿದ್ದ ಜಾಗಕ್ಕೆ ತಳ್ಳುತ್ತಾರೆ.

ವಿದ್ಯಾರ್ಥಿನಿಯಿಂದಲೇ ಹಲ್ಲೆಗೊಳಗಾದ ಪ್ರೊಫೆಸರ್ ಸುಜಿತ್ ಕುಮಾರ್ ಅವರು ಕಾಲೇಜು ಶಿಸ್ತು ಪಾಲನಾ ಸಮಿತಿಯ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದರು. ಈ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಡೆಮಾಕ್ರಟಿಕ್ ಟೀಚರ್ಸ್‌ ಫ್ರಂಟ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಕಾಲೇಜು ಆವರಣದಲ್ಲಿ ಎಬಿವಿಪಿ ಸಂಘಟನೆಯ ಸದಸ್ಯರು ಇತರ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಈ ಬಗ್ಗೆ ನಮಗೆ ಸಂಜೆ ತಡವಾಗಿ ದೂರು ಬಂದಿದೆ. ತನಿಖಾಧಿಕಾರಿಗಳು ವೀಡಿಯೊವನ್ನು ನೋಡಿದ್ದಾರೆ. ಅವರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುತ್ತಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೀಪಿಕಾ ಝಾ, ತಾನು ಶಿಕ್ಷಕನಿಗೆ ಕಪಾಳಮೋಕ್ಷ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಶಿಕ್ಷಕರು ತನ್ನನ್ನು ಮಾತಿನಲ್ಲಿ ನಿಂದಿಸಿದ್ದರಿಂದ ಮತ್ತು ತನ್ನನ್ನು ದಿಟ್ಟಿಸಿ ನೋಡಿ ನಕ್ಕಿದ್ದರಿಂದ ಹಾಗೆ ಮಾಡಿದ್ದಾಗಿ ಆಕೆ ಹೇಳಿದ್ದಾಳೆ.

ಮೊನ್ನೆ ವಿದ್ಯಾರ್ಥಿ ಪರಿಷತ್ತಿನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಮ್ಮನ್ನು ಕರೆಯಲಾಗಿತ್ತು. ಆ ಸಮಯದಲ್ಲಿ, ಎನ್‌ಎಸ್‌ಯುಐಗೆ ಸೇರಿದ ವ್ಯಕ್ತಿಯೊಬ್ಬರು ವೇದಿಕೆಯಲ್ಲಿದ್ದರು ಆದರೆ ಅವರು ವಿದ್ಯಾರ್ಥಿ ಪ್ರತಿನಿಧಿಯಾಗಿರಲಿಲ್ಲ, ಆದ್ದರಿಂದ ಕೆಲವು ಎಬಿವಿಪಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಸರಳ ದೂರು ನೀಡಿದರು. ಆಗ, ದೂರುದಾರರಲ್ಲಿ ಒಬ್ಬರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಅದಕ್ಕಾಗಿಯೇ ನಾವು ಸಂಬಂಧಪಟ್ಟ ಪ್ರಾಧ್ಯಾಪಕರೊಂದಿಗೆ ಮಾತನಾಡಲು ಅಲ್ಲಿದ್ದೆವು. ಆದರೆ ಈ ಬಗ್ಗೆ ಚರ್ಚಿಸುವಾಗ ಅವರ ಸಾರ್ವಜನಿಕವಾಗಿ ಧೂಮಪಾನ ಮಾಡುವುದನ್ನು ನೋಡಿದೆ ಮತ್ತು ಅವರ ನಡೆ ವಿದ್ಯಾರ್ಥಿಗಳ ಮೇಲೆ ಒಳ್ಳೆಯ ಅನಿಸಿಕೆ ಬರುವುವುದಿಲ್ಲ ಎಂದು ನಾನು ಅವರಿಗೆ ಹೇಳಿದಾಗ, ಅವರು ನನ್ನನ್ನು ಮಾತಿನಲ್ಲಿ ನಿಂದಿಸಿದರು. ತಮ್ಮ ಧೂಮಪಾನದಿಂದ ನಾನು ಆರಾಮದಾಯಕವಾಗಿಲ್ಲ ಎಂದು ಹೇಳಿದ ನಂತರವೂ ಅವನು ನನ್ನನ್ನು ದಿಟ್ಟಿಸಿ ನೋಡಿ ಮುಗುಳ್ನಗುತ್ತಿದ್ದನು. ಅವನು ನನ್ನನ್ನು ಮಾತಿನಲ್ಲಿ ನಿಂದಿಸಿದಾಗ, ನಾನು ಅವನಿಗೆ ಕಪಾಳಮೋಕ್ಷ ಮಾಡಿದೆ ಅದನ್ನು ನಾನು ಮಾಡಬಾರದಿತ್ತುಎಂದು ಆಕೆ ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸರು ಎಸೆದ ಕಸವನ್ನು ಪೊಲೀಸರ ಕೈಲೇ ಹೆಕ್ಕಿಸಿದ ಕೊಡಗಿನ ಜನ
ಇದನ್ನೂ ಓದಿ: ಮದ್ವೆ ದಿನ ವಧುವಿನಂತೆ ವೇಷ ಧರಿಸಿ ವರನ ಕಾಡಿಸಿದ ಸ್ನೇಹಿತರು: ವೀಡಿಯೋ ಭಾರಿ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ