ನೋಡ ನೋಡುತ್ತಿದ್ದಂತೆ 2022 ನೇ ಇಸ್ವಿ ಸರಿದು ಹೋಗಿದೆ. 2023 ಕ್ಕೆ ಕಾಲಿಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಇಣುಕು ನೋಟ ಇಲ್ಲಿದೆ.
ಈ ವರ್ಷ 10 ವಿಧಾನಸಭೆ ಚುನಾವಣೆಗಳು
2023 ರಲ್ಲಿ 10 ರಾಜ್ಯಗಳಿಗೆ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ- ಇವು ಚುನಾವಣೆ ನಡೆಯಲಿರುವ ದೊಡ್ಡ ರಾಜ್ಯಗಳು. ಇನ್ನು ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಮಿಜೋರಂನಂಥ ಸಣ್ಣ ಈಶಾನ್ಯ ರಾಜ್ಯಗಳೂ ಈ ವರ್ಷವೇ ಚುನಾವಣೆ ಎದುರಿಸಲಿವೆ. ಇದೇ ವೇಳೆ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಆದಾಗಿನಿಂದ ವಿಧಾನಸಭೆ ಚುನಾವಣೆ ನಡೆದಿಲ್ಲ. 2023 ರಲ್ಲೇ ಈ ಕೇಂದ್ರಾಡಳಿತ ಪ್ರದೇಶದಲ್ಲೂ ಚುನಾವಣೆ ನಡೆಸುವ ಇರಾದೆ ಸರ್ಕಾರಕ್ಕೆ ಇದೆ. ಹೀಗಾಗಿ 10 ವಿಧಾನಸಭೆ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆಯಿದೆ.
ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ
2021 ರಿಂದ ಮುಂದೂಡಿಕೆ ಆಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2023 ರಲ್ಲಿ ಕಾಲ ಕೂಡಿ ಬರುವುದು ನಿಶ್ಚಿತವಾಗಿದೆ. ಕೋವಿಡ್ ಸೇರಿ ಅನೇಕ ಕಾರಣಕ್ಕೆ ಪದೇ ಪದೇ ಮುಂದೂಡಲಾಗುತ್ತಿದ್ದ ಸಾಹಿತ್ಯ ಸಮ್ಮೇಳನ ಈ ಸಲ ಹಾವೇರಿಯಲ್ಲಿ ನಡೆಯಲಿದೆ. ಜನವರಿ 6ರಿಂದ 8ರವರೆಗೆ ದಿನಾಂಕ ನಿಗದಿಯಾಗಿದೆ. ಪದ್ಮಶ್ರೀ ಪುರಸ್ಕೃತ ಸಾಹಿತಿ ದೊಡ್ಡರಂಗೇಗೌಡ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಿದ್ಧತೆಗಳು ಭರದಿಂದ ನಡೆದಿವೆ. ಹಾವೇರಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಎಂಬುದು ಇನ್ನೊಂದು ವಿಶೇಷ.
ಮಾನವ ಸಹಿತ ಗಗಗನಯಾನ ಈ ವರ್ಷ?
ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನವಾದ ‘ಗಗನಯಾನ’ ಕೋವಿಡ್ ಸೇರಿ ಹಲವಾರು ಕಾರಣಗಳಿಂದ ಪದೇ ಪದೇ ಮುಂದೂಡಿಕೆ ಆಗುತ್ತಲೇ ಬಂದಿತ್ತು. ಆದರೆ 2023 ರ ಅಂತ್ಯಭಾಗ ಅಥವಾ 2024 ರ ಮೊದಲಾರ್ಧದಲ್ಲಿ ಇದು ನಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 3 ಗಗನಯಾನಿಗಳೊಂದಿಗೆ ಗಗನಯಾನ ನಡೆಸುವ ಉದ್ದೇಶ ಹೊಂದಿದೆ. ಇದೇ ವೇಳೆ ಚಂದ್ರಯಾನ-3 ಕಾರ್ಯಕತಕ್ಕೂ ಇಸ್ರೋ ಸಿದ್ಧತೆ ನಡೆಸುತ್ತಿದೆ. ಇದು ಜೂನ್ 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಮತ್ತೊಂದು ಲ್ಯಾಂಡಿಂಗ್ ಮಾಡುವ ಇರಾದೆ ಹೊಂದಿದೆ.
ವಂದೇಭಾರತ್ ಎಕ್ಸ್‌ಪ್ರೆಸ್ 75 ಕ್ಕೆ ಹೆಚ್ಚಿಸುವ ಗುರಿ
ದೇಶದ ಅತಿವೇಗದ ರೈಲು ಎನ್ನಿಸಿಕೊಂಡಿರುವ ವಂದೇಭಾರತ್ ಎಕ್ಸ್‌ಪ್ರೆಸ್‌ಗಳ ಸಂಖ್ಯೆಯನ್ನು 75 ಕ್ಕೆ ಹೆಚ್ಚಿಸುವ ಗುರಿ ಕೇಂದ್ರ ಸರ್ಕಾರಕ್ಕಿದೆ. ಇದಕ್ಕಾಗಿ ಅದು 2023 ರ ಆ.15 ರ ಗಡುವು ಹಾಕಿಕೊಂಡಿದೆ. 2022 ರ ಅಂತ್ಯಕ್ಕೆ 6 ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ಗುರಿ ಮುಟ್ಟಲು 69 ರೈಲುಗಳ ಆರಂಭ ಬಾಕಿ ಇದೆ.
ಭಾರತದಲ್ಲಿ ಜಿ20 ಶೃಂಗಸಭೆ
ಭಾರತಕ್ಕೆ ಈ ಸಲ ಜಗತ್ತಿನ ಅತಿ ಬಲಿಷ್ಠ ದೇಶಗಳ ಸಮೂಹವಾದ ಜಿ-20 ರ ಅಧ್ಯಕ್ಷತೆ ಒಲಿದುಬಂದಿದೆ. ಹೀಗಾಗಿ 2023 ರಲ್ಲಿ ಸೆ.9 ಹಾಗೂ 10 ರಂದು ನವದೆಹಲಿಯಲ್ಲಿ ಜಿ20 ವಾರ್ಷಿಕ ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಜಿ-20 ಸದಸ್ಯ ದೇಶಗಳು ಹಾಗೂ ಮಿತ್ರದೇಶಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಶೃಂಗಕ್ಕೆ ಪೂರ್ವಭಾವಿಯಾಗಿ ಅನೇಕ ರಾಜ್ಯಗಳಲ್ಲಿ ಜಿ-20 ಪ್ರತಿನಿಧಿಗಳ ಸುಮಾರು 20 ಸಭೆಗಳು ವರ್ಷವಿಡೀ ನಡೆಯಲಿವೆ. ಇತ್ತೀಚೆಗೆ ಸಭೆಯೊಂದು ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ. ಒಟ್ಟಾರೆ ಕರ್ನಾಟಕದಲ್ಲಿ 14 ಸಭೆಗಳು ಆಯೋಜನೆ ಆಗಲಿದ್ದು, ಬಹುತೇಕ ಸಭೆಗಳು 2023 ರಲ್ಲಿ ನಡೆಯಲಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ 10 , ಹಂಪಿಯಲ್ಲಿ 2 , ಮೈಸೂರಿನಲ್ಲಿ 1 ಸಭೆ ನಿಗದಿ ಆಗಿವೆ.
ಜನಸಂಖ್ಯೆಯಲ್ಲಿ ಭಾರತ ವಿಶ್ವ ನಂ.1
ಚೀನಾ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಲಿದೆ ಭಾರತ
ಸದ್ಯ 138 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವದಲ್ಲಿ 2 ನೇ ಸ್ಥಾನದಲ್ಲಿರುವ ಭಾರತ, 2023 ರಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಲಿದೆ ಎನ್ನಲಾಗಿದೆ. ಹಾಲಿ ಚೀನಾದ ಜನಸಂಖ್ಯೆ 144 ಕೋಟಿ ಇದೆ. ಆದರೆ ಚೀನಾದಲ್ಲಿ ಜನಸಂಖ್ಯಾ ಬೆಳವಣಿಗೆ ದರ ದಾಖಲೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವುದು ಮತ್ತು ಭಾರತದಲ್ಲಿ ಜನಸಂಖ್ಯಾ ಗತಿ ಏರಿಕೆಯ ಹಾದಿಯಲ್ಲೇ ಇರುವ ಕಾರಣ, 2023 ರ ಅಂತ್ಯದ ವೇಳೆಗೆ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನಕ್ಕೆ ಏರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
ಬರಲಿದೆ, ಚಾಲಕರಹಿತ ಹೈಸ್ಪೀಡ್ ರೈಲು
ವಿಶ್ವದಲ್ಲೇ ಮೊದಲ ಬಾರಿಗೆ ಸ್ವಯಂಚಾಲಿತ ರೈಲು ಸೇವೆ ಆರಂಭ
ಹೈಸ್ಪೀಡ್ ರೈಲುಗಳ ನಿರ್ಮಾಣದಲ್ಲಿ ಮುಂಚೂಣಿ ದೇಶಗಳ ಪೈಕಿ ಒಂದಾದ ಫ್ರಾನ್ಸ್, 2023 ರಲ್ಲಿ ಸ್ವಯಂಚಾಲಿತ, ಚಾಲಕ ರಹಿತ ರೈಲುಗಳ ಸೇವೆಗೆ ಚಾಲನೆ ನೀಡಲಿದೆ. 2019 ರಿಂದಲೂ ಈ ಮಾದರಿಯ ರೈಲುಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಇದೀಗ ಕನಸು ನನಸಾಗಿಲು ಫ್ರಾನ್ಸ್‌ನ ಸರ್ಕಾರಿ ಸ್ವಾಮ್ಯದ ಎಸ್‌ಎನ್‌ಸಿಎಫ್ ಕಂಪನಿ ಸಜ್ಜಾಗಿದೆ. ಈ ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿವೆ. ಹಳಿಯ ಮೇಲೆ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದರೆ ಸ್ವಯಂ ಬ್ರೇಕ್ ಆನ್ ಆಗಿ ರೈಲು ನಿಲ್ಲುವ ವ್ಯವಸ್ಥೆ ಇದರಲ್ಲಿ ಇರಲಿದೆ. ಹೀಗೆ ಚಾಲಕ ರಹಿತ ಹೈಸ್ಪೀಡ್ ರೈಲು ಸೇವೆಗೆ ಮುಂದಾಗಿರುವ ವಿಶ್ವದ ಪ್ರಥಮ ದೇಶ ಫ್ರಾನ್ಸ್.
ಚಂದ್ರನ ದಕ್ಷಿಣ ಧ್ರುವಕ್ಕೆ ಅಮೆರಿಕ ನೌಕೆ
ಬಿಸಿಲು ಬೀಳದ ಸ್ಥಳದ ಅಧ್ಯಯನಕ್ಕೆ ನಾಸಾ ಸಜ್ಜು
ಇಡೀ ವಿಶ್ವದ ವಿಜ್ಞಾನಿಗಳ ಕುತೂಹಲದ ಗಣಿಯಾಗಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಅಮೆರಿಕ ಕೂಡಾ ತನ್ನ ನೌಕೆಯನ್ನು 2023 ರಲ್ಲಿ ಕಳುಹಿಸಿಕೊಡಲು ಸಜ್ಜಾಗಿದೆ. ವೈಪರ್ (ವೋಲಟೈಲ್ ಇನ್ವೆಸ್ಟಿಗೇಟಿಂಗ್ ಪೋಲಾರ್ ಎಕ್ಸ್‌ಪ್ಲೋರೇಷನ್ ರೋವರ್) ಹೆಸರಿನ ಈ ನೌಕೆ, ಯಾವುದೇ ಸಮಯದಲ್ಲೂ ಸೂರ್ಯನ ಕಿರಣಗಳು ಬೀಳದ ಚಂದ್ರನ ಮೇಲ್ಮೈಯನ್ನು ಅಧ್ಯಯನ ನಡೆಸಲಿದೆ. ಈ ಪ್ರದೇಶದ ನಕ್ಷೆ ತಯಾರು, ಮಂಜುಗಡ್ಡೆ ರೂಪದಲ್ಲಿರುವ ನೀರಿನ ಸ್ವರೂಪವನ್ನು ಅರಿಯುವ ಯತ್ನವನ್ನು ಈ ಯಾನದ ಮೂಲಕ ಮಾಡಲು ನಾಸಾ ವಿಜ್ಞಾನಿಗಳೂ ನಿರ್ಧರಿಸಿದ್ದಾರೆ. ಸಂಪೂರ್ಣವಾಗಿ ಬಿಸಿಲು ಬೀಳದ ಪ್ರದೇಶ, ಭಾಗಶಃ ಬಿಸಿಲು ಬೀಳುವ ಪ್ರದೇಶ ಮತ್ತು ಸದಾ ಬಿಸಿಲು ಬೀಳುವ ಪ್ರದೇಶ ಮಾಹಿತಿಯನ್ನು ನೌಕೆ ಸಂಗ್ರಹಿಲಿದೆ. ಒಟ್ಟು 100 ದಿನಗಳ ಕಾಲ ನೌಕೆ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಲಿದೆ.
ಹಬಲ್‌ಗಿಂತ 350 ಪಟ್ಟು ಹೆಚ್ಚು
ಸಾಮರ್ಥ್ಯದ ಟೆಲಿಸ್ಕೋಪ್
ಈ ವರ್ಷ ಉಡಾವಣೆ
ಒಂದೇ ಬಾರಿ ಭೂಮಿಯ ಶೆ.40ರಷ್ಟು ಫೋಟೋ ತೆಗೆವ ಸಾಮರ್ಥ್ಯ ಭೂಮಿಯ ಚಿತ್ರಗಳನ್ನು ಸೆರೆಹಿಡಿಯಲು 1990 ರಲ್ಲಿ ನಾಸಾ ಹಾರಿಬಿಟ್ಟಿದ್ದ ಹಬಲ್ ಸ್ಪೇಸ್ ಟೆಲಿಸ್ಕೋಪ್‌ಗಿಂತ 350 ಪಟ್ಟು ಹೆಚ್ಚು ಸಾಮರ್ಥ್ಯದ ಟೆಲಿಸ್ಕೋಪ್ ಹಾರಿಬಿಡಲು ಚೀನಾ ಸಜ್ಜಾಗಿದೆ. ಕ್ಸುಟಿಯಾನ್ ಹೆಸರಿನ ಈ ಟೆಲಿಸ್ಕೋಪ್ ಇಡೀ ಭೂಮಿಯ ಶೇ.40ರಷ್ಟು ಭಾಗವನ್ನು ಒಂದೇ ಬಾರಿಗೆ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಬಲ್ಲ ಭಾರೀ ಸಾಮರ್ಥ್ಯ ಹೊಂದಿದೆ. ಭೂಮಿಯ ಚಿತ್ರದ ಜೊತೆಗೆ ಬಾಹ್ಯಾಕಾಶದಲ್ಲಿರುವ ಕಪ್ಪುರಂಧ್ರಗಳು, ಗ್ಯಾಲಾಕ್ಸಿಗಳು, ಡಾರ್ಕ್ ಮ್ಯಾಟರ್, ಮಿಲ್ಕಿ ವೇ, ಕ್ಷುದ್ರಗ್ರಹಗಳ ಮೇಲೂ ನಿಗಾ ಇಡುವ ಕೆಲಸ ಮಾಡಲಿದೆ.
ಡಿಜಿಟಲ್ ಕರೆನ್ಸಿ ಮತ್ತಷ್ಟು ವ್ಯಾಪಕ
2009 ರಲ್ಲಿ ಮೊದಲ ಬಾರಿಗೆ ಸೃಷ್ಟಿಯಾಗಿದ್ದ ಬ್ಲಾಕ್‌ಚೈನ್ ಆಧರಿತ ಕ್ರಿಪ್ಟೋ ಕರೆನ್ಸಿಗಳ ಬಳಕೆ ಈ ವರ್ಷ ಇನ್ನಷ್ಟು ವ್ಯಾಪಕವಾಗುವ ಎಲ್ಲಾ ಸಾಧ್ಯತೆಗಳಿವೆ. ಭಾರತ ಸೇರಿದಂತೆ ಹಲವು ದೇಶಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಗಳನ್ನು ರೂಪಿಸಿದ್ದು, ಅವುಗಳನ್ನು ವ್ಯಾಪಕ ಪ್ರಮಾಣದಲ್ಲಿ ಬಳಕೆಗೆ ಮುಂದಾಗಿವೆ. ನಿರ್ವಹಣಾ ವೆಚ್ಚ ಕಡಿಮೆ, ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಪೂರಕವಾದ ಈ ಡಿಜಿಟಲ್ ಕರೆನ್ಸಿ, ಜಾಗತಿಕ ಹಣಕಾಸು ವಲಯದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎನ್ನಲಾಗಿದೆ. ಡಿಜಿಟಲ್ ಕರೆನ್ಸಿಯ ಮೂಲ ಆಧಾರವಾದ ಬ್ಲಾಕ್‌ಚೈನ್ ತಂತ್ರಜ್ಞಾನವು ಕಳೆದ 500 ವರ್ಷಗಳಲ್ಲಿ ಹಣಕಾಸು ವಲಯದಲ್ಲಿ ಆದಂಥ ಬೃಹತ್ ಸಂಶೋಧನೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಬಣ್ಣಿಸಿತ್ತು.
ಮೆದುಳಲ್ಲಿ ಚಿಪ್ ಸೇರಿಸುವ ತಂತ್ರಜ್ಞಾನ
ಮಾನವರ ಮೆದುಳಿಗೆ ಚಿಪ್ ಅಳವಡಿಸುವ ಹೊಸ ತಂತ್ರಜ್ಞಾನದ ಬಳಕೆಗೆ ಎಲಾನ್ ಮಸ್ಕ್ ಒಡೆತನದ ನ್ಯೂರೋಲಿಂಕ್ ಕಂಪನಿ ಅಮೆರಿಕ ಸರ್ಕಾರದ ಅನುಮತಿ ಕೋರಿದೆ. ಒಂದು ವೇಳೆ ಅನುಮತಿ ಸಿಕ್ಕರೆ ಮಾನವರ ಮೆದುಳಿಗೆ ವಿಶೇಷ ಚಿಪ್ ಅಳವಡಿಕೆ ಮೂಲಕ ಮಾನವರ ದೇಹವನ್ನು ನಿಯಂತ್ರಿಸುವ ಕೆಲಸಕ್ಕೆ ಕಂಪನಿ ಕೈ ಹಾಕಲಿದೆ. ಒಂದು ವೇಳೆ ಯೋಜನೆ ಯಶಸ್ವಿಯಾದರೆ ವಿವಿಧ ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹೊಸ ಜೀವದಾನ ಸಿಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಯೋಜನೆಗೆ ಅನುಮತಿ ಸಿಗುವ ಬಗ್ಗೆ ಮತ್ತು ಸಿಕ್ಕ ಬಳಿಕ ಯೋಜನೆಯ ಯಶಸ್ಸಿನ ಬಗ್ಗೆ ಇಡೀ ವಿಶ್ವ ಕುತೂಹಲದ ಕಣ್ಣಿನಿಂದ ಕಾಯುತ್ತಿದೆ.
ಮರದಲ್ಲಿ ನಿರ್ಮಿಸಿದ ಉಪಗ್ರಹ ಉಡ್ಡಯನ!
ಮರದಲ್ಲಿ ನಿರ್ಮಿಸಿದ ವಿಶ್ವದ ಮೊಟ್ಟಮೊದಲ ಉಪಗ್ರಹ ಈ ವರ್ಷ ಆಗಸಕ್ಕೆ ಹಾರುವ ನಿರೀಕ್ಷೆ ಇದೆ. ಪರಿಸರ ಸ್ನೇಹಿ ಮತ್ತು ನಿರ್ಮಾಣ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಈ ಉಪಗ್ರಹ ನಿರ್ಮಿಸಲಾಗುತ್ತಿದೆ. ಉಪಗ್ರಹ ತನ್ನ ಆಯುಷ್ಯ ಮುಗಿದ ಬಳಿಕ ಭೂಮಿಯ ವಾತಾವರಣ ಪ್ರವೇಶಿಸುವ ವೇಳೆ ಸಂಭವಿಸುವ ಉಷ್ಣಾಂಶದಿಂದ ಪೂರ್ಣ ಸುಟ್ಟುಹೋಗುವ ಕಾರಣ ಪರಿಸರಕ್ಕೆ ಯಾವುದೇ ಹಾನಿಯಾಗದು ಎಂದು ಜಪಾನ್ ವಿಜ್ಞಾನಿಗಳು ಹೇಳಿದ್ದಾರೆ.
ಈ ವರ್ಷ ಕೋವಿಡ್ ಅಂತ್ಯ?
ಇಡೀ ವಿಶ್ವವನ್ನು 3 ವರ್ಷ ಕಾಡಿದ ಸಾಂಕ್ರಾಮಿಕ
2019 ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ನಂತರದ ಮೂರು ವರ್ಷಗಳಲ್ಲಿ ಜಗತ್ತಿನಾದ್ಯಂತ 75 ಕೋಟಿ ಜನರಿಗೆ ವ್ಯಾಪಿಸಿ, 66 ಲಕ್ಷ ಜನರನ್ನು ಬಲಿಪಡೆದ, ಜಾಗತಿಕ ಆರ್ಥಿಕತೆಗೆ ಲಕ್ಷಾಂತರ ಕೋಟಿ ಹಾನಿ ಮಾಡಿದ ಕೋವಿಡ್ ಸಾಂಕ್ರಾಮಿಕ ಈ ವರ್ಷ ಬಹುತೇಕ ಅಂತ್ಯವಾಗಬಹುದು ಎಂಬ ನಿರೀಕ್ಷೆ ಇದೆ. ಈ ಕನಸು ನನಸಾದಲ್ಲಿ ವಿಶ್ವದ ಸಮಾಧಾನದ ನಿಟ್ಟುಸಿರು ಬಿಡಲಿದೆ. ವೈರಸ್ ಸೃಷ್ಟಿಯಾಗಿದ್ದು ಹೇಗೆ ಎಂಬ ಬಗ್ಗೆ ಅಧಿಕೃತ ವರದಿಗಳು ಇದುವರೆಗೂ ಬಂದಿಲ್ಲವಾದರೂ, ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಚೀನಾ ವಿಜ್ಞಾನಿಗಳೇ ಸೃಷ್ಟಿಸಿದ ಈ ವೈರಸ್ ಆಕಸ್ಮಿಕವಾಗಿ ಸೋರಿಕೆಯಾಗಿದೆ ಎಂಬ ವಾದವೇ ಹೆಚ್ಚಿನ ಬಲ ಪಡೆದಿದೆ.
ಯೌವನ ಮರಳುವ ತಂತ್ರಜ್ಞಾನ ಆರಂಭದ ಕನಸು
ಮಾನವನ ದೇಹದಲ್ಲಿ ಯಾವುದೇ ಆಗುಹೋಗುಗಳನ್ನು ನಿಯಂತ್ರಿಸುವುದು ನಮ್ಮ ದೇಹದಲ್ಲಿನ ವಂಶವಾಹಿಗಳು. ಒಳ್ಳೆಯದ್ದು, ಕೆಟ್ಟದ್ದು, ಎರಡಕ್ಕೂ ಇದೇ ಕಾರಣ. ಈ ನಡುವೆ ಜೀವಂತ ವ್ಯಕ್ತಿಯ ಡಿಎನ್‌ಎ ತಿದ್ದುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಯಶಸ್ವಿಯಾಗಿ ಸಿದ್ಧಿಸಿಕೊಂಡಿದ್ದಾರೆ. ಯಾವುದೇ ವಂಶವಾಹಿಯನ್ನು ತಿದ್ದುವ ಯತ್ನವು ನೈತಿಕತೆಯ ಪ್ರಶ್ನೆಯನ್ನು ಹುಟ್ಟುಹಾಕಿದೆಯಾದರೂ ಆನುವಂಶಿಕವಾಗಿ ಕಾಣಿಸಿಕೊಳ್ಳುವ ಹಲವು ಅನಾರೋಗ್ಯದ ಸಮಸ್ಯೆಗೆ ಈ ತಂತ್ರಜ್ಞಾನ ರಾಮಬಾಣವಾಗಲ್ಲದು ಎಂಬ ಖುಷಿಯ ಸಂಗತಿಯೂ ಇದೆ. ಜೊತೆಗೆ ಮಾನವರಲ್ಲಿ ವೃದ್ಧಾಪ್ಯಕ್ಕೆ ಕಾರಣವಾಗುವ ಜೀವಕೋಶಗಳನ್ನು ಬದಲಾಯಿಸಿ ಸದಾ ಕಾಲ ಯೌವನವನ್ನು ಕಾಪಾಡಿಕೊಳ್ಳುವ ಕನಸೂ ಈ ತಂತ್ರಜ್ಞಾನದಿಂದ ನನಸಾಗುವ ನಿರೀಕ್ಷೆಯಲ್ಲಿ ಅಮೆರಿಕದ ವಿಜ್ಞಾನಿಗಳ ತಂಡ ಇದೆ.
New Year 2023: ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ ?
ಹಾಕಿ ವಿಶ್ವಕಪ್
15 ನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್‌ಗೆ ಈ ಬಾರಿ ಭಾರತ ಆತಿಥ್ಯ ವಹಿಸಲಿದ್ದು, 2023 ರ ಜ.13ರಿಂದ 29 ರ ವರೆಗೆ ಒಡಿಶಾದ ಭುವನೇಶ್ವರ್ ಹಾಗೂ ರೂರ್ಕೆಲಾದಲ್ಲಿ ಟೂರ್ನಿ ನಡೆಯಲಿದೆ. ಭಾರತಕ್ಕೆ 4ನೇ ಬಾರಿ ಟೂರ್ನಿಯ ಆತಿಥ್ಯ ಹಕ್ಕು ಲಭಿಸಿದೆ. 1982 ರಲ್ಲಿ ಬಾಂಬೆ ಹಾಗೂ 2010 ರಲ್ಲಿ ನವದೆಹಲಿಯಲ್ಲಿ ವಿಶ್ವಕಪ್ ನಡೆದಿದ್ದರೆ, 2018ರ ಟೂರ್ನಿಗೆ ಭುವನೇಶ್ವರ ಆತಿಥ್ಯ ವಹಿಸಿತ್ತು. ಈ ಬಾರಿ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ 1975 ರ ಬಳಿಕ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಳ್ಳಲು ಕಾತರಿಸುತ್ತಿದೆ. ‘ಡಿ’ ಗುಂಪಿನಲ್ಲಿರುವ ಭಾರತ ಇಂಗ್ಲೆಂಡ್, ಸ್ಪೇನ್, ವೇಲ್ಸ್ ವಿರುದ್ಧ ಸ್ಪರ್ಧಿಸಲಿದೆ.
ರೊಮ್ಯಾಂಟಿಕ್ ಮೂಡ್‌ನಲ್ಲಿ ಮಲೈಕಾ; ಅರ್ಜುನ್ ಕಪೂರ್‌ಗೆ ಕಿಸ್ ಮಾಡಿ 2023 ಸ್ವಾಗತಿಸಿದ ಹಾಟ್ ನಟಿ
ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್
8ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 10 ರಿಂದ 26ರ ವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಭಾರತ ಸೇರಿದಂತೆ 10 ತಂಡಗಳು ಸ್ಪರ್ಧಿಸಲಿದ್ದು, ತಲಾ 5 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ, ವೆಸ್ಟ್‌ಇಂಡೀಸ್ ಜೊತೆ ಸ್ಥಾನ ಪಡೆದಿದೆ. ಟೂರ್ನಿಗೆ ದ.ಆಫ್ರಿಕಾದ 3 ನಗರಗಳಾದ ಕೇಪ್‌ಟೌನ್, ಪೋರ್ಟ್ ಎಲಿಜಬೆತ್, ಪಾರ್ಲ್ ಆತಿಥ್ಯ ವಹಿಸಲಿವೆ. 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಕಳೆದ ಬಾರಿ ರನ್ನರ್-ಅಪ್ ಭಾರತ ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.