ಕೇರಳದಲ್ಲಿ ವ್ಯಕ್ತಿಯೊಬ್ಬನ ಗುಪ್ತಾಂಗದಲ್ಲಿ ಬೋಲ್ಟ್ ನಟ್ ಸಿಲುಕಿಕೊಂಡಿದ್ದು, ವೈದ್ಯರು ಅಗ್ನಿ ಶಾಮಕ ದಳದ ಸಹಾಯ ಕೋರಿದ್ದಾರೆ. ಕುಡಿದು ಮಲಗಿದ್ದಾಗ ಯಾರೋ ಬೋಲ್ಟ್ ನಟ್ ಹಾಕಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ನಟ್ ತೆಗೆದು ರಕ್ಷಿಸಿದ್ದಾರೆ.
ವ್ಯಕ್ತಿಯೊಬ್ಬನ ಗುಪ್ತಾಂಗದಲ್ಲಿ ಸಿಲುಕಿಕೊಂಡಿದ್ದ ಬೋಲ್ಟ್ ನಟ್ ಅನ್ನು ತೆಗೆಯಲು ವೈದ್ಯರು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದಂತಹ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಕುಡಿದು ಮಲಗಿದ್ದ ವೇಳೆ ಯಾರು ತನ್ನ ಗುಪ್ತಾಂಗಕ್ಕೆ ಬೋಲ್ಡ್ ನಟ್ ಹಾಕಿದ್ದಾರೆ ಎಂದು ಆ ವ್ಯಕ್ತಿ ವೈದ್ಯರ ಬಳಿ ಹೇಳಿದ್ದಾನೆ. ಕೇರಳದ ಕಾಸರಗೋಡು ಸಮೀಪದ ಕಾಂಞಂಗಾಡಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 46 ವರ್ಷದ ವ್ಯಕ್ತಿಯೊಬ್ಬರು ತನ್ನ ಜನನಾಂಗದ ಸುತ್ತಲೂ ಸಿಲುಕಿಕೊಂಡಿದ್ದ ಒಂದೂವರೆ ಇಂಚಿನ ಬೋಲ್ಟ್ ನಟ್‌ನ್ನು ತಾವಾಗಿಯೇ ತೆಗೆಯಲು ಎರಡು ದಿನಗಳ ಕಾಲ ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ, ಇದರಿಂದ ಜನನಾಂಗದಲ್ಲಿ ಊತ ಉಂಟಾಗಿದ್ದು, ಮೂತ್ರ ವಿಸರ್ಜನೆ ಮಾಡುವುದಕ್ಕೂ ಅವರು ಚಡಪಡಿಸಿದ್ದಾರೆ. ಕೊನೆಗೆ ವಿಧಿ ಇಲ್ಲದೇ ಮಂಗಳವಾರ ರಾತ್ರಿ ಅವರು ಜಿಲ್ಲಾಸ್ಪತ್ರೆಯ ವೈದ್ಯರ ಸಹಾಯ ಕೋರಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಕೂಡ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ್ದ ನಟ್ ಬೋಲ್ಟನ್ನು ತೆಗೆಯಲು ತಮಗೆ ತಿಳಿದ ಎಲ್ಲಾ ಸಾಹಸವನ್ನೂ ಮಾಡಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಅವರು ಕಾಂಞಂಗಾಡ್‌ನ ಅಗ್ನಿ ಶಾಮಕ ಇಲಾಖೆಗೆ ಕರೆ ಮಾಡಿ ಅಲ್ಲಿಂದ ರಕ್ಷಣಾ ತಂಡವೊಂದನ್ನು ಕರೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಅಧಿಕಾರಿ ಕೆ.ಎಂ ಶಿಜು ನೇತೃತ್ವದಲ್ಲಿ ರಕ್ಷಣಾ ತಂಡವೊಂದು ಒಂದೂವರೆ ಗಂಟೆಗೂ ಅಧಿಕ ಕಾಲ ಪ್ರಯತ್ನ ಮಾಡಿ ಕಡೆಗೂ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ್ದ ಬೋಲ್ಟ್ ನಟ್‌ನ್ನು ಹೊರತೆಗೆದಿದ್ದಾರೆ.
ಈ ನಟ್‌ನ್ನು ಕತ್ತರಿಸಿ ತೆಗೆಯಬೇಕಾಗಿದ್ದರಿಂದ ಮರ್ಮಾಂಗಕ್ಕೆ ಸುಟ್ಟಗಾಯವಾಗುವ ಅಪಾಯವಿತ್ತು. ಹೀಗಾಗಿ ಈ ಕಾರ್ಯಾಚರಣೆ ವೇಳೆ ಅವರು ಆ ಜಾಗಕ್ಕೆ ಹಾನಿಯಾಗದಂತೆ ತಡೆಯಲು ನಿರಂತರ ನೀರು ಸುರಿದಿದ್ದಾರೆ. ನಂತರ ನಟ್‌ನ ಎರಡು ಬದಿಗಳನ್ನು ಎಚ್ಚರಿಕೆಯಿಂದ ಕತ್ತರಿಸಿ ಅಂತಿಮವಾಗಿ ಮಧ್ಯರಾತ್ರಿಯ ವೇಳೆಗೆ ಆತನನ್ನು ಬಿಡುಗಡೆ ಮಾಡಿದ್ದಾರೆ. ಲಿನೇಶ್, ಶಿಬಿನ್ ಹಾಗೂ ಅಜಿತ್ ಅವರನ್ನೊಳಗೊಂಡ ಅಗ್ನಿಶಾಮಕ ದಳದ ರಕ್ಷಣಾ ತಂಡವು ಈ ಕಾರ್ಯಾಚರಣೆ ನಡೆಸಿದ್ದು, ಇದು ತಮ್ಮ ವೃತ್ತಿ ಜೀವನದ ಅತ್ಯಂತ ಸವಾಲಿನ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿದ್ದಾರೆ.
ತಾನು ಕುಡಿದು ಪ್ರಜ್ಞೆ ತಪ್ಪಿ ಬಿದ್ದಿದ್ದ ವೇಳೆ ಯಾರೋ ನನ್ನ ಮರ್ಮಾಂಗಕ್ಕೆ ನಟ್ ಫಿಕ್ಸ್ ಮಾಡಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಹೇಳಿದ್ದಾನೆ ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಎರಡು ದಿನಗಳ ಕಾಲ ನೋವು ಅನುಭವಿಸಿದ ಆತ ಕಡೆಗೂ ವೈದ್ಯರ ಬಳಿ ಹೋಗಿದ್ದಾನೆ. ಆದರೆ ಆತನ ರಕ್ಷಣೆಗೆ ಅಗ್ನಿ ಶಾಮಕ ಸಿಬ್ಬಂದಿಯೇ ಬರಬೇಕಾಯ್ತು. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...