ಜಮ್ಮು ಮತ್ತು ಕಾಶ್ಮೀರ ಮೂಲದ ಎರಡು ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದವನ್ನು ತೊರೆದಿವೆ. ನವ ಭಾರತ ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಘೋಷಿಸಿವೆ. ಕಳೆದ ಒಂದು ವಾರದಲ್ಲಿ ನಾಲ್ಕು ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದವನ್ನು ಕೈಬಿಟ್ಟಿವೆ.
ನವದೆಹಲಿ: ಹುರಿಯತ್‌ನ ಎರಡು ಘಟಕಗಳಾದ ಜೆ-ಕೆ ಪೀಪಲ್ಸ್ ಮೂವ್‌ಮೆಂಟ್ ಮತ್ತು ಡೆಮಾಕ್ರೆಟಿಕ್ ಪೊಲಿಟಿಕಲ್ ಮೂವ್‌ಮೆಂಟ್ ಸಂಘಟನೆಗಳು ಪ್ರತ್ಯೇಕವಾದವನ್ನು ಕೈಬಿಡುವುದಾಗಿ ಹೇಳಿದ ಬೆನ್ನಲ್ಲೇ ಈಗ ಜಮ್ಮು ಮತ್ತು ಕಾಶ್ಮೀರ ಮೂಲದ ಇನ್ನೆರಡು ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದ ಹೋರಾಟ ಕೈಬಿಟ್ಟು, ನವ ಭಾರತ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ಕೈಜೋಡಿಸುವುದಾಗಿ ಹೇಳಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಈಗ ಜಮ್ಮು ಕಾಶ್ಮೀರ ತೆಹ್ರಿಕಿ ಇಷ್ತೆಕ್‌ಲಾಲ್ ಮತ್ತು ಜಮ್ಮು ಕಾಶ್ಮೀರ ತಹ್ರೀಕ್ ಇ- ಇಷ್ತಿಕಾಮತ್ ಎಂಬ ಎರಡು ಸಂಘಟನೆಗಳು ಪ್ರತ್ಯೇಕತಾವಾದದಿಂದ ಹೊರ ಬಂದಿರುವುದಾಗಿ ಘೋಷಿಸಿವೆ. ಇದರೊಂದಿಗೆ ಕಳೆದ ಒಂದು ವಾರದ ಅವಧಿಯಲ್ಲಿ 4 ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದ ಹೋರಾಟ ಕೈಬಿಟ್ಟಂತಾಗಿದೆ. ಸಂಘಟನೆಯ ಅಧ್ಯಕ್ಷ ಗುಲಾಂ ನಬಿ ಸೋಫಿ ಮಾತನಾಡಿ, ನಾವು ಹಿಂದೆ ಪ್ರತ್ಯೇಕತಾವಾದದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೆವು. ಆದರೆ ಇನ್ನು ಈ ಸಿದ್ಧಾಂತ ಬಿಟ್ಟು ಭಾರತ ಮತ್ತು ಭಾರತದ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಪ್ರತ್ಯೇಕತಾವಾದವನ್ನು ಬಿಡುತ್ತಿದ್ದೇವೆ. ನಾನೂ ಒಬ್ಬ ಭಾರತೀಯ. ಇನ್ನು ಮುಂದೆ ಎಂದಿಗೂ ಪ್ರತ್ಯೇಕತೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಹುರಿಯತ್ ಜಮ್ಮು ಕಾಶ್ಮೀರ ಜನರ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ತಿಲಾಂಜಲಿ: 2 ಹುರಿಯತ್ ಬಣಗಳ ನಿರ್ಧಾರ!
ಸಂಘಟನೆಗಳ ಈ ನಿರ್ಧಾರವನ್ನು ಸ್ವಾಗತಿಸಿರುವ ಅಮಿತ್ ಶಾ, ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಈ ನಿರ್ಧಾರ ಇತಿಹಾಸ ನಿರ್ಮಿಸಿದೆ. ಮೋದಿ ಸರ್ಕಾರದ ನಿರ್ಧಾರಗಳಿಂದ ಇದು ಸಾಧ್ಯವಾಗಿದೆ. ಅಭಿವೃದ್ಧಿ ಹೊಂದಿದ, ಶಾಂತಿಯುತ ಮತ್ತು ಏಕೀಕೃತ ಭಾರತವನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಇದು ದೊಡ್ಡ ಗೆಲುವು ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಶಾ, ‘ಹುರಿಯತ್‌ನ ಎರಡು ಸಂಘಟನೆಗಳಾದ ಜೆ-ಕೆ ಪೀಪಲ್ಸ್ ಮೂವ್‌ಮೆಂಟ್ ಮತ್ತು ಡೆಮಾಕ್ರೆಟಿಕ್ ಪೊಲಿಟಿಕಲ್ ಮೂವ್‌ಮೆಂಟ್ ಪ್ರತ್ಯೇಕವಾದದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿದೆ. ಭಾರತದ ಏಕತೆಯನ್ನು ಬಲಪಡಿಸುವ ಈ ಹೆಜ್ಜೆಯನ್ನು ನಾನು ಸ್ವಾಗತಿಸುತ್ತೇನೆ. ಅಂತಹ ಎಲ್ಲ ಗುಂಪುಗಳು ಮುಂದೆ ಬಂದು ಪ್ರತ್ಯೇಕವಾದವನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.