ವಿದೇಶಿಯರ ಪ್ರವೇಶ ನಿಯಂತ್ರಿಸುವ ಅಕ್ರಮ ವಲಸೆ ತಡೆ ಮಸೂದೆ 2025 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ವೀಸಾ, ಪಾಸ್‌ಪೋರ್ಟ್ ದಾಖಲೆಗಳಿಲ್ಲದ ವಿದೇಶಿಯರಿಗೆ ಶಿಕ್ಷೆ ಮತ್ತು ದಂಡ ವಿಧಿಸುವ ನಿಯಮಗಳಿವೆ.
ನವದೆಹಲಿ: ದೇಶದೊಳಗೆ ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವ ಮತ್ತು ಅಕ್ರಮ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಲಾದ ವಲಸೆ ಮತ್ತು ವಿದೇಶಿಯರ ಮಸೂದೆ, 2025ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ವೀಸಾ ನೋಂದಣಿ, ಪಾಸ್‌ಪೋರ್ಟ್‌ಗಳಂತಹ ಪ್ರಯಾಣ ಸಂಬಂಧಿತ ದಾಖಲೆಗಳು ಸೇರಿದಂತೆ ವಿದೇಶಿಯರ ಭಾರತ ಪ್ರವೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶವಾಗಿದೆ.
ಈ ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ವಲಸೆ ಸಮಸ್ಯೆಯು ಹಲವು ದೇಶಗಳಿಗೆ ಸಂಬಂಧಿಸಿದ್ದಾಗಿದೆ. ದೇಶದ ಭದ್ರತಾ ದೃಷ್ಟಿಯಿಂದ ಗಡಿಯನ್ನು ಪ್ರವೇಶಿಸುವವರ ಮೇಲೆ, ಮುಖ್ಯವಾಗಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುವವರ ಮೇಲೆ ಕಣ್ಣಿಡುವುದು ಅವಶ್ಯಕ’ ಎಂದರು. ಇದೇ ವೇಳೆ, ‘ಭಾರತ ಧರ್ಮಶಾಲೆಯಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
ಅಕ್ರಮ ಬಾಂಗ್ಲಾದೇಶಿಯರ ಬಳಿ ಬಂಗಾಳದ ಆಧಾರ ಕಾರ್ಡ್ ಪತ್ತೆ! ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ಗಂಭೀರ ಆರೋಪ!
ಮಸೂದೆಯಲ್ಲಿ ಏನಿದೆ?:
ವಲಸಿಗರು ಭಾರತಕ್ಕೆ ಪ್ರವೇಶಿಸುತ್ತಿದ್ದಂತೆ ಅದರ ನೋಂದಣಿ ಕಡ್ಡಾಯ
ಕೆಲ ಸ್ಥಳಗಳಿಗೆ ಪ್ರಯಾಣಿಸುವುದು, ಹೆಸರು ಬದಲು, ಸಂರಕ್ಷಿತ ಅಥವಾ ನಿರ್ಬಂಧಿತ ಪ್ರದೇಶಗಳಲ್ಲಿ ವಾಸದ ಮೇಲೆ ನಿರ್ಬಂಧ
ಮಾನ್ಯ ವೀಸಾ, ಪಾಸ್‌ಪೋರ್ಟ್ ಇಲ್ಲದ ವಿದೇಶಿಯರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ 5 ಲಕ್ಷ ರು. ದಂಡ -ನಕಲಿ ದಾಖಲೆ ಬಳಸಿ ಪ್ರವೇಶ, ವಾಸ, ನಿರ್ಗಮನಕ್ಕೆ 2ರಿಂದ 7 ವರ್ಷ ಜೈಲು ಮತ್ತು 10 ಲಕ್ಷ ರು. ವರೆಗೆ ದಂಡ
ಅವಧಿ ಮೀರಿ ಭಾರತದಲ್ಲಿ ವಾಸ, ವೀಸಾ ನಿಯಮ ಉಲ್ಲಂಘಿಸಿದರೆ 3 ವರ್ಷ ಸೆರೆವಾಸ ಅಥವಾ 3 ಲಕ್ಷ ರು. ದಂಡ
ಶಿಕ್ಷಣ ಸಂಸ್ಥೆ, ವಿವಿ, ಆಸ್ಪತ್ರೆ, ನರ್ಸಿಂಗ್ ಹೋಂಗಳು ವಿದೇಶಿಯರ ಬಗ್ಗೆ ನೋಂದಣಿ ಕಚೇರಿಗೆ ವರದಿ ಮಾಡುವುದು ಕಡ್ಡಾಯ
ಮಾನ್ಯ ದಾಖಲೆಗಳಿಲ್ಲದವರ ಪ್ರಯಾಣಕ್ಕೆ ಸಹಕರಿಸಿದ ಸಾರಿಗೆ ಕಂಪನಿಗಳ ಮೇಲೆ 5 ಲಕ್ಷ ರು. ದಂಡ. ತಪ್ಪಿದಲ್ಲಿ ಪರವಾನಗಿ ಜಪ್ತಿ
ಈ ದೇಶ ಧರ್ಮಶಾಲೆಯಲ್ಲ..; ರೋಹಿಂಗ್ಯಾ, ಬಾಂಗ್ಲಾದೇಶಿಗಳಿಗೆ ಅಮಿತ್ ಶಾ ಎಚ್ಚರಿಕೆ!