ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್ ಸಹ ಪ್ರಯಾಣಿಕನ ಜೀವ ಉಳಿಸಿದ ಘಟನೆ ನಡೆದಿದೆ. ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿದ ಪ್ರಯಾಣಿಕನಿಗೆ ತುರ್ತ ಹಾಗೂ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.
ಹೈದರಾಬಾದ್(ಜು.23): ದೆಹಲಿ ಹೈದರಾಬಾದ್ ವಿಮಾನ ವಿಶೇಷ ಘಟನೆಗೆ ಸಾಕ್ಷಿಯಾಯಿತು. ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿದ ಸಹ ಪ್ರಯಾಣಿಕನಿಗೆ ತಕ್ಷಣವೇ ತುರ್ತು ಚಿಕಿತ್ಸೆ ಹಾಗೂ ಔಷಧಿ ನೀಡಿದ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ಸೌಂದರರಾಜನ್ ವಾರಣಾಸಿಯಿಂದ ದೆಹಲಿ ಮಾರ್ಗವಾಗಿ ಹೈದರಾಬಾದ್‌ಗೆ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಮಾನ ಪ್ರಯಾಣದಲ್ಲಿ ಸಹ ಪ್ರಯಾಣಿಕನ ಆರೋಗ್ಯ ಏರುಪರಾಗಿದೆ. ತಕ್ಷಣವೇ ಗಗನಸಖಿಯರು ಪೈಲೆಟ್‌ಗೆ ಮಾಹಿತಿ ನೀಡಿದ್ದಾರೆ. ಪೈಲೆಟ್ ವಿಮಾನದಲ್ಲಿ ಪ್ರಯಾಣಿಕನ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ ಎಂದು ಘೋಷಣ ಮಾಡಿದ್ದಾರೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ರಾಜ್ಯಪಾಲೆ ಸೌಂದರರಾಜನ್ ತುರ್ತು ಚಿಕಿತ್ಸೆ ನೀಡಿದ್ದಾರೆ. ವಿಮಾನದಲ್ಲಿದ್ದ ಔಷಧಿಗಳ ಪೈಕಿ ಸೂಕ್ತ ಔಷಧಿಯನ್ನು ನೀಡಿ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ರಾಜ್ಯಾಪಾಲರು ಪ್ರಯಾಣಿಕನಿಗೆ ಔಷದಿ ನೀಡಿದ್ದಾರೆ ಎಂದು ಅಚ್ಚರಿಪಡುವ ಅಗತ್ಯವಿಲ್ಲ. ರಾಜ್ಯಪಾಲೆ ಸೌಂದರರಾಜನ್ ರಾಜಕೀಯ ಪ್ರವೇಶಕ್ಕೂ ಮೊದಲು ವೈದ್ಯರಾಗಿದ್ದರು. ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಪೈಲೆಟ್ ಅನೌನ್ಸ್ ಬೆನ್ನಲ್ಲೇ ಪ್ರಯಾಣಿಕನಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನದಲ್ಲಿದ್ದ ವೈದ್ಯಕೀಯ ಸಲಕರಣೆಗಳಿಂದ ಪ್ರಯಾಣಿಕನ ಪಲ್ಸ್, ಬಿಪಿ ಪರೀಕ್ಷಿಸಿದ್ದಾರೆ. ಸೂಕ್ತ ಔಷಧಿ ನೀಡಿದ ಕೆಲ ಹೊತ್ತಲ್ಲೇ ಪ್ರಯಾಣಿಕನ ಚೇತರಿಸಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ವೀಲ್‌ಚೇರ್ ಮೂಲಕ ಪ್ರಯಾಣಿಕನನ್ನು ನಿಲ್ದಾಣದಲ್ಲಿನ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ರಾಜ್ಯಾಪಾಲೆ ಚಿಕಿತ್ಸೆಯಿಂದ ಪ್ರಯಾಣಿಕನ ಪ್ರಾಣ ಉಳಿದಿದೆ. ತಮಿಳಿಸಾಯಿ ಸೌಂದರರಾಜನ್(telangana governor) ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮದರಾಸ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿರುವ ಸೌಂದರರಾಜನ್ ಎಂಜಿಆರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಹೊರಹೊಮ್ಮಿದರು. ಇನ್ನು ಕೆನಡಾದಲ್ಲಿ ಸೋನೋಲಜಿ ಹಾಗೂ ಎಫ್‌ಇಟಿ ಥೆರಿಪಿ ತರಬೇತಿ ಪಡೆದಿದ್ದಾರೆ. ರಾಮಚಂದ್ರ ಮೆಡಿಕಲ್ ಕಾಲೇಜಿನಲ್ಲಿ ಫ್ರೋಫೆಸರ್ ಆಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸೌಂದರರಾಜನ್ ಅವರ ಇಬ್ಬರು ಮಕ್ಕಳು ವೈದ್ಯರಾಗಿದ್ದಾರೆ.
ಕಾಲೇಜು ದಿನಗಳಿಂದ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಸೌಂದರರಾಜನ್(Tamilisai Soundararajan), ತಮಿಳುನಾಡು ಬಿಜೆಪಿಯಲ್ಲಿ ಪ್ರಬಲ ನಾಯಕಿಯಾಗಿ ಬೆಳೆದರು. 2019ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೆಲಂಗಾಣ ರಾಜ್ಯಪಾಲರಾಗಿ ನೇಮಕಗೊಳಿಸಿದರು. ಫೆಬ್ರವರಿ 16, 2021ರಲ್ಲಿ ಪುದುಚೇರಿ ರಾಜ್ಯಪಾಲರಾಗಿ ಹೆಚ್ಚುವರಿ ಅಧಿಕಾರ ನೀಡಲಾಗಿದೆ.
ಬೇಡಿ ವಜಾ ಬಳಿಕ ಸೌಂದರರಾಜನ್‌ಗೆ ಅಧಿಕಾರ
ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ವಜಾ ಮಾಡಲಾಗಿತ್ತು. ಬಳಿಕ ಪುದುಚೇರಿ ಉಪರಾಜ್ಯಪಾಲ ಜವಾಬ್ದಾರಿಯನ್ನು ತೆಲಂಗಾಣದ ರಾಜ್ಯಪಾಲೆ ಡಾ. ತಮಿಳುಸಾಯ್ ಸೌಂದರರಾಜನ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿತ್ತು. 2016ರಲ್ಲಿ ಪುದುಚೇರಿ ಉಪ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಕಿರಣ್ ಬೇಡಿ, ತಮ್ಮ ಖಡಕ್ ನೀತಿಗಳಿಂದ ಜನಸಾಮಾನ್ಯರಿಗೆ ನಾನಾ ರೀತಿಯಲ್ಲಿ ನೆರವಾಗಿ ಗಮನ ಸೆಳೆದಿದ್ದರು. ಆದರೆ ಇದೇ ವೇಳೆ ಮುಖ್ಯಮಂತ್ರಿ ವಿ. ನಾರಾಯಣ ಸಾಮಿ ಮತ್ತು ಅವರ ಸಂಪುಟ ಸದಸ್ಯರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ತಮ್ಮ ಎಲ್ಲಾ ಯೋಜನೆಗಳಿಗೂ ಬೇಡಿ ತಡೆ ಒಡ್ಡುತ್ತಿದ್ದಾರೆ ಎಂದು ಪದೇ ಪದೇ ಸಿಎಂ ಸಾಮಿ ಆರೋಪಿಸುತ್ತಿದ್ದರು. ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಆಗ್ರಹವನ್ನು ಮಾಡಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿತ್ತು.