ಬೆಂಗಳೂರು ನಗರದ ಅಭಿವೃದ್ಧಿಗೆ ನೆರವು ನೀಡಿ: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಮನವಿ

Published : May 08, 2025, 04:21 AM IST
ಬೆಂಗಳೂರು ನಗರದ ಅಭಿವೃದ್ಧಿಗೆ ನೆರವು ನೀಡಿ: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಮನವಿ

ಸಾರಾಂಶ

ಬೆಂಗಳೂರಿನ ಪ್ರಮುಖ ರಸ್ತೆ, ಮೇಲ್ಸೇತುವೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮನವಿ ಸಲ್ಲಿಸಿದರು.   

ನವದೆಹಲಿ (ಮೇ.08): ಬೆಂಗಳೂರಿನ ಪ್ರಮುಖ ರಸ್ತೆ, ಮೇಲ್ಸೇತುವೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮನವಿ ಸಲ್ಲಿಸಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಅಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಿದ ಡಿಸಿಎಂ, ಬೆಂಗಳೂರು-ಕನಕಪುರ ನಡುವಣ ರಸ್ತೆ 6 ಪಥಕ್ಕೆ ಉನ್ನತೀಕರಣ, ನೆನೆಗುದಿಗೆ ಬಿದ್ದಿರುವ ಕಗ್ಗಲಿಪುರ ಟೋಲ್‌ವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಲು, ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ಬಿಡುಗಡೆ, ಹೆಬ್ಬಾಳ ಜಂಕ್ಷನ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು.

ಹೆದ್ದಾರಿ 209ರ ಉನ್ನತೀಕರಣ: ಹಾಲಿ 4 ಪಥ ಇರುವ ಹೆದ್ದಾರಿ 209 (ಬೆಂಗಳೂರು-ಕನಕಪುರ)ಅನ್ನು ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಜತೆಗೆ 6 ಪಥಗಳಿಗೆ ಉನ್ನತೀಕರಣಗೊಳಿಸಬೇಕು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಗಣನೀಯ ಏರಿಕೆ ಕಂಡಿದ್ದು, ಸಂಚಾರ ಸುಗಮಗೊಳಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರವಿಶಂಕರ ಗುರೂಜಿ ಆಶ್ರಮದಿಂದ ಕಗ್ಗಲಿಪುರ ಟೋಲ್‌ವರೆಗಿನ 7 ಕಿ.ಮೀ ಉದ್ದದ ರಸ್ತೆ ಕಾಮಗಾರಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆಕ್ಷೇಪದಿಂದ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದೆ. ಈ ಹೆದ್ದಾರಿಯಲ್ಲಿ ಈ ಭಾಗ ಬಾಟಲ್ ನೆಕ್ ನಂತಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಹಾಗಾಗಿ ಸುಗಮ ಸಂಚಾರಕ್ಕೆ ಈ ಕಾಮಗಾರಿ ಪೂರ್ಣಗೊಳಿಸುವುದು ಅಗತ್ಯವಾಗಿದ್ದು, ಅಡಚಣೆಯನ್ನು ನಿವಾರಿಸಿ, ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಲು ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಸ್ಯಾಟಲೈಟ್ ರಿಂಗ್ ರಸ್ತೆ ಕುರಿತು ವಿವರಿಸಿದ ಡಿಕೆಶಿ: ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆ (ಎನ್‌ಎಚ್‌ 948A) ದಾಬಸ್‌ಪೇಟೆ, ಮಾಗಡಿ, ರಾಮನಗರ, ಹಾರೋಹಳ್ಳಿ ನಡುವೆ ಸಂಪರ್ಕ ವೃದ್ಧಿಸಲು ಹಾಗೂ ಮೂಲಸೌಕರ್ಯ ಒದಗಿಸಲು ಮಹತ್ವದ್ದಾಗಿದೆ. ಈ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಶೀಘ್ರವೇ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು. ಈ ಯೋಜನೆ 2019ರಲ್ಲಿ ಆರಂಭವಾಯಿತಾದರೂ ಪರಿಹಾರ ಬಿಡುಗಡೆ ತಡವಾಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಯೋಜನೆ ಪ್ರಗತಿ ಕುಂಠಿತವಾಗಿದೆ ಎಂದು ಡಿಕೆಶಿ ವಿವರಿಸಿದ್ದಾರೆ.

ಡಿಸೆಂಬರ್‌ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು: ಡಿಸಿಎಂ ಡಿಕೆಶಿ

ಹೆಬ್ಬಾಳ-ಏರ್ಪೋರ್ಟ್‌ಗೆ ಪ್ರತ್ಯೇಕ ಮೇಲ್ಸೇತುವೆ: ಹೆಬ್ಬಾಳ ಜಂಕ್ಷನ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಣ 35 ಕಿ.ಮೀ ಉದ್ದದ ಪ್ರದೇಶದಲ್ಲಿ ಅಪಾರವಾದ ಅಭಿವೃದ್ಧಿಯಾಗಿದ್ದು, ಅನೇಕ ಕೈಗಾರಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳು ಸ್ಥಾಪನೆಯಾಗಿವೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಈಗಿರುವ ಎಲಿವೆಟೆಡ್ ಕಾರಿಡಾರ್ ನಡುವೆ ಟ್ರಾಫಿಕ್ ಸಿಗ್ನಲ್, ಪಾದಚಾರಿಗಳ ರಸ್ತೆ ದಾಟುವಿಕೆಯಿಂದ ಇಲ್ಲಿನ ಪ್ರಯಾಣಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಈ ಮಧ್ಯೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ವೇಗವಾಗಿ ಬೆಳೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹೆಬ್ಬಾಳ ಜಂಕ್ಷನ್ ನಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರು, ಸ್ಥಳೀಯ ವಾಹನಗಳು, ಕೈಗಾರಿಕಾ ವಲಯದ ದೊಡ್ಡ ವಾಹನಗಳ ಸಂಚಾರ ಸುಗಮವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..