ರೂ. 11.70 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ: ಅಲ್ಲು ಅರ್ಜುನ್‌ ಪುಷ್ಪಾ ನೆನಪಿಸಿದ ದಾಳಿ

By Suvarna NewsFirst Published May 31, 2022, 11:55 AM IST
Highlights

Red Sandals Seized: ಖ್ಯಾತ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ ದಿ ರೈಸ್‌ ಚಿತ್ರದಲ್ಲಿ ರಕ್ತಚಂದನ ಕಳ್ಳಸಾಗಾಣಿಕೆ ಜಾಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಇದೀಗ ಅಹ್ಮದಾಬಾದಿನಲ್ಲಿ ಬರೋಬ್ಬರಿ 11.70 ಕೋಟಿ ರೂಪಾಯಿ ಮೌಲ್ಯದ ರಕ್ತಚಂದನ ಮರಗಳನ್ನು ಜಪ್ತಿ ಮಾಡಲಾಗಿದೆ.

ಅಹ್ಮದಾಬಾದ್‌: ಕಂದಾಯ ನಿರ್ದೇಶನಾಲಯದ ಗುಪ್ತಚರ ವಿಭಾಗ (Directorate of Revenue Intelligence) 11.70 ಕೋಟಿ ರೂಪಾಯಿ ಮೌಲ್ಯದ ರಕ್ತಚಂದನ ಮರದ ದಿಮ್ಮಿಗಳನ್ನು ಗುಜರಾತಿನಲ್ಲಿ ಜಪ್ತಿ ಮಾಡಿದ್ದಾರೆ (Red sandals worth Rs 11.70 crore seized). 14.63 ಮೆಟ್ರಿಕ್‌ ಟನ್‌ ರಕ್ತ ಚಂದನವನ್ನು ಕಂಟೈನರ್‌ನಲ್ಲಿ ಅಡಗಿಸಿಡಲಾಗಿತ್ತು. ರಕ್ತಚಂದನವನ್ನು ಇಲ್ಲಿಂದ ದುಬೈಗೆ ಕಳ್ಳ ಮಾರ್ಗದಲ್ಲಿ ರಫ್ತು ಮಾಡಲು ಯತ್ನಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಕಂದಾಯ ಇಲಾಖೆ ದಾಳಿ ನಡೆಸಿ ಮಾಲನ್ನು ಜಪ್ತಿ ಮಾಡಿದೆ. 

ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಜಾ (United Arab Emirates) ಗೆ ಈ ರಕ್ತಚಂದನವನ್ನು ರಫ್ತು ಮಾಡಲು ಹೊರಟಿದ್ದರು. ಕಂದಾಯ ನಿರ್ದೇಶನಾಲಯದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ತಕ್ಷಣ ಕ್ರಮ ಕೈಗೊಳ್ಳಲಾಯಿತು. ರಫ್ತು ಮಾಡುತ್ತಿರುವ ಸಂಸ್ಥೆಯನ್ನು ಕಂಟೇನರ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದಾಗ, ಅಸೆಂಬಲ್‌ ಮಾಡಿಕೊಳ್ಳಬಹುದಾದ ಶೌಚಾಲಯಗಳಿವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ನಂತರ ಸ್ಕ್ಯಾನಿಂಗ್‌ ಮಾಡಿದಾಗ ಶೌಚಾಲಯಗಳ ಬಿಡಿ ಭಾಗಗಳು ಪತ್ತೆಯಾಗಿಲ್ಲ. ನಂತರ ಕಂಟೇನರ್‌ ತೆರೆಸಿ ನೋಡಿದಾಗ ಬೆಲೆ ಬಾಳುವ ರಕ್ತಚಂದನದ ಮರದ ದಿಮ್ಮಿಗಳಿದ್ದವು ಎಂದು ಕಂದಾಯ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ. 

"ಸ್ಕಾನಿಂಗ್‌ ಡಿವೈಸ್‌ನಿಂದ ಕಂಟೇನರ್‌ ಸ್ಕಾನ್‌ ಮಾಡಿದಾಗ ದಿಮ್ಮಿಗಳ ರೀತಿಯ ವಸ್ತು ಇರುವುದು ಪತ್ತೆಯಾಯಿತು. ಅದು ಶೌಚಾಲಯದ ಭಾಗಗಳಂತೆ ಕಾಣಲಿಲ್ಲ. ಅದಾದ ನಂತರ ಕಂಟೇನ್‌ ತೆರೆದು ನೋಡಿದಾಗ ಮರದ ದಿಮ್ಮಿಗಳನ್ನು ತುಂಬಿಟ್ಟುರುವುದು ತಿಳಿಯಿತು. ಅದು ರಕ್ತಚಂದನದ ದಿಮ್ಮಿಗಳು. ಇದರ ರಫ್ತು ಅಥವಾ ಮಾರಾಟ ಕಾನೂನು ಬಾಹಿರ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

"ಕಸ್ಟಮ್ಸ್‌ ಆಕ್ಟ್‌ 1962 ಅಡಿಯಲ್ಲಿ ಕಂದಾಯ ನಿರ್ದೇಶನಾಲಯದ ಗುಪ್ತಚರ ವಿಭಾಗ ಪ್ರಕರಣ ದಾಖಲಿಸಿಕೊಂಡು, ಒಟ್ಟು 840 ದಿಮ್ಮಿಗಳನ್ನು ಜಪ್ತಿ ಮಾಡಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದು, ಈ ಮರಗಳನ್ನು ಎಲ್ಲಿಂದ ಸಾಗಿಸಲಾಗಿದೆ. ಹೇಗೆ ಟ್ರಾನ್ಸ್‌ಪೋರ್ಟ್‌ ಆಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ," ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಾಯಕ ಸಿಧು ಮೂಸೇವಾಲಾ ಹತ್ಯೆ, ಡೆಹ್ರಾಡೂನ್‌ನಲ್ಲಿ 5 ಶಂಕಿತ ಹತ್ಯೆಕೋರರು ವಶಕ್ಕೆ!

ರಕ್ತಚಂದನಕ್ಕೆ ಏಷ್ಯಾ ಖಂಡದಲ್ಲಿ ಭಾರೀ ಬೇಡಿಕೆಯಿದ್ದು, ಕಾಸ್ಮೆಟಿಕ್ಸ್‌, ಔಷಧಿ, ಪರ್ಫ್ಯೂಮ್‌, ಕಾಸ್ಟ್ಲಿ ಪೀಠೋಪಕರಣಗಳಿಗಾಗಿ ರಕ್ತಚಂದನವನ್ನು ಬಳಕೆ ಮಾಡುತ್ತಾರೆ. ಚೀನಾ ದೇಶದಲ್ಲಂತೂ ರಕ್ತಚಂದನ ಮರಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ಅದೇ ರೀತಿ ಪ್ರಪಂಚದ ವಿವಿಧ ದೇಶಗಳ ಆಗರ್ಭ ಶ್ರೀಮಂತರು ರಕ್ತಚಂದನವನ್ನು ಬಯಸುತ್ತಾರೆ. ಆದರೆ ಈ ಪ್ರಬೇಧದ ಮರ ಕೇವಲ ಆಂದ್ರ ಪ್ರದೇಶದಲ್ಲಿ ಸಿಗುತ್ತದೆ.

ಇದರ ಕುರಿತಾಗಿ ಈಗಾಗಲೇ ಬಂದಿರುವ ಬ್ಲಾಕ್‌ಬಸ್ಟರ್‌ ಸಿನೆಮಾ 'ಪುಷ್ಪಾ'ದಲ್ಲಿ ಇದಕ್ಕಿರುವ ಬೆಲೆ, ಇದರ ಕಳ್ಳ ಸಾಗಾಣಿಕೆ ಮತ್ತೆ ಸುತ್ತಲಿರುವ ದೊಡ್ಡ ಮಾಫಿಯಾವನ್ನು ಜಗತ್ತಿಗೆ ಪರಿಚಯಿಸಿದೆ. ಆಂಧ್ರಪ್ರದೇಶದ ತಿರುಪತಿ ಸುತ್ತಮುತ್ತಲಿನ ಕಾಡುಗಳಲ್ಲಿ ಬೆಳೆಯುವ ರಕ್ತಚಂದನವನ್ನು ಈಗಲೂ ಕದ್ದು ರಫ್ತು ಮಾಡಲಾಗುತ್ತಿದೆ. ಜತೆಗೆ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಸರಣಿ ಎನ್‌ಕೌಂಟರ್‌ ಕೂಡ ಈ ಸಂದರ್ಭದಲ್ಲಿ ನೆನೆಯಬಹುದು. ಒಂದೇ ದಿನ ಸುಮಾರು ಹತ್ತಕ್ಕೂ ಹೆಚ್ಚು ರಕ್ತಚಂದನ ಕಳ್ಳರನ್ನು ಆಂಧ್ರ ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಇದು ಫೇಕ್‌ ಎನ್‌ಕೌಂಟರ್‌ ಎಂಬ ಬಗ್ಗೆಯೂ ಆರೋಪಗಳು ಕೇಳಿ ಬಂದಿತ್ತು.

ಇದನ್ನೂ ಓದಿ: ಪುಲ್ವಾಮಾ ಎನ್‌ಕೌಂಟರ್‌: ಇಬ್ಬರು ಜೆಇಎಂ ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸರಣಿಯ ಎರಡನೇ ಚಿತ್ರದ ಚಿತ್ರೀಕರಣವೂ ಈಗಾಗಲೇ ಆರಂಭವಾಗಿದ್ದು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ರಕ್ತಚಂದನ ಮಾಫಿಯಾದ ಇನ್ನಷ್ಟು ಕರಾಳ ಸತ್ಯಗಳು ಮತ್ತು ಆಳ ಅಗಲದ ಪರಿಚಯವಾಗುವ ಸಾಧ್ಯತೆಯಿದೆ, 

click me!