
ನಿಗದಿಗೂ ಮೊದಲೇ ಬಂದ ಈ ಬಾರಿಯ ಮುಂಗಾರು ದೇಶದೆಲ್ಲಡೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ದೆಹಲಿ, ಮುಂಬೈ, ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಹೀಗಿರುವಾಗ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮುಂಗಾರಿನ ಮೊದಲ ಮಳೆ ಸುರಿದ ನಂತರ ಇಲ್ಲಿನ ಜನ ತಮ್ಮ ಜಮೀನಿನಲ್ಲಿ ಹುಡುಕಾಟದಲ್ಲಿ ತೊಡಗಿದ್ದಾರೆ. ಹೌದು ಇಲ್ಲಿ ಮೊದಲ ಮಳೆಯ ನಂತರ ವಜ್ರಗಳು ಕಾಣಿಸಿಕೊಳ್ಳುತ್ತವೆ ಎಂಬ ನಂಬಿಕೆ ಇದೆ, ಇದೇ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿ ವರ್ಷವೂ ಜೂನ್‌ನಲ್ಲಿ ಬರುವ ಮೊದಲ ಮಳೆಯ ನಂತರ ಜನ ತಮ್ಮ, ಜಮೀನು, ಹೊಲ ಗದ್ದೆಗಳಲ್ಲಿ ಈ ಹೊಳೆಯುವ ಹರಳಿಗಾಗಿ ಹುಡುಕಾಟ ನಡೆಸುತ್ತಾರೆ. ಅದೇ ರೀತಿ ಈ ಬಾರಿಯೂ ಮೊದಲ ಮಳೆ ಜೂನ್ ಬದಲು ಮೇ ತಿಂಗಳಲ್ಲಿಯೇ ಬಂದಿದ್ದು, ಜನ ವಜ್ರದ ಹುಡುಕಾಟದಲ್ಲಿ ತೊಡಗಿದ್ದಾರೆ.
ಇಲ್ಲಿ ಜನ ಮೊದಲ ಮಳೆಯ ನಂತರ ಕೃಷಿ ಚಟುವಟಿಕೆಯಲ್ಲಿ ತೊಡಗುವ ಬದಲು ತಮ್ಮ ಹೊಲದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳ ಜನರು ಕೂಡ ಇಲ್ಲಿಗೆ ಬಂದು ವಜ್ರದ ಹುಡುಕಾಟದಲ್ಲಿ ತೊಡಗಿದ್ದಾರೆ. ಮಣ್ಣಿನ ರಾಶಿಯನ್ನು ಸೋಸುತ್ತಾ ಅದರಲ್ಲಿ ವಜ್ರವನ್ನು ಹುಡುಕುವ ಕಾರ್ಯ ಭರದಿಂದ ಸಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲ ಗ್ರಾಮ ಈ ರೀತಿ ವಜ್ರದ ಹುಡುಕಾಟಕ್ಕೆ ಪ್ರಸಿದ್ಧಿ ಪಡೆದಿದೆ.
ಅಂದಹಾಗೆ ಈ ಬಾರಿ ಕರ್ನೂಲು ಜಿಲ್ಲೆಯ ತುಗ್ಗಲ ಗ್ರಾಮದಲ್ಲಿ ಒಬ್ಬರು ರೈತರಿಗೆ ತಮ್ಮ ಹೊಲದಲ್ಲಿ ವಜ್ರ ಸಿಕ್ಕಿದೆ. ಅದನ್ನು ಅವರು ಜೊನ್ನಗಿರಿಯ ವಜ್ರದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದು, ಅವರಿಗೆ ಆ ವ್ಯಾಪಾರಿ ಒಂದೂವರೆ ಲಕ್ಷ ರೂಪಾಯಿ ನೀಡಿ ಆ ವಜ್ರವನ್ನು ಖರೀದಿಸಿದ್ದಾರೆ. ಆದರೆ ಬಹಿರಂಗ ಮಾರುಕಟ್ಟೆಯಲ್ಲಿ ಈ ವ್ರಜದ ಬೆಲೆ 5 ಲಕ್ಷದವರೆಗೆ ಇದೆ ಎಂಬ ಸುದ್ದಿ ಇದೆ. ತುಗ್ಗಲಿ ಗ್ರಾಮದ ಸಮೀಪದ ಜೊನ್ನಗಿರಿ, ಚಿನ್ನ ಜೊನ್ನಗಿರಿ, ಎರ್ರಗುಡಿ, ಮದನಂತಪುರಂ, ಗಿರಿಗೆಟ್ಲ, ಹೀಗೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಈಗ ಜನ ವಜ್ರದ ಬೇಟೆಯಲ್ಲಿ ತೊಡಗಿದ್ದಾರೆ.
ಈ ಪ್ರದೇಶದಲ್ಲಿ ವಜ್ರಗಳಿವೆ ಎಂಬುದು ಬ್ರಿಟಿಷರ ಕಾಲದಲ್ಲಿಯೇ ಗೊತ್ತಾಗಿತ್ತು. ಆ ಸಂದರ್ಭದಲ್ಲೇ ಪ್ರತ್ಯೇಕವಾದ ಸಂಸ್ಥೆಯನ್ನು ಸ್ಥಾಪಿಸಿ ಇಲ್ಲಿ ಅನ್ವೇಷಣೆ ಮಾಡುವುದಕ್ಕೆ ಶುರು ಮಾಡಿದ್ದರು. ಆದರೆ ಕಾಲಕ್ರಮೇಣ, ಈ ವಜ್ರಾನ್ವೇಷಣೆ ಅಷ್ಟೊಂದು ಲಾಭದಾಯಕವಾಗಿರದ ಕಾರಣ ಸರ್ಕಾರದ ಅನ್ವೇಷಣೆ ನಿಲುಗಡೆಯಾಗಿತ್ತು. ಆದರೆ ಜನ ಸಾಮಾನ್ಯರ ಹುಡುಕಾಟ ಮಾತ್ರ ನಿರಂತರ ಮುಂದುವರೆಯಿತು. ಪ್ರತಿವರ್ಷ ಜೂನ್ ಮೊದಲ ವಾರದಲ್ಲಿ ಮೊದಲ ಮುಂಗಾರು ಮಳೆ ಬಂದ ನಂತರ ಇಲ್ಲಿ ವಜ್ರಕ್ಕಾಗಿ ಹುಡುಕಾಟ ನಡೆಸಲಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳಲ್ಲೇ ಮೊದಲ ಮಳೆ ಬಂದಿರುವುದರಿಂದ ಜೊನ್ನಗಿರಿ ಸುತ್ತಲ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಜ್ರಕ್ಕಾಗಿ ಹುಡುಕಾಟ ನಡೆದಿದೆ. ರಾತ್ರಿ ಜಾಸ್ತಿ ಮಳೆ ಬಂದಿದ್ದರೆ ಇಲ್ಲಿ ಹುಡುಕಾಟ ಮಾಡುವವರ ಸಂಖ್ಯೆ ನೂರಕ್ಕೂ ಹೆಚ್ಚಿರುತ್ತದೆ.
ಮಳೆಯಿಂದಾಗಿ ಭೂಮಿಯ ಅಡಿಯಲ್ಲಿರುವ ವಜ್ರ ಮೇಲೆ ಬಂದು ಇಲ್ಲಿ ಸೇರುತ್ತವೆ ಎಂದು ಜನ ನಂಬುತ್ತಾರೆ. ಇಲ್ಲಿನ ಜನರು ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮಗಳ ಜನರು ಕೂಡ ತಮ್ಮ ವಾಹನಗಳಲ್ಲಿ ಇಲ್ಲಿಗೆ ಆಗಮಿಸಿ ವಜ್ರದ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಇಡೀ ದಿನ ಅಥವಾ ವಾರಗಳ ಕಾಲ ಇಲ್ಲೇ ವಾಸವಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಜೊನ್ನಗಿರಿಯಲ್ಲಿ ಸಿಗುವ ವಜ್ರ ಬಹಳ ಬೆಲೆ ಬಾಳುವಂತದ್ದು, ಇದಕ್ಕೆ ಲಕ್ಷದಿಂದ ಕೋಟಿಯವರೆಗೂ ಬೆಲೆ ಇದೆ ಎಂಬ ವರದಿ ಇದೆ. ತುಗ್ಗಲಿ ಮಂಡಲ ವ್ಯಾಪ್ತಿಯ ಕೆಂಪು ನೆಲದಲ್ಲಿ ಹುಡುಕಾಟದಲ್ಲಿ ತೊಡಗುವವರಿಗೆ 17ರಿಂದ 20 ವಜ್ರಗಳು ದೊರೆಯುತ್ತವೆ ಎಂಬ ಸುದ್ದಿ ಇದೆ. ಜನರು ಹುಡುಕಿದ ಈ ವಜ್ರವನ್ನು ಇಲ್ಲಿನ ವ್ಯಾಪಾರಿಗಳು ಅದರ ಮಾರುಕಟ್ಟೆ ಬೆಲೆಗಿಂತ ಬಹಳ ಕಡಿಮೆ ಬೆಲೆಗೆ ರಹಸ್ಯವಾಗಿ ಜನರಿಂದ ಖರೀದಿಸುತ್ತಾರೆ. ವಜ್ರದ ಬಣ್ಣ, ಜಾತಿ, ಕ್ಯಾರೆಟ್ ಅನ್ನು ಅವಲಂಬಿಸಿ ವಜ್ರಗಳಿಗೆ ಬೆಲೆ ನಿಗದಿಯಾಗುತ್ತದೆ.
ಇದನ್ನು ಖರೀದಿಸುವ ವ್ಯಾಪಾರಿಗಳು ಇದಕ್ಕೆ ಪ್ರತಿಯಾಗಿ ಹಣ ಹಾಗೂ ಬಂಗಾರವನ್ನು ನೀಡುತ್ತಾರೆ. ಇವರು ಹೇಳಿದ ದರ ಜನರಿಗೆ ಇಷ್ಟವಾಗದಿದ್ದರೆ ಟೆಂಡರ್ ಪ್ರಕಾರ ವ್ಯಾಪಾರಿಗಳು ಅವುಗಳನ್ನು ಖರೀದಿಸುತ್ತಾರಂತೆ. ಅಲ್ಲದೇ ಇಲ್ಲಿ ವಜ್ರದ ವ್ಯಾಪಾರಿಗಳು ತಮ್ಮ ಮಧ್ಯವರ್ತಿಗಳನ್ನು ಇಲ್ಲಿ ನಿಲ್ಲಿಸಿರುತ್ತಾರೆ ಅವರು ಜನರ ಬಳಿ ಚೌಕಾಸಿ ಮಾಡಿ ವಜ್ರವನ್ನು ಖರೀದಿಸುತ್ತಾರೆ ಎಂಬ ವರದಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ