
ಹೈದರಾಬಾದ್(ಆ.23): ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಬೆಜಿಪಿ ನಾಯಕ ಟಿ ರಾಜಾ ಸಿಂಗ್ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ನೂಪುರ್ ಶರ್ಮಾ ಬಳಿಕ ವಿವಾದ ಕಿಡಿ ಹೊತ್ತಿಸಿ ಇಂದು ಅರೆಸ್ಟ್ ಆಗಿದ್ದ ಟಿ ರಾಜಾ ಸಿಂಗ್‌ಗೆ ನಾಂಪಲ್ಲಿ ಕ್ರಿಮಿನಲ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಟಿ ರಾಜಾ ಸಿಂಗ್ ಜಾಮೀನು ಪಡೆದು ಹೊರಬಂದಿದ್ದಾರೆ. ಇದರಿಂದ ಟಿ ರಾಜಾ ವಿರುದ್ದ ಆಕ್ರೋಶ ಹೆಚ್ಚಾಗಿದೆ. ಕೋರ್ಟ್ ಹೊರಾಂಗಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದಂತೆ ಪ್ರತಿಭಟನೆ ಜೋರಾಗಿದೆ. ಟಿ ರಾಜಾ ಸಿಂಗ್ ಕೋರ್ಟ್‌ಗೆ ಹಾಜರುಪಡಿಸುವ ಮೊದಲೇ ಪೊಲೀಸರು ಭಾರಿ ಭದ್ರತೆ ನಿಯೋಜಿಸಿತ್ತು. ಹೀಗಾಗಿ ಅಹಿತಕರ ಘಟನೆಗಳು ತಪ್ಪಿದೆ.
ಪೊಲೀಸರು ಟಿ ರಾಜಾ ಸಿಂಗ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿತ್ತು. ಆದರೆ ಟಿ ರಾಜಾ ಸಿಂಗ್ ಪರ ವಕೀಲರುು ಜಾಮೀನು ಅರ್ಜಿ ಸಲ್ಲಿಸಿದರು. ಈ ವೇಳೆ ಟಿ ರಾಜಾ ಸಿಂಗ್ ವಕೀಲರು ಮಹತ್ವದ ವಾದವೊಂದನ್ನು ಮುಂದಿಟ್ಟರು ಪೊಲೀಸರು ಪ್ರೊಸೀಜರ್ ಕೋಡ್ ಸೆಕ್ಷನ್ 41ರ ಅಡಿಯಲ್ಲಿ ಷರತ್ತುಗಳನ್ನು ಪಾಲಿಸಿಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಜ್ಯುಡಿಶಿಯಲ್ ಕಸ್ಟಡಿ ಆದೇಶ ತಿರಸ್ಕರಿಸಿ ರಾಜಾ ಸಿಂಗ್‌ಗೆ ಜಾಮೀನು ನೀಡಿತು. 20,000 ರೂಪಾಯಿ ವೈಯುಕ್ತಿತ ಬಾಂಡ್ ಮೂಲಕ ರಾಜಾ ಸಿಂಗ್‌ಗೆ ಜಾಮೀನು ನೀಡಿತು.
ಪ್ರವಾದಿ ಪೈಗಂಬರ್ ಕುರಿತಾಗಿ ಹೇಳಿಕೆ, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಬಂಧನ, ಪಕ್ಷದಿಂದ ಅಮಾನತು!
ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಕುಖ್ಯಾತಿ ಪಡೆದಿರುವ ರಾಜಾ ಸಿಂಗ್ ಸೋಮವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಹೈದರಾಬಾದ್‌ನಲ್ಲಿ ಆಯೋಜಿತವಾಗಿದ್ದ ವಿವಾದಿತ ವಿದೂಷಕ ಮುನಾವರ್ ಫಾರೂಖಿ ಅವರ ಹಾಸ್ಯ ಕಾರ್ಯಕ್ರಮವನ್ನು ವಿರೋಧಿಸಿದ್ದರು. ಅದರಲ್ಲಿ ಪ್ರವಾದಿ ಮೊಹಮ್ಮದ್, ಇಸ್ಲಾಂ ಧರ್ಮ ಹಾಗೂ ಆ ಧರ್ಮದ ಉಡುಗೆ ತೊಡುಗೆಗಳ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಅಸಾದುದ್ದೀನ್ ಒವೈಸಿ ನೇತೃತ್ವದ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಯಕರ್ತರು ಹಾಗೂ ಇಸ್ಲಾಂ ಧರ್ಮೀಯರು ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿ, ರಾಜಾ ಸಿಂಗ್ ಬಂಧನಕ್ಕೆ ಆಗ್ರಹಿಸಿದ್ದರು. ಹೈದರಾಬಾದ್‌ನ 3 ವಲಯಗಳ ವಿವಿಧ ಠಾಣೆಗಳಲ್ಲಿ ಧರ್ಮ-ಧರ್ಮದ ನಡುವೆ ದ್ವೇಷ ಹಚ್ಚುವ ಕುರಿತ ಪ್ರಕರಣ ದಾಖಲಾಗಿದ್ದವು.
ಬಿಜೆಪಿಯಿಂದ ಅಮಾನತು:
ಇದರ ಬೆನ್ನಲ್ಲೇ ದಿಲ್ಲಿಯ ಬಿಜೆಪಿ ವರಿಷ್ಠರು ರಾಜಾ ಸಿಂಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ‘ನೀವು ಮಾತನಾಡಿದ್ದು ಪಕ್ಷದ ನೀತಿಯ ವಿರುದ್ಧ. ಪಕ್ಷದ 25 (10ಎ) ನಿಯಮವನ್ನು ಅದು ಉಲ್ಲಂಘಿಸುತ್ತದೆ. ನಿಮ್ಮ ವಿರುದ್ಧ ಪಕ್ಷದಲ್ಲಿ ಆಂತರಿಕ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ನಿಮ್ಮನ್ನು ಅಮಾನತು ಮಾಡಲಾಗುತ್ತದೆ. ನಿಮ್ಮನ್ನು ಏಕೆ ಉಚ್ಚಾಟಿಸಬಾರದು ಎಂಬ ಬಗ್ಗೆ ಸೆ.2ರೊಳಗೆ ಉತ್ತರ ನೀಡಿ’ ಎಂದು ಬಿಜೆಪಿ ಶುಸ್ತುಪಾಲನಾ ಸಮತಿ ಕಾರ್ಯದರ್ಶಿ ಓಂ ಪಾಠಕ್ ಅವರು ಸಿಂಗ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ