ಗಲಭೆಕೋರರಿಂದಲೇ ಆಸ್ತಿ ನಷ್ಟವಸೂಲಿ?

By Kannadaprabha NewsFirst Published Mar 1, 2020, 7:25 AM IST
Highlights

ದಿಲ್ಲಿಯಲ್ಲಿ ಸಿಎಎ ಹೋರಾಟದ ಹೆಸರಿನಲ್ಲಿ ಭಾರೀ ಹಿಂಸಾಚಾರ ನಡೆದಿದ್ದು, ಈ ವೇಳೆ ಸಾಕಷ್ಟು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದೆ. ಗಲಭೆಕೋರರಿಂದಲೇ ಹಾನಿ ನಷ್ಟ ತುಂಬಿಸಲಾಗುತ್ತದೆ. 

ನವದೆಹಲಿ [ಮಾ.1]: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 43 ಮಂದಿಯನ್ನು ಬಲಿ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ- ವಿರೋಧ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡಿದ ಗಲಭೆಕೋರರಿಗೆ ಇದೀಗ ಸಂಚಕಾರ ಕಾದಿದೆ. ಉತ್ತರಪ್ರದೇಶ ಸರ್ಕಾರ ಮಾದರಿಯಲ್ಲಿ ದೆಹಲಿ ಪೊಲೀಸರು ಕೂಡ ಗಲಭೆಕೋರರ ಆಸ್ತಿ ಜಪ್ತಿ ಮಾಡಿ ಸಾರ್ವಜನಿಕ- ಖಾಸಗಿ ಆಸ್ತಿಗೆ ಆದ ನಷ್ಟಭರಿಸಲು ಮುಂದಾಗಿದ್ದಾರೆ. ಇದೇ ವೇಳೆ, ಗಲಭೆಯಲ್ಲಿ ಭಾಗಿಯಾದವರ ಗುರುತು ಪತ್ತೆಗೆ ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನದ ಮೊರೆ ಹೋಗಿರುವುದರಿಂದ, ಕಂಡಕಂಡ ವಾಹನ, ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಿ ಮೆರೆದಾಡಿದ್ದ ದುಷ್ಟರಿಗೆ ಸಂಕಷ್ಟಎದುರಾಗಿದೆ.

ಗಲಭೆಯಿಂದ ಆಗಿರುವ ಹಾನಿಯ ಅಂದಾಜು ಪ್ರಕ್ರಿಯೆಯಲ್ಲಿ ದೆಹಲಿ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರದ ಜತೆ ಸಮನ್ವಯ ಸಾಧಿಸುವಂತೆ ಅಪರಾಧ ವಿಭಾಗದ ವಿಶೇಷ ತನಿಖಾ ತಂಡಕ್ಕೆ ಸೂಚನೆ ಹೋಗಿದೆ ಎಂದು ಈ ಬೆಳವಣಿಗೆಯನ್ನು ಹತ್ತಿರದಿಂದ ಮೂಲಗಳು ತಿಳಿಸಿವೆ.

ನಾಲ್ಕು ದಿನಗಳ ಗಲಭೆ ವೇಳೆ ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಇಟ್ಟು, ಹಾನಿ ಮಾಡಿ, ಲೂಟಿಯಲ್ಲಿ ಸಕ್ರಿಯರಾಗಿದ್ದ ಉದ್ರಿಕ್ತರ ಗುರುತಿಸುವಿಕೆ ಜವಾಬ್ದಾರಿಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈಗಾಗಲೇ 1000 ಮಂದಿಯನ್ನು ಗುರುತಿಸಲಾಗಿದ್ದು, ಈ ಪೈಕಿ 630 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಗಲಭೆಯಲ್ಲಿ ನೂರಾರು ಕೋಟಿ ರು. ನಷ್ಟವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಮಾ.22 ರಿಂದ ಐಷಾರಾಮಿ ಗೋಲ್ಡನ್‌ ಚಾರಿಯಟ್‌ ರೈಲು ಸೇವೆ ಪುನಾರಂಭ..

79 ಮನೆ, 52 ಅಂಗಡಿ, 5 ಗೋಡೋನ್‌, 3 ಕಾರ್ಖಾನೆ, 4 ಮಸೀದಿ, 2 ಶಾಲೆಗಳಿಗೆ ದೆಹಲಿ ಗಲಭೆ ವೇಳೆ ಬೆಂಕಿ ಹಚ್ಚಲಾಗಿದೆ ಅಥವಾ ಹಾನಿ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಂದಾಜಿಸಿದೆ. ಇದೇ ವೇಳೆ, ನಿಖರ ಆಸ್ತಿಯ ನಷ್ಟದ ಪತ್ತೆಗಾಗಿ ಪೂರ್ವ ದೆಹಲಿಯ ಪುರಸಭೆ, ವಿದ್ಯುತ್‌ ನಿಗಮ ಸೇರಿದಂತೆ ಇನ್ನಿತರ ಸಂಸ್ಥೆಗಳ ಸಹಕಾರ ಕೋರಲಾಗಿದೆ.

ಫೇಶಿಯಲ್‌ ರೆಕಗ್ನಿಷನ್‌:

40ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಈಶಾನ್ಯ ದೆಹಲಿ ಹಿಂಸಾಚಾರದ ಗಲಭೆಕೋರರ ಪತ್ತೆಗಾಗಿ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ಗಲಭೆಯಲ್ಲಿ ಭಾಗಿದಾರರಾದ ದುಷ್ಕರ್ಮಿಗಳು ನೆರೆಯ ಉತ್ತರ ಪ್ರದೇಶದಿಂದ ಬಂದಿದ್ದಾರೆ ಎಂಬ ಶಂಕೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, ಉದ್ರಿಕ್ತರ ಶೋಧ ಮತ್ತು ಪತ್ತೆಗಾಗಿ ಮೇರೆಗೆ ಮುಖಚರ್ಯೆ ಪತ್ತೆ (ಫೇಶಿಯಲ್‌ ರೆಕಗ್ನಿಷನ್‌) ತಂತ್ರಜ್ಞಾನ ಸೇರಿದಂತೆ ಇನ್ನಿತರ ಕ್ರಮಗಳನ್ನು ಅನುಸರಿಸುವ ಸಂಬಂಧ ದೆಹಲಿ ಪೊಲೀಸರು ಮತ್ತು ಗುಪ್ತಚರ ಸಂಸ್ಥೆ ತಂಡದ ಅಧಿಕಾರಿಗಳು ಕಾರ್ಯ ಯೋಜನೆ ಸಿದ್ಧವಾಗಿದೆ ಎನ್ನಲಾಗಿದೆ.

click me!