
ನವದೆಹಲಿ (ಏ.9): ರಾಷ್ಟ್ರ ರಾಜಧಾನಿ ದೆಹಲಿಯ ಮಂಗೋಲ್‌ಪುರಿಯಲ್ಲಿ ಭೀಕರ ಘಟನೆ ನಡೆದಿದೆ. ತನ್ನ ಅಂಕಲ್ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಒಪ್ಪದ 35 ವರ್ಷದ ಮಹಿಳೆಯನ್ನು 22 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕ, ಆತನ ಅಂಕಲ್ ಮತ್ತು ಕೃತ್ಯಕ್ಕೆ ಸಹಕರಿಸಿದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆ ಮಂಗೋಲ್‌ಪುರಿ ನಿವಾಸಿಯಾಗಿದ್ದು, ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಕೆ ಈಗಾಗಲೇ ವಿವಾಹಿತೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಆದರೆ, ಸ್ಥಳೀಯವಾಗಿ ಚಿಕನ್ ಶಾಪ್ ನಡೆಸುತ್ತಿದ್ದ 22 ವರ್ಷದ ಆರೋಪಿ ಯುವಕನೊಂದಿಗೆ ಈಕೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆರೋಪಿ ಯುವಕ ತನ್ನ ಅಂಕಲ್‌ನ ಲೈಂಗಿಕ ಆಸೆಯನ್ನು ತೀರಿಸಲು ಸಹಕರಿಸುವಂತೆ ಮಹಿಳೆಯನ್ನು ಪದೇ ಪದೇ ಒತ್ತಾಯಿಸುತ್ತಿದ್ದ. ಆದರೆ ಮಹಿಳೆ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರು.
ಘಟನೆಯ ದಿನದಂದು ಆರೋಪಿ ಯುವಕ ತನ್ನ ಅಂಕಲ್ ಮತ್ತು ಸ್ನೇಹಿತನನ್ನು ಸ್ನೇಹಿತನ ಬಾಡಿಗೆ ಕೋಣೆಗೆ ಕರೆಸಿಕೊಂಡಿದ್ದ. ನಂತರ ಪ್ರೇಯಸಿಯನ್ನು ಅಲ್ಲಿಗೆ ಕರೆತಂದಿದ್ದ. ಅಂಕಲ್ ಮತ್ತು ಸ್ನೇಹಿತ ಹೊರಗಿನ ಕೋಣೆಯಲ್ಲಿ ಕುಳಿತಿದ್ದಾಗ, ಒಳಗಿನ ಕೋಣೆಯಲ್ಲಿ ಯುವಕ ಮತ್ತೆ ಮಹಿಳೆಗೆ ಅಂಕಲ್ ಜೊತೆ ಸೆಕ್ಸ್ ಮಾಡುವಂತೆ ಪೀಡಿಸಿದ್ದಾನೆ. ಮಹಿಳೆ ನಿರಾಕರಿಸಿದಾಗ ಆಕೆಯನ್ನು ಗೋಡೆಗೆ ತಳ್ಳಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಳಿಕ ನೆಲಕ್ಕೆ ತಳ್ಳಿ, ಉಣ್ಣೆಯ ಕಂಬಳಿಯಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ.
ಮಹಿಳೆ ಮೃತಪಟ್ಟಿದ್ದಾಳೆ ಎಂದು ಖಚಿತವಾದ ನಂತರ, ಶವವನ್ನು ಕೋಣೆಯಲ್ಲಿದ್ದ ಬೆಡ್‌ಬಾಕ್ಸ್ (ಮಂಚದ ಒಳಗಿನ ಸ್ಟೋರೇಜ್) ಒಳಗೆ ತುರುಕಿ ಬಚ್ಚಿಟ್ಟಿದ್ದಾನೆ. ಬಳಿಕ ಹೊರಬಂದು ಅಂಕಲ್ ಮತ್ತು ಸ್ನೇಹಿತನಿಗೆ ವಿಷಯ ತಿಳಿಸಿದ್ದಾನೆ. ಅವರಿಬ್ಬರೂ ಆರೋಪಿ ಸ್ಥಳದಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆ.
ಸಂಜೆ ವೇಳೆ ಮನೆ ಮಾಲೀಕರು ಮನೆಗೆ ಬಂದಾಗ, ಕೋಣೆಯಲ್ಲಿದ್ದ ಬೆಡ್‌ಬಾಕ್ಸ್‌ನಿಂದ ಮಹಿಳೆಯ ಕಾಲು ಹೊರಕ್ಕೆ ಚಾಚಿರುವುದು ಕಂಡುಬಂದಿದೆ. ಗಾಬರಿಗೊಂಡು ಬಾಕ್ಸ್ ತೆರೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಹಿಳೆಯ ಹಣೆಯ ಮೇಲಿದ್ದ ಗಾಯದ ಗುರುತುಗಳು ಇದು ಕೊಲೆ ಎಂಬುದನ್ನು ಖಚಿತಪಡಿಸಿವೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೃತ ಮಹಿಳೆಯನ್ನು ಗುರುತಿಸಿದ್ದು, ಆಕೆಯ ಬಾಯ್‌ಫ್ರೆಂಡ್‌ಅನ್ನೇ ಪ್ರಮುಖ ಆರೋಪಿ ಎಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸದ್ಯ ಮೂವರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ