
ನವದೆಹಲಿ (ಮಾ.21): ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಜಾರ್ಖಂಡ್‌ನ ಹೇಮಂತ್ ಸೋರೆನ್ ಅವರನ್ನು ಬಂಧಿಸಿದ ನಂತರ ಕೇಜ್ರಿವಾಲ್ ಇತ್ತೀಚಿನ ದಿನಗಳಲ್ಲಿ ಬಂಧಿಸಲ್ಪಟ್ಟ ಎರಡನೇ ಹಾಲಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಹೇಮಂತ್ ಸೊರೆನ್ ಬಂಧನಕ್ಕೆ ಒಳಗಾಗುವ ಮುನ್ನ ಚಂಪೈ ಸೊರೆನ್ ಅವರಿಗೆ ಸರ್ಕಾರದ ನೇತೃತ್ವವನ್ನು ನೀಡಿದ್ದರು. ಆದರೆ, ಆಮ್ ಆದ್ಮಿ ಪಾರ್ಟಿ ಮಾತ್ರ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿಯೇ ಉಳಿಯಲಿದ್ದಾರೆ ಎಂದು ಹೇಳಿದ್ದು, ಜೈಲಿನಿಂದಲೇ ದೆಹಲಿಯನ್ನು ಆಳಲಿದ್ದಾರೆ ಎಂದು ಹೇಳಿತ್ತು. ಅಕ್ರಮ ಮದ್ಯ ನೀಡಿ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ಬಂಧನ ಒಂದು ವಾರದ ಬಳಿಕ ಕೇಜ್ರಿವಾಲ್ ಅವರ ಬಂಧನವಾಗಿದೆ. ಒಂದು ವಾರದ ಹಿಂದೆ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಿ ನವದೆಹಲಿಗೆ ಕರೆತರಲಾಗಿತ್ತು.
ಕವಿತಾ ಅವರ ಬಂಧನದ ಬೆನ್ನಲ್ಲಿಯೇ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಲಿದೆ ಎನ್ನುವುದು ಅಂದಾಜಾಗಿತ್ತು. ಇಡಿಯಿಂದ ಬಂಧನವನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ದೆಹಲಿ ಹೈಕೋರ್ಟ್‌ಗೆ ಇಡಿಯಿಂದ ಬಲವಂತದ ಕ್ರಮದ ವಿರುದ್ಧ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಪುರಸ್ಕರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಇಡಿಗೆ ಕೇಜ್ರಿವಾಲ್ ಅವರನ್ನು ಬಂಧಿಸುವ ಕೆಲಸ ಇನ್ನಷ್ಟು ಸುಲಭವಾಗಿತ್ತು. ಹೈಕೋರ್ಟ್ ಆದೇಶ ಬಂದ ಕೆಲವೇ ಹೊತ್ತಿನಲ್ಲಿಯೇ ಇಡಿ ಅಧಿಕಾರಿಗಳು ಸಮನ್ಸ್ ಹಾಗೂ ಸರ್ಚ್ ವಾರಂಟ್‌ನೊಂದಿಗೆ ಕೇಜ್ರಿವಾಲ್ ಅವರ ಸಿವಿಲ್ ಲೈನ್ಸ್ ನಿವಾಸಕ್ಕೆ ಆಗಮಿಸಿದ್ದರು. ಕೆಲವು ಗಂಟೆಗಳ ವಿಚಾರಣೆಯ ಬಳಿಕ ಕೇಜ್ರಿವಾಲ್ ಅವರನ್ನು ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿತು.
Electoral Bond: ಲಾಟರಿ ಕಿಂಗ್ ಕಂಪನಿಯಿಂದ ಟಿಎಂಸಿಗೆ 542 ಕೋಟಿ, ಬಿಜೆಪಿಗೆ 'ಮೇಘಾ' ಗರಿಷ್ಠ ಡೋನರ್!
ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿದ್ದು ಯಾಕೆ?: ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಇಡಿ ಕಳೆದ ವರ್ಷದಿಂದಲೂ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಿ ವಿಚಾರಣೆಗೆ ಬರುವಂತೆ ಕೇಳುತ್ತಲೇ ಇತ್ತು. ಆದರೆ, ಇಲ್ಲಿಯವರೆಗೂ 9 ಸಮನ್ಸ್‌ಗಳನ್ನು ಅವರು ತಪ್ಪಿಸಿಕೊಂಡಿದ್ದರು. ಸಿಎಂ ಆಗಿರುವುದರಿಂದ ವಿವಿಧ ಕಾರ್ಯಕ್ರಮಗಳ ಕಾರಣ ನೀಡಿ ಈ ಎಲ್ಲಾ ಸಮನ್ಸ್‌ಗೆ ಉತ್ತರಿಸಲು ನಿರಾಕರಿಸಿದ್ದರು. ಇತ್ತೀಚೆಗೆ ಕೋರ್ಟ್ ಮೆಟ್ಟಿಲೇರಿದ್ದ ಅರವಿಂದ್ ಕೇಜ್ರಿವಾಲ್, ಇಡಿಯ ಸಮನ್ಸ್ ಅಸಂವಿಧಾನಿಕ ಎಂದಿದ್ದರು. ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ಈ ಹಂತದಲ್ಲಿ ಈ ಕೇಸ್‌ನ ಬಗ್ಗೆ ನಾವು ತಲೆಹಾಕೋದಿಲ್ಲ ಎಂದು ತಿಳಿಸಿತ್ತು. ಭ್ರಷ್ಟಾಚಾರದ ಆರೋಪದ ನಂತರ ರದ್ದುಪಡಿಸಿದ ಮದ್ಯ ನೀತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ಇಡಿ ಅಧಿಕಾರಿಗಳು, ಸುಪ್ರೀಂ ಕೋರ್ಟ್ ಬಾಗಿಲಿಗೆ ಆಮ್ ಆದ್ಮಿ ಪಾರ್ಟಿ
ಅರವಿಂದ್ ಕೇಜ್ರಿವಾಲ್ ಪಾಲಿಗೆ ಮುಂದೇನು: ಕೇಜ್ರಿವಾಲ್ ಬಂಧನವನ್ನು ರದ್ದುಗೊಳಿಸುವಂತೆ ಪಕ್ಷವು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ ಎಂದು ದೆಹಲಿ ಸಚಿವ ಮತ್ತು ಎಎಪಿ ನಾಯಕಿ ಅತಿಶಿ ಹೇಳಿದ್ದಾರೆ. "ನಾವು ಇಂದು ರಾತ್ರಿಯೇ ಸುಪ್ರೀಂ ಕೋರ್ಟ್‌ನಿಂದ ತುರ್ತು ವಿಚಾರಣೆಯನ್ನು ಕೇಳಿದ್ದೇವೆ" ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ನಡುವೆ, ದೆಹಲಿಯ 23.8 ಲಕ್ಷ ಮನೆಗಳಲ್ಲಿ 'ಮೇ ಭೀ ಕೇಜ್ರಿವಾಲ್' ಸಮೀಕ್ಷೆಯ ನಂತರ ನಿರ್ಧರಿಸಲ್ಪಟ್ಟಂತೆ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಎಎಪಿ ನಾಯಕತ್ವ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ