ದೆಹಲಿಯ ಪ್ರಸಿದ್ಧ ಬೇಕರಿ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ಬಗ್ಗೆ ನಡೆದ ಜಗಳವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೆಹಲಿ (ಜ.1): ಪ್ರಸಿದ್ಧ ದೆಹಲಿ ಬೇಕರಿ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿಯಿಂದ ದೂರವಾಗಿದ್ದ ಅವರು ಮಂಗಳವಾರ ಸಂಜೆ ಸಾವಿಗೆ ಶರಣಾಗಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ದೆಹಲಿಯ ಪ್ರಸಿದ್ಧ ಕೆಫೆಯ ಸಹ-ಸಂಸ್ಥಾಪಕ ಪುನೀತ್ ಖುರಾನಾ ಮಂಗಳವಾರ ಸಂಜೆ ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ್ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಏರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಕುಟುಂಬ ಸದಸ್ಯರ ಪ್ರಕಾರ, 38 ವರ್ಷದ ಉದ್ಯಮಿ ಪುನೀತ್ ತಮ್ಮ ವಿಚ್ಛೇದನ ಪ್ರಕ್ರಿಯೆಯಿಂದ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆಗೆ ಕೆಲ ಸಮಯದ ಮೊದಲು, ತಮ್ಮ ಪತ್ನಿಯೊಂದಿಗೆ ಜಂಟಿಯಾಗಿ ಆರಂಭಿಸಿದ ಬೇಕರಿ ವ್ಯವಹಾರದ ಬಗ್ಗೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಫೋನ್‌ನಲ್ಲಿ ಇಬ್ಬರು ಕೂಡ ಈ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಕಾನೂನುಬದ್ಧವಾಗಿ ನಡೆಯುತ್ತಿದ್ದ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ಬಗ್ಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈಗಾಗಲೇ ಒತ್ತಡದಲ್ಲಿದ್ದ ಪುನೀತ್, ಪತ್ನಿಯೊಂದಿಗಿನ ವಾಗ್ವಾದದ ನಂತರ ಮತ್ತಷ್ಟು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ತಿಳಿಸಿದೆ.
ಪೊಲೀಸರು ಪುನೀತ್ ಅವರ ಫೋನ್ ವಶಪಡಿಸಿಕೊಂಡಿದ್ದು, ಅವರ ಸಾವಿಗೆ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಪುನೀತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿಯನ್ನೂ ವಿಚಾರಣೆ ನಡೆಸಲು ಮುಂದಾಗಿದ್ದು, ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
2016 ರಲ್ಲಿ ಇವರಿಬ್ಬರ ವಿವಾಹವಾಗಿತ್ತು. ದೆಹಲಿ ಬೇಕರಿ ಮಾಲಿಕತ್ವದ ಜೊತೆಗೆ ಫಾರ್ ಗಾಡ್ಸ್ ಕೇಕ್ ಬೇಕರಿ ಮತ್ತು ವುಡ್‌ಬಾಕ್ಸ್ ಕೆಫೆ ಎಂಬ ಇನ್ನೊಂದು ಉಪಾಹಾರ ಗೃಹದ ಸಹ-ಮಾಲೀಕತ್ವವನ್ನು ಹೊಂದಿದ್ದರು. ಕೆಲ ಸಮಯದ ಹಿಂದೆ ವುಡ್‌ಬಾಕ್ಸ್ ಕೆಫೆಯನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.
ಈ ನಡುವೆ ಇವರಿಬ್ಬರ ನಡುವಿನ ಸಂಭಾಷಣೆಯ ಆಡಿಯೋ ಕೂಡ ಪೊಲೀಸರಿಗೆ ಸಿಕ್ಕಿದ್ದು, ನೀವು ನನಗೆ ಬೆಳಿಗ್ಗೆ 3 ಗಂಟೆಗೆ ಕರೆ ಮಾಡುತ್ತಿದ್ದೀರಿ, ನಿಮಗೆ ನಿದ್ರೆ ಬರುತ್ತಿಲ್ಲವೇ? ನೀವು ನನ್ನನ್ನು ಮತ್ತು ನನ್ನ ಕುಟುಂಬವನ್ನು ಅಗೌರವಗೊಳಿಸಿದ್ದೀರಿ ಎಂದು ಪತ್ನಿ ಹೇಳುತ್ತಿರುವುದು ಕಂಡುಬಂದಿದೆ. ಪ್ರತಿಯಾಗಿ ಗಂಡ ಪುನೀತ್ ಖುರಾನಾ ನಿನಗೇನು ಬೇಕು ಎಂದು ಹೇಳು ಎಂದಿದ್ದಾನೆ.
ಈ ನಡುವೆ ಪುನೀತ್ ಪತ್ನಿ ಮಣಿಕಾ ಪಹ್ವಾ, ಗಂಡನ ಸಹೋದರಿ ಮತ್ತು ಪೋಷಕರ ವಿರುದ್ಧ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಆದರೆ ಪುನೀತ್ ಅವರ ಸಹೋದರಿ ಪುನೀತ್ ಪತ್ನಿ ಮತ್ತು ಆಕೆಯ ಅಮ್ಮ ತನ್ನ ಸಹೋದರನಿಗೆ ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ್ದಾರೆಂದು ಸುಮಾರು 59 ನಿಮಿಷಗಳ ವೀಡಿಯೊ ರೆಕಾರ್ಡಿಂಗ್ ಇದೆ, ಅದರಲ್ಲಿ ಪುನೀತ್ ಅವರು ಎದುರಿಸಿದ ಕಿರುಕುಳದ ವಿವರಗಳನ್ನು ಉಲ್ಲೇಖಿಸಿದ್ದಾರೆ. ಪತ್ನಿ ಪುನೀತ್ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಹ ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಅತುಲ್ ಸುಭಾಷ್ ರಂತೆ ಪುನೀತ್ ಘಟನೆ ನಡೆದು ಹೋಯ್ತಾ?
ಈ ಪ್ರಕರಣ ಇತ್ತೀಚೆಗೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವನ್ನು ನೆನಪಿಸುವಂತೆ ಮಾಡಿದೆ. 34 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಅತುಲ್ ಕಳೆದ ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದ 24 ಪುಟಗಳ ಆತ್ಮಹತ್ಯೆ ಪತ್ರ ಮತ್ತು ವಿಡಿಯೋ ಸಂದೇಶ ಬಹಿರಂಗವಾಗಿತ್ತು.
ತನ್ನ ಆತ್ಮಹತ್ಯೆಗೆ ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳವೇ ಕಾರಣ ಎಂದು ಅತುಲ್ ಆರೋಪಿಸಿದ್ದರು. ಪತ್ನಿ ಮತ್ತು ಆಕೆಯ ಸಂಬಂಧಿಕರು ಪೊಲೀಸ್ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಈಗ ಪುನೀತ್ ಕೂಡ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು ಎಂದು ಶಂಕಿಸಲಾಗಿದೆ. ವ್ಯವಹಾರ ಮತ್ತು ವಿಚ್ಛೇದನದ ವಿಷಯದಲ್ಲಿ ಪತ್ನಿಯ ಒತ್ತಡವೇ ಅವರ ಸಾವಿಗೆ ಕಾರಣ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.