
ನಗರದಲ್ಲಿ ಹಲವು ದಿನಗಳಿಂದ ರಾತ್ರಿ ವೇಳೆ ವಿವಿಧ ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಸುಖಾಸುಮ್ಮನೆ ಹೊಡೆದು ಹೋಗುತ್ತಿದ್ದನು. ಈ ಬಗ್ಗೆ ಐದಾರು ದೂರುಗಳು ದಾಖಲಾಗಿದ್ದಕ್ಕೆ, ಯಾವುದೇ ದ್ವೇಷ ಇಲ್ಲದಿದ್ದರೂ ಹೋಗೆ ಯಾಕೆ ಹೊಡೆದು ಹೋಗುತ್ತಿದ್ದಾನೆ ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಆದರೂ, ಯುವಕನನ್ನು ಪತ್ತೆಹಚ್ಚಿ ಹಿಡಿದು ವಿಚಾರಣೆ ಮಾಡಿದಾಗ ಆತ ವಿಚಿತ್ರ ಕಾರಣವನ್ನು ಬಿಚ್ಚಿಟ್ಟಿದ್ದಾನೆ.
ಅಪರಿಚಿತ ದಾರಿಹೋಕರನ್ನು ನಿರಂತರವಾಗಿ ಹೊಡೆಯುತ್ತಿದ್ದ ಯುವಕನನ್ನು ಕೊನೆಗೂ ಬಂಧಿಸಲಾಗಿದೆ. ಆದರೆ, ಜನರನ್ನು ಹೊಡೆಯುವಾಗ ತನ್ನ ಖಿನ್ನತೆಗೆ ಶಮನವಾಗುತ್ತದೆ ಎಂಬ ಯುವಕನ ಬಹಿರಂಗಪಡಿಸುವಿಕೆ ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಉತ್ತರ ಪ್ರದೇಶದ ಮೀರಟ್‌ನ ಕಪಿಲ್ ಕುಮಾರ್ (23) ಎಂಬಾತನನ್ನು ದಾರಿಹೋಕರನ್ನು ಹೊಡೆದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ತನ್ನ ದೇಹದಲ್ಲಿನ ಹೆಚ್ಚುವರಿ ಡೋಪಮೈನ್ ಅನ್ನು ಕಡಿಮೆ ಮಾಡಲು ಬೀದಿಯಲ್ಲಿ ಹೋಗುವವರನ್ನು ಹೊಡೆಯುತ್ತಿದ್ದೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಜೀವನದಲ್ಲಿ ಸತತವಾಗಿ ಎದುರಾದ ಕೆಟ್ಟ ಅನುಭವಗಳು ಕಪಿಲ್‌ನನ್ನು ಖಿನ್ನತೆಗೆ ಒಳಪಡಿಸಿದ್ದವು.
ತಂದೆಯ ಸಾವು ಮತ್ತು ನಂತರ ತಾಯಿಯ ಪುನರ್ವಿವಾಹ ಕಪಿಲ್‌ನನ್ನು ಮಾನಸಿಕವಾಗಿ ತುಂಬಾ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು. ನಿಧಾನವಾಗಿ ಖಿನ್ನತೆಗೆ ಒಳಗಾದ ಕಪಿಲ್ ಕಳೆದ 5-6 ತಿಂಗಳಿನಿಂದ ತನ್ನ ಸ್ಕೂಟರ್‌ನಲ್ಲಿ ಮೀರತ್‌ನ ಬೀದಿಗಳಲ್ಲಿ ಹೋಗುವಾಗ ದಾರಿಯಲ್ಲಿ ಸಿಗುವವರನ್ನೆಲ್ಲಾ ಹೊಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಪಿಲ್ ದಾರಿಹೋಕರನ್ನು ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಮಹಿಳೆಯರು ಮತ್ತು ನಿವೃತ್ತ ಪಿಸಿಎಸ್ ಅಧಿಕಾರಿ ಸೇರಿದಂತೆ ಹಲವರು ಕಪಿಲ್‌ನ 'ಖಿನ್ನತೆಯ ಬಿಸಿ'ಯನ್ನು ಅನುಭವಿಸಿದ್ದಾರೆ. ದೂರುಗಳು ಹೆಚ್ಚಾದಾಗ ಪೊಲೀಸರು ಕಪಿಲ್‌ನನ್ನು ಬಂಧಿಸಿದರು.
ಇದನ್ನೂ ಓದಿ: ಹೊಸ ವರ್ಷ ಎಣ್ಣೆ ಮತ್ತಿನಲ್ಲಿ ವಿದ್ಯುತ್ ಕಂಬ ಹತ್ತಿ ಗಡದ್ ನಿದ್ದೆ, ಈತ ಬದುಕುಳಿದಿದ್ದೆ ಪವಾಡ
ಈ ಬಗ್ಗೆ @meerutmetro_ ಎಂಬ ಎಕ್ಸ್ ಖಾತೆಯಿಂದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ 'ಮೀರತ್ ನ ಫೂಲ್ ಬಾಗ್ ಕಾಲೋನಿಯಲ್ಲಿ ಸ್ಕೂಟರ್ ಸವಾರ ಸುಖಾಸುಮ್ಮನೆ ಕಪಾಳಮೋಕ್ಷ ಮಾಡುವ ಭೀತಿ ಎದುರಾಗಿದೆ. ಈ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಹಿಂದಿನಿಂದ ಕಪಾಳಮೋಕ್ಷ ಮಾಡಿ ಓಡಿ ಹೋಗುತ್ತಾನೆ. ವ್ಯಕ್ತಿಯ ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಮತ್ತು ಹಲವಾರು ದೂರುಗಳು ಬಂದ ನಂತರ, ಪೊಲೀಸರು ಆತನನ್ನು ಬಂಧಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಇನ್ನು ಮೂರು ವಿಡಿಯೋದಲ್ಲಿ ಕಪಿಲ್‌ನನ್ನು ಗುರುತಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ಕಪಿಲ್ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಇದಾದ ಕೆಲವೇ ತಿಂಗಳುಗಳ ನಂತರ ತಾಯಿ ಮರುವಿವಾಹವಾದರು. ಈಗ ಕಪಿಲ್ ತಾಯಿ ಮತ್ತು ಮಲತಂದೆಯೊಂದಿಗೆ ವಾಸಿಸುತ್ತಿದ್ದಾನೆ. ಉದ್ಯೋಗವಿಲ್ಲದ ಕಾರಣ ತಾನು ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ಕುಟುಂಬದಲ್ಲಿನ ತೊಂದರೆಗಳಿಂದ ಪಾರಾಗಲು ಮತ್ತು ಒತ್ತಡವನ್ನು ನಿವಾರಿಸಲು ದಾರಿಹೋಕರನ್ನು ಹೊಡೆಯುವ ವಿಚಿತ್ರ ಕೃತ್ಯ ಮಾಡುತ್ತಿರುವುದಾಗಿ ಎಂದು ಕಪಿಲ್ ಪೊಲೀಸರಿಗೆ ತಿಳಿಸಿದ್ದಾನೆ. ಜೀವನದಲ್ಲಿ ಒಳ್ಳೆಯದು ಆಗದ ಕಾರಣ ಕೆಟ್ಟ ಕೆಲಸಗಳನ್ನು ಮಾಡಿದರೆ ಏನಾದರೂ ಒಳ್ಳೆಯದು ಆಗಬಹುದು ಎಂದು ಭಾವಿಸಿದ್ದೆ ಎಂದು ಆತ ಹೇಳಿದ್ದಾನೆ ಎಂದು ವರದಿಗಳು ತಿಳಿಸಿವೆ. ಕಪಿಲ್‌ಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಎಂದು ಮೀರತ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಲಂಡನ್ ಬಹುಪಾಲು ಆಸ್ತಿ ಖರೀದಿಸಿದ ಭಾರತೀಯರು; ಅರ್ಧ ಜಗತ್ತನ್ನಾಳಿದ ಬ್ರಿಟೀಷರೇ ಈಗ ಸ್ವದೇಶದಲ್ಲಿ ಅಲ್ಪಸಂಖ್ಯಾತರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ