
ವಿಶಾಖಪಟ್ಟಣಂ(ಜ.01) ಕೆಲಸ ಮುಗಿಸಿಕೊಂಡು ಬರುವಾಗ ಒಂದೆರೆಡು ಪೆಗ್ ಏರಿಸಿಕೊಂಡು ಮನೆಗೆ ಹೋಗೋದು ಅಭ್ಯಾಸ. ಆದರೆ ಎಲ್ಲೆಡೆ ಹೊಸ ವರ್ಷದ ರಂಗು ಹೆಚ್ಚಿತ್ತು. ಮನಸ್ಸು ಅರಳಿತ್ತು, ಬಯಕೆ ಡಬಲ್ ಆಗಿದೆ. ಆಫರ್ ಜೋರಾಗಿದೆ. ಇನ್ನೇನು ಬೇಕು ಹೇಳಿ, ದಿನಾ ಹಾಕುತ್ತಿದ್ದ ಎರಡು ಪೆಗ್ ಮೇಲೆ ಮತ್ತೊಂದಿಷ್ಟು ಪೆಗ್ ಒಂದೇ ಗುಟುಕಿನಲ್ಲಿ ಇಳಿದಿತ್ತು. ಇಷ್ಟೇ ನೋಡಿ, ಕೆಲ ಹೊತ್ತಲ್ಲೇ ಭೂಮಿ, ಆಕಾಶ ಒಂದಾಗಲು ಆರಂಭಿಸಿದೆ. ಹೊರಗೆ ನಡೆಯುತ್ತಿದ್ದ ಹೊಸ ವರ್ಷದ ಪಾರ್ಟಿಗಿಂತ ಈತನ ಒಳಗೆ ಏರುತ್ತಿದ್ದ ಎಣ್ಣೆ ನಶೆ ಜೋರಾಗಿದೆ. ಗಿರಿಗಿರ ತಿರುಗುತ್ತಾ ಸಾಗಿದ ಈತನಿಗೆ ಅಡ್ಡಲಾಗಿ ಬಂದಿದ್ದೇ ವಿದ್ಯುತ್ ಕಂಬ್. ಎಣ್ಣೆ ನಶೆ ಆಡಿಸುವಾಗ, ಮಾತೇನು, ಕತೇಯೇನು? ವಿದ್ಯುತ್ ಕಂಬ ಹತ್ತೇ ಬಿಟ್ಟಿದ್ದಾನೆ. ಮೇಲೆ ಹತ್ತುತ್ತಿದ್ದಂತೆ ಸುಸ್ತಾಗಿದೆ. ವಿದ್ಯುತ್ ಕಂಬದ ತಂತಿ ಮೇಲೆ ಮಲಗಿದ್ದಾನೆ.
ಎಣ್ಣೆ ಏಟಿನ ಕತೆ ನಡೆದಿರುವುದು ಆಂಧ್ರ ಪ್ರದೇಶದ ಮಾನ್ಯಂ ಜಿಲ್ಲೆಯ ಎಂ ಸಿಗಿಂಪುರಂ ಗ್ರಾಮದಲ್ಲಿ ನಡೆದಿದೆ. ಕೂಲಿ ಕಾರ್ಮಿಕನೊಬ್ಬ ಎಣ್ಣೆ ಏಟಿನಿಂದ ಮಾಡಿದ ರಾದ್ದಾಂತ ಹಲವರ ಎದೆಬಡಿತ ಹೆಚ್ಚಿಸಿದೆ. ವಿದ್ಯುತ್ ಸಂಪರ್ಕ ಸಿಬ್ಬಂದಿಗಳು ಓಡೋಡಿ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇನ್ಮೇಲೆ ಮದ್ಯ ಖರೀದಿಗೂ ಬೇಕು ಆಧಾರ್ ಕಾರ್ಡ್, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!
ಕೂಲಿ ಕೆಲಸ ಮುಗಿಸಿ ಬರುವಾಗ ಹಾಕಿದ ಪೆಗ್ ಹೆಚ್ಚಾಗಿದೆ. ತಲೆ ಗಿರ ಗಿರಿ ತಿರುಗಿದೆ. ಹೀಗಾಗಿ ಎಣ್ಣೆ ಏಟಿನಲ್ಲಿ ವಿದ್ಯುತ್ ಕಂಬ ಹತ್ತಿದ್ದಾನೆ. ಈ ವೇಳೆ ಸ್ಥಳೀಯರು ಈತನ ವಿದ್ಯುತ್ ಕಂಬ ಹತ್ತದಂತೆ ಮನವಿ ಮಾಡಿದ್ದಾರೆ. ಆದರೆ ಇದ್ಯಾವುದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಆತ ಇರಲಿಲ್ಲ. ವೇಗವಾಗಿ ವಿದ್ಯುತ್ ಕಂಬ ಹತ್ತಿದ್ದಾನೆ. ಸ್ಥಳೀಯರಲ್ಲಿ ಭಯ ಆವರಿಸಿದೆ. ವಿದ್ಯುತ್ ಸಿಬ್ಬಂದಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಸ್ಥಳೀಯರೇ ಟ್ರಾನ್ಸ್‌ಫಾರ್ಮ್‌ನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೀಗಾಗಿ ಈತ ವಿದ್ಯುತ್ ಕಂಬದ ಮೇಲೆರುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ವಿದ್ಯುತ್ ಕಂಬ ಹತ್ತಿದ ಈತ ಹೈಟೆನ್ಶನ್ ತಂತಿ ಮೇಲೆ ಕುಳಿತಿದ್ದಾನೆ. ಒಂದೆಡೆ ಎಣ್ಣೆ ಏಟು, ಮತ್ತೊಂದೆಡೆ ವಿದ್ಯುತ್ ಕಂಬ ಹತ್ತಿದ ಸುಸ್ತು.ಎರಡರಿಂದ ತಂತಿ ಮೇಲೆ ಒರಗಿದ್ದಾನೆ. ಆದರೆ ಕೆಲವೇ ಕ್ಷಣದಲ್ಲಿ ಈತ ನಿದ್ದೆಗೆ ಜಾರಿದ್ದಾನೆ. ಕೆಳಗಿನಿಂದ ಸ್ಥಳೀಯರು ಇಳಿಯಲು ಸೂಚಿಸಿದ್ದಾರೆ, ಕೂಗಿಕೊಂಡಿದ್ದಾರೆ. ಆದರೆ ಯಾವುದು ಕೇಳಿಸದೆ ಈತ ಮಲಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿದ್ಯುತ್ ಸಿಬ್ಬಂದಿಗಳಿಗೆ ಈತನ ಸುರಕ್ಷಿತವಾಗಿ ಇಳಿಸುವುದು ದೊಡ್ಡ ತಲೆನೋವಾಗಿದೆ. ಎಲ್ಲಿ ಅನಾಹುತ ಸಂಭವಿಸುತ್ತೋ ಅನ್ನೋ ಭಯ ಹೆಚ್ಚಾಗಿದೆ.
ಆಯ ತಪ್ಪಿದರೂ, ಜಾರಿದರೂ ಈತ ಕೆಳಕ್ಕೆ ಬೀಳುವ ಸಂಭವ ಹೆಚ್ಚಾಗಿತ್ತು. ಹೀಗಾಗಿ ಕ್ರೇನ್ ತರಿಸಿಕೊಂಡು ಈತನ ಹರಸಹಾಸದಿಂದ ಕೆಳಗೆ ಇಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈತನಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆ, ಸಹಕಾರ, ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಈ ಕುಡುಕ ಬದುಕುಳಿದಿದ್ದಾನೆ. ಆದರೆ ಈತನ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.
ಮದ್ಯ ಕುಡಿದು ದಾರಿಯಲ್ಲಿ ಬಿದ್ದ ಹಲವು ಘಟನೆಗಳಿವೆ. ಆದರೆ ವಿದ್ಯುತ್ ಕಂಬ ಏರಿದ ಘಟನೆ ತೀರಾ ವಿರಳ. ಇಷ್ಟೇ ಅಲ್ಲ ಮದ್ಯ ಕುಡಿದ ನಶೆಯಲ್ಲಿ ವಿದ್ಯುತ್ ಕಂಬ ಹತ್ತುವುದು ಸುಲಭದ ಮಾತಲ್ಲ. ಆದರೆ ಈ ಕುಡುಕ ಸಾಹಸ ಮಾಡಿದ್ದಾನೆ. ಎಣ್ಣೆ ಏಟಿನಲ್ಲಿ ಮಾಡಿದ ಅವಾಂತರದಿಂದ ಇದೀಗ ಪ್ರಕರಣ ಕೂಡ ದಾಖಲಾಗಿದೆ. ಎಣ್ಣೆ ನಶೆ ಇಳಿಯುತ್ತಿದ್ದಂತೆ ಇದೀಗ ತಪ್ಪಿನ ಅರಿವಾಗಿದೆ.
ಬಸ್‌ನಲ್ಲಿ ಎಷ್ಟು ಬಾಟಲಿ ಮದ್ಯ ಕೊಂಡೊಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ