ಅಮ್ಮನ ಆಸೆ ಈಡೇರಿಸಲು ಐಸಿಯುನಲ್ಲೇ ಮದುವೆಯಾದ ಮಗಳು

Published : Dec 27, 2022, 03:18 PM ISTUpdated : Dec 27, 2022, 04:21 PM IST
ಅಮ್ಮನ ಆಸೆ ಈಡೇರಿಸಲು ಐಸಿಯುನಲ್ಲೇ ಮದುವೆಯಾದ ಮಗಳು

ಸಾರಾಂಶ

ಅನಾರೋಗ್ಯಕ್ಕೀಡಾಗಿ ಐಸಿಯುನಲ್ಲಿ ಇದ್ದ ತಾಯಿ ಪೂನಾಂ ಅವರ ಆಸೆ ಈಡೇರಿಸುವ ಸಲುವಾಗಿ ಮಗಳು ಚಾಂದಿನಿ ಆಸ್ಪತ್ರೆಯ ಐಸಿಯು ಆವರಣದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಾಗಿ ಎರಡು ಗಂಟೆಯಲ್ಲಿ ತಾಯಿ ಪ್ರಾಣ ಬಿಟ್ಟಿದ್ದಾರೆ. 

ಪಾಟ್ನಾ: ಸಾಯುವ ಮೊದಲು ಮಕ್ಕಳ ಮದುವೆ ನೋಡಿ ಸಾಯಬೇಕು, ಮಕ್ಕಳ ಮದುವೆ ಮಾಡಿ ನಂತರ ಹೋಗಬೇಕು ಎಂಬ ಮಾತುಗಳನ್ನು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಸಾಯುವ ಮೊದಲು ಮಕ್ಕಳ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕು. ಮಕ್ಕಳಿಗೆ ಎಲ್ಲ ಒಪ್ಪಿಸಿ ನಿರಾಳರಾಗಿ ಸಾಯಬೇಕು ಎಂಬುದು ಬಹುತೇಕ ಭಾರತೀಯ ಪೋಷಕರ ಮನದಿಂಗಿತ. ಹೀಗಾಗಿ ಮಗಳ ಮದುವೆ ನೋಡಿ ಸಾಯಬೇಕು ಎಂದು ಬಯಸಿದ್ದ ತಾಯಿಯೊಬ್ಬರ ಮನದಾಸೆ ಈಡೇರಿಸಲು ಮಗಳು ಆಸ್ಪತ್ರೆಯ ಐಸಿಯು ಒಳಗೆ ಮದುವೆಯಾದ ವಿಶೇಷ ಘಟನೆ ಬಿಹಾರದಿಂದ ವರದಿ ಆಗಿದೆ. ಅನಾರೋಗ್ಯಕ್ಕೀಡಾಗಿ ಐಸಿಯುನಲ್ಲಿ ಇದ್ದ ತಾಯಿ ಪೂನಾಂ ಅವರ ಆಸೆ ಈಡೇರಿಸುವ ಸಲುವಾಗಿ ಮಗಳು ಚಾಂದಿನಿ ಆಸ್ಪತ್ರೆಯ ಐಸಿಯು ಆವರಣದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಾಗಿ ಎರಡು ಗಂಟೆಯಲ್ಲಿ ತಾಯಿ ಪ್ರಾಣ ಬಿಟ್ಟಿದ್ದಾರೆ. 

ಅನಾರೋಗ್ಯಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ ಪೂನಾಂ ಅವರಿಗೆ ಸಾವಿಗೂ ಮೊದಲು ತಮ್ಮ ಮಗಳ ಮದುವೆಯನ್ನು ನೋಡಬೇಕು ಎಂಬ ಆಸೆ ಇತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಮಗಳ ಮದುವೆಯನ್ನು ಮಾಡಲು ನಿರ್ಧರಿಸಿದ್ದು, ಪೂನಾಂ ಅವರು ದಾಖಲಾಗಿದ್ದ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿಯೇ ಮಗಳ ಮದುವೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಬಿಹಾರದ (Bihar) ಗಯಾದ (Gaya) ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಮದುವೆ ನಡೆದಿದೆ.

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ! ಜಿಲ್ಲಾಧಿಕಾರಿ ಕಚೇರಿಗೆ ಯುವಕರ ಕುದುರೆ ಪರೇಡ್‌

ಮಗಳ ಮದುವೆ ನೋಡಿ ಎರಡು ಗಂಟೆಗಳ ನಂತರ ಅಮ್ಮ ಪೂನಂ ಕುಮಾರಿ ವರ್ಮಾ (Poonam Kumari Verma) ಅವರು ನಿಧನರಾಗಿದ್ದಾರೆ. ಇವರು ಲಲನ್ ಕುಮಾರ್ ಎಂಬುವವರ ಪತ್ನಿಯಾಗಿದ್ದು, ಗುರರು ಬ್ಲಾಕ್‌ನ (Guraru block) ಬಾಲಿ ಗ್ರಾಮದ ನಿವಾಸಿಯಾಗಿದ್ದರು. ಅವರು ಗಯಾದ ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಸಂದರ್ಭಕ್ಕೂ ಸಿದ್ಧರಾಗಿರುವಂತೆ ವೈದ್ಯರು ಕುಟುಂಬದವರಿಗೆ ಹೇಳಿದ್ದರು. ಇದರ ಜೊತೆಗೆ ಸಾಯುವ ಮೊದಲು ಮಗಳ ಮದುವೆ ನೋಡಿ ಸಾಯಬೇಕೆಂಬ ಆಸೆ ಪೂನಂ ಅವರಿಗಿತ್ತು. ಈ ವಿಚಾರವನ್ನು ಅವರು ತಮ್ಮ ಕುಟುಂಬದವರಿಗೆ ಹೇಳಿದ್ದರು. 

ಕುಟುಂಬವೂ ಕೂಡ ಅವರ ಕೊನೆ ಆಸೆ ಈಡೇರಿಸಲು ಬಯಸಿ ಹುಡುಗನೋರ್ವನನ್ನು ನೋಡಿ ಮಗಳು 26 ವರ್ಷದ ಚಾಂದಿನಿಗೆ ಐಸಿಯುನಲ್ಲೇ ಮದುವೆ ಮಾಡಿದ್ದಾರೆ. ಚಾಂದಿನಿ (Chandni) ಅವರ ವಿವಾಹವೂ ಗುರುವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಲೆಂಪುರ (Salempur) ಗ್ರಾಮದ ಸುಮಿತ್ ಗೌರವ್ ಎಂಬ 28 ವರ್ಷದ ಯುವಕನೊಂದಿಗೆ ನಡೆದಿದ್ದು, ಡಿಸೆಂಬರ್ 26 ರಂದು ಅವರ ನಿಶ್ಚಿತಾರ್ಥ (engagement ceremony) ನಡೆಯಬೇಕಿತ್ತು. ಆದರೆ ಇತ್ತ ಪೂನಂ ಸ್ಥಿತಿ ಬಿಗಡಾಯಿಸಿತ್ತು. ಈ ವಿಚಾರವನ್ನು ವರ ಸುಮಿತ್ ಗೌರವ್ ಅವರ ಕುಟುಂಬಕ್ಕೆ ತಿಳಿಸಿದಾಗ ಎರಡು ಕುಟುಂಬಗಳು ಪರಸ್ಪರ ಮಾತುಕತೆ ನಡೆಸಿ ಆಸ್ಪತ್ರೆಯಲ್ಲೇ ವಿವಾಹ ಮಾಡುವ ಏರ್ಪಾಟು ಮಾಡಿದರು. 

Vijayapura Crime: ಬಲವಂತದ ಮದುವೆ ಒಲ್ಲೆನೆಂದು ಗೋಳಗುಮ್ಮಟದಿಂದ ಹಾರಿ ಪ್ರಾಣಬಿಟ್ಟ ಯುವತಿ

ನಂತರ ಸುಮಿತ್ ಗೌರವ್ ಹಾಗೂ ಚಾಂದಿನಿ ಅವರ ವಿವಾಹವೂ ಆಸ್ಪತ್ರೆಯ ಐಸಿಯುನಲ್ಲಿಯೇ ನಡೆದಿದೆ. ಯಾವುದೇ ದೊಡ್ಡ ಅಲಂಕಾರ ಆಡಂಬರಗಳಿಲ್ಲದೇ ವಧು ಹಾಗೂ ವರ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಎರಡೂ ಕಡೆಯಿಂದ ನಾಲ್ಕು ನಾಲ್ಕು ಜನರಷ್ಟೇ ಭಾಗಿಯಾಗಿದ್ದರು. ಈ ಬಗ್ಗೆ ಮಾತನಾಡಿದ ವಧು ಚಾಂದಿನಿ, 'ನನ್ನ ಅಮ್ಮ ಮಗಧ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಎನ್ಎಂ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ನಂತರ ಅವರು ಸಂಪೂರ್ಣವಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಹೃದಯ ಕಾಯಿಲೆಯೂ ಇತ್ತು. ಆಕೆಯ ಕೊನೆ ಆಸೆ ನನ್ನ ಮದುವೆ ನೋಡುವುದಾಗಿತ್ತು. ಹೀಗಾಗಿ ಆಕೆಯ ಆಸೆ ಈಡೇರಿಸುವ ಸಲುವಾಗಿ ಆಕೆ ಇದ್ದ ಐಸಿಯುನಲ್ಲೇ ಮದುವೆಯಾದೆ ಎಂದು ಹೇಳಿದ್ದಾರೆ. ಮದುವೆ ನಡೆದು ಕೇವಲ 2 ಗಂಟೆಯಲ್ಲಿ ತಾಯಿ ಪೂನಂ ಸಾವನ್ನಪ್ಪಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ