ಜೂನ್ 25ರ ಕತ್ತಲ ರಾತ್ರಿ, ಭಾರತವನ್ನೇ ನಡುಗಿಸಿದ್ದ 21 ತಿಂಗಳ ತುರ್ತು ಪರಿಸ್ಥಿತಿ ಇತಿಹಾಸಕ್ಕೆ 51 ವರ್ಷ

Published : Jun 25, 2026, 09:47 AM IST
India Emergency

ಸಾರಾಂಶ

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಜೂನ್ 25 ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ. 51 ವರ್ಷಗಳ ಹಿಂದೆ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಭಾರತದ ರಾಜಕೀಯವನ್ನೇ ಬದಲಿಸಿತ್ತು. 21 ತಿಂಗಳ ಕತ್ತಲ ದಿನಗಳ ಅನ್‌ಟೋಲ್ಡ್ ಸ್ಟೋರಿ

ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ 1975 ರಿಂದ 1977 ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ (The Emergency). ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಸರ್ವಾಧಿಕಾರಿ ಆಡಳಿತ ನಡೆಸಿದ ಆ 21 ತಿಂಗಳುಗಳು ಇಂದಿಗೂ ಭಾರತೀಯರ ನೆನಪಿನಲ್ಲಿ ಮಾಸದ ಗಾಯವಾಗಿ ಉಳಿದಿವೆ. ರಾಜಕೀಯ ಹಿತಾಸಕ್ತಿಗಾಗಿ ಇಡೀ ದೇಶವನ್ನೇ ಕಾರಾಗೃಹವನ್ನಾಗಿ ಪರಿವರ್ತಿಸಿದ ಈ ಭೀಕರ ದಿನಗಳ ಹಿಂದಿನ ಪ್ರಮುಖ ಘಟನಾವಳಿಗಳು ಹಾಗೂ ಆಘಾತಕಾರಿ ಸತ್ಯಗಳ ಸಂಪೂರ್ಣ ವಿವರ ಇಲ್ಲಿದೆ.

ರಾಯ್‌ಬರೇಲಿ ಚುನಾವಣಾ ವಿವಾದ:

ಪ್ರಧಾನಿ ಇಂದಿರಾ ಗಾಂಧಿ ಅವರ ರಾಜಕೀಯ ಬಿಕ್ಕಟ್ಟು ಮತ್ತು ಪತನಕ್ಕೆ ಮುನ್ನುಡಿ ಬರೆದದ್ದು 1971 ರ ಲೋಕಸಭಾ ಚುನಾವಣೆ. ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಇಂದಿರಾ ಗಾಂಧಿ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯೇ ಮುಂದೆ ಇಡೀ ದೇಶದ ಪ್ರಜಾಪ್ರಭುತ್ವದ ಹಾದಿಯನ್ನೇ ಬದಲಿಸುವ ಬಿರುಗಾಳಿಗೆ ಕಾರಣವಾಯಿತು. ಈ ಚುನಾವಣೆ ಫಲಿತಾಂಶ ಹಾಗೂ ನಡೆದ ಬೆಳವಣಿಗೆ ದೇಶದ ಇತಿಹಾಸದಲ್ಲಿ ಯಾರು ಮರೆಯದ, ಕಪ್ಪು ಚುಕ್ಕೆಯಾಗಿ ಅಚ್ಚಳಿಯದೆ ಉಳಿದಿದೆ.

ಕೋರ್ಟ್ ಮೆಟ್ಟಿಲೇರಿದ ರಾಜ್ ನಾರಾಯಣ್

1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಸಮಾಜವಾದಿ ನಾಯಕ ರಾಜ್ ನಾರಾಯಣ್ ಇಂದಿರಾ ಗಾಂಧಿ ಗೆಲುವು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರು. ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಗೆಲ್ಲಲು ಸರ್ಕಾರಿ ಯಂತ್ರಾಂಗ ಹಾಗೂ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಅವರು ಚುನಾವಣಾ ಅರ್ಜಿ ಸಲ್ಲಿಸಿದರು. ಇದು ತೀವ್ರ ಕೋಲಾಹಲಕ್ಕೆ ಕಾರಣಾಗಿತ್ತು.

ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು:

ಈ ಸುದೀರ್ಘ ಕಾನೂನು ಹೋರಾಟದ ಫಲವಾಗಿ, 1975 ರ ಜೂನ್ 12 ರಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಸ್ಫೋಟಕ ಹಾಗೂ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದರು. ಈ ತೀರ್ಪು ಇಂದಿರಾ ಗಾಂಧಿ ಅವರ ಅಧಿಕಾರದ ಗದ್ದುಗೆಯನ್ನು ನಡುಗಿಸಿತು.

ಇಂದಿರಾ ಗಾಂಧಿ ಅನರ್ಹತೆ:

ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ಪ್ರಧಾನಿ ಇಂದಿರಾ ಗಾಂಧಿ ಅವರು ಚುನಾವಣಾ ಅಕ್ರಮ ಎಸಗಿರುವುದು ಸಾಬೀತಾಗಿದೆ ಎಂದು ಘೋಷಿಸಿ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು. ಅಷ್ಟೇ ಅಲ್ಲದೆ, ಮುಂದಿನ ಆರು ವರ್ಷಗಳ ಕಾಲ ಅವರು ಯಾವುದೇ ಚುನಾಯಿತ ಅಧಿಕಾರ ಅಥವಾ ಹುದ್ದೆಯನ್ನು ಹೊಂದುವಂತಿಲ್ಲ ಎಂದು ಘೋಷಿಸಿ ಇಂದಿರಾ ಗಾಂಧಿಯನ್ನು ಅನರ್ಹಗೊಳಿಸಲಾಯಿತು.

ಸುಪ್ರೀಂ ಕೋರ್ಟ್ ನೀಡಿದ ಜೂನ್ 24 ರ ತೀರ್ಪು:

ಹೈಕೋರ್ಟ್ ತೀರ್ಪಿನಿಂದ ಆಘಾತಕ್ಕೊಳಗಾದ ಇಂದಿರಾ ಗಾಂಧಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. 1975 ರ ಜೂನ್ 24 ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ಇಂದಿರಾ ಗಾಂಧಿ ಅವರಿಗೆ ಒಂದು ಕರಾರಿನ ಮೇರೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದರು. ಇಲ್ಲಿಂದ ಭಾರತದ ಪ್ರಜಾಪ್ರಭುತ್ವ ಅತ್ಯಂತ ಕಠೋರ ನಿರ್ಧಾರಗಳಿಗೆ ಸಾಕ್ಷಿಯಾಯಿತು. ಅಧಿಕಾರ ಉಳಿಸಿಕೊಳ್ಳುವ ಹತಾಶೆ, ದೇಶದ ಮುಂದೆ ಅಕ್ರಮವಾಗಿ ಗೆದ್ದ ಅಪಮಾನ ಸೇರಿದಂತೆ ಎಲ್ಲವೂ ಇಂದಿರಾ ಗಾಂಧಿ ತೆಗೆದುಕೊಂಡು ತಪ್ಪು ನಿರ್ಧಾರಗಳಿಗೆ ಪ್ರಮುಖ ಕಾರಣವಾಗಿತ್ತು.

ಪ್ರಧಾನಿ ಹುದ್ದೆ ಉಳಿಸಿಕೊಂಡರೂ ಹಕ್ಕುಗಳ ಕಡಿತ:

ಸುಪ್ರೀಂ ಕೋರ್ಟ್ ನೀಡಿದ ಈ ಕರಾರುಬದ್ಧ ತಡೆಯಾಜ್ಞೆಯ ಪ್ರಕಾರ, ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿ ಮುಂದುವರಿಯಬಹುದಿತ್ತು. ಆದರೆ, ಸಂಸತ್ ಸದಸ್ಯರಾಗಿ ಅವರಿಗೆ ಯಾವುದೇ ಮತ ಚಲಾಯಿಸುವ ಹಕ್ಕು ಇರಲಿಲ್ಲ ಮತ್ತು ಸಂಸದರಾಗಿ ಪಡೆಯುವ ಸಂಬಳ ಹಾಗೂ ಭತ್ಯೆಗಳನ್ನು ಪಡೆಯುವಂತಿರಲಿಲ್ಲ.

ತೀವ್ರಗೊಂಡ ರಾಜಕೀಯ ಒತ್ತಡ:

ಸುಪ್ರೀಂ ಕೋರ್ಟ್ ನೀಡಿದ ಈ ಪಾರ್ಶ್ವ ತಡೆಯಾಜ್ಞೆಯು ರಾಜಕೀಯ ಬಿಕ್ಕಟ್ಟನ್ನು ತಿಳಿಗೊಳಿಸುವ ಬದಲಿಗೆ ಮತ್ತಷ್ಟು ತೀವ್ರಗೊಳಿಸಿತು. ಇಂದಿರಾ ಗಾಂಧಿ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರು ದೇಶಾದ್ಯಂತ ಭಾರಿ ಪ್ರತಿಭಟನೆ ಹಾಗೂ ಒತ್ತಡವನ್ನು ಹೇರಲಾರಂಭಿಸಿದರು.

ಮಧ್ಯರಾತ್ರಿ ಘೋಷಣೆಯಾದ ದೇಶದ ಕರಾಳ ದಿನ:

ರಾಜಕೀಯ ಒತ್ತಡಕ್ಕೆ ಮಣಿಯದ ಇಂದಿರಾ ಗಾಂಧಿ, ಅಂತಿಮವಾಗಿ 1975 ರ ಜೂನ್ 25 ರ ಮಧ್ಯರಾತ್ರಿ ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಸಂವಿಧಾನದ 352 ನೇ ವಿಧಿಯಡಿ "ಆಂತರಿಕ ಅಶಾಂತಿ"ಯ ನೆಪವೊಡ್ಡಿ ಹೇರಲಾದ ಈ ತುರ್ತು ಪರಿಸ್ಥಿತಿಯು 1977 ರ ಮಾರ್ಚ್ 21 ರವರೆಗೆ ಅಂದರೆ ಭೀಕರ 21 ತಿಂಗಳುಗಳ ಕಾಲ ಜಾರಿಯಲ್ಲಿತ್ತು.

ಪ್ರಜಾಪ್ರಭುತ್ವದ ಸುದೀರ್ಘ ಅಮಾನತು:

ಸ್ವತಂತ್ರ ಭಾರತದ ಇತಿಹಾಸದಲ್ಲೇ ನಾಗರಿಕರ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳನ್ನು ಇಷ್ಟೊಂದು ಸುದೀರ್ಘ ಅವಧಿಗೆ ಅಮಾನತುಗೊಳಿಸಿದ ಮತ್ತೊಂದು ಉದಾಹರಣೆ ಇಲ್ಲ. ಇಡೀ ದೇಶವೇ ಇಂದಿರಾ ಗಾಂಧಿ ಅವರ ಏಕಪಕ್ಷೀಯ ನಿರ್ಧಾರಕ್ಕೆ ಮತ್ತು ಸರ್ವಾಧಿಕಾರಿ ಧೋರಣೆಗೆ ಬೆಲೆ ತೆರಬೇಕಾಯಿತು.

ಮೂಲಭೂತ ಹಕ್ಕುಗಳ ದಮನ:

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ ಭಾಗ III ರಲ್ಲಿ ನಾಗರಿಕರಿಗೆ ಗ್ಯಾರಂಟಿ ನೀಡಲಾಗಿದ್ದ ಹಲವಾರು ಪ್ರಮುಖ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. ಇದರಿಂದಾಗಿ ಸರ್ಕಾರದ ದೌರ್ಜನ್ಯದ ವಿರುದ್ಧ ನಾಗರಿಕರು ನ್ಯಾಯಾಲಯದ ರಕ್ಷಣೆ ಪಡೆಯುವ ಹಾದಿಯೂ ಬಂದ್ ಆಯಿತು.

ಲಕ್ಷಕ್ಕೂ ಅಧಿಕ ವಿಪಕ್ಷ ನಾಯಕರ ಬಂಧನ:

ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕ್ಕಲು ಇಂದಿರಾ ಸರ್ಕಾರ ದೇಶಾದ್ಯಂತ ದೊಡ್ಡ ಬೇಟೆಯನ್ನೇ ಆರಂಭಿಸಿತು. ಇಡೀ ದೇಶದಲ್ಲಿ 1.1 ಲಕ್ಷಕ್ಕೂ ಅಧಿಕ ರಾಜಕೀಯ ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಕಾರ್ಮಿಕ ಸಂಘಟನೆಯ ನಾಯಕರು ಮತ್ತು ವಿದ್ಯಾರ್ಥಿ ಮುಖಂಡರನ್ನು ಜೈಲಿಗಟ್ಟಲಾಯಿತು.

ಮಿಸಾ' ಕಾಯ್ದೆಯ ಭೀಕರ ದುರುಪಯೋಗ:

ಯಾವುದೇ ವಿಚಾರಣೆ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸಲು ಸರ್ಕಾರ 'ಮಿಸಾ' (MISA - Maintenance of Internal Security Act) ಎಂಬ ಅತ್ಯಂತ ಕ್ರೂರ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿಕೊಂಡಿತು. ಈ ಕರಾಳ ಕಾಯ್ದೆಯಡಿ ಸುಮಾರು 35,000 ಕ್ಕೂ ಹೆಚ್ಚು ಜನರನ್ನು ಯಾವುದೇ ತನಿಖೆ ಅಥವಾ ನ್ಯಾಯಾಲಯದ ವಿಚಾರಣೆ ಇಲ್ಲದೆ ಸುಮ್ಮನೆ ಬಂಧಿಸಿ ಇಡಲಾಗಿತ್ತು.

ಬಂಧಿಗಳಿಗೆ ಜೈಲಿನಲ್ಲಿ ಅಮಾನವೀಯ ಹಿಂಸೆ:

ಈ ಕಾನೂನುಬಾಹಿರ ಬಂಧನಗಳಿಗೆ ಒಳಗಾದ ರಾಜಕೀಯ ಕೈದಿಗಳನ್ನು ಜೈಲುಗಳಲ್ಲಿ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಜೈಲಿನ ಕತ್ತಲು ಕೋಣೆಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರಿಗೆ ಅಮಾನವೀಯ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು ನೀಡಲಾಯಿತು.

ಹ್ಯಾಬಿಯಸ್ ಕಾರ್ಪಸ್ ಹಕ್ಕಿಗೂ ಕುತ್ತು:

ನಾಗರಿಕರ ಅಕ್ರಮ ಬಂಧನವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಅತ್ಯುನ್ನತ ಸಾಂವಿಧಾನಿಕ ಹಕ್ಕಾದ 'ಹ್ಯಾಬಿಯಸ್ ಕಾರ್ಪಸ್' (ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು) ಹಕ್ಕನ್ನು ಸಹ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಕಿತ್ತುಕೊಳ್ಳಲಾಯಿತು. ಇದರಿಂದಾಗಿ ಬಂಧಿತರು ತಮಗೆ ಜೈಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಕೋರ್ಟ್ ಮೊರೆ ಹೋಗುವಂತೆಯೇ ಇರಲಿಲ್ಲ.

ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ತೀರ್ಪು:

ಈ ನಡುವೆ ನಡೆದ 'ಎಡಿಎಂ ಜಬಲ್ಪುರ ವರ್ಸಸ್ ಶಿವಕಾಂತ್ ಶುಕ್ಲಾ (1976)' ಪ್ರಕರಣದ ಐತಿಹಾಸಿಕ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೂಡ ಸರ್ಕಾರದ ಪರವಾಗಿಯೇ ತೀರ್ಪು ನೀಡಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿರುವುದರಿಂದ, ನಾಗರಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕೋರ್ಟ್‌ಗೆ ಬರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೈತೊಳೆದುಕೊಂಡಿತು.

ನ್ಯಾಯಾಂಗ ನಿಂದನೆಗೆ ತಿದ್ದುಪಡಿ ತಂದ ಸರ್ಕಾರ:

ಇಷ್ಟಕ್ಕೇ ನಿಲ್ಲದ ಇಂದಿರಾ ಗಾಂಧಿ ಸರ್ಕಾರ, ತನ್ನ ಸರ್ವಾಧಿಕಾರಿ ನಿರ್ಧಾರಗಳಿಗೆ ಕೋರ್ಟ್‌ಗಳು ಅಡ್ಡಿಬರಬಾರದು ಎಂದು ಸಂವಿಧಾನಕ್ಕೆ 38 ನೇ ತಿದ್ದುಪಡಿಯನ್ನು (1975) ತಂದಿತು. ಇದರ ಪ್ರಕಾರ ರಾಷ್ಟ್ರಪತಿಗಳು ಘೋಷಿಸುವ ತುರ್ತು ಪರಿಸ್ಥಿತಿ ಮತ್ತು ಸರ್ಕಾರದ ಆದೇಶಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ.

ಪ್ರಧಾನಿ ಹುದ್ದೆಗೆ ವಿಶೇಷ ಸಾಂವಿಧಾನಿಕ ಕವಚ:

ಅದೇ ವರ್ಷ ತರಲಾದ 39 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಲೋಕಸಭಾ ಸ್ಪೀಕರ್ ಅವರ ಚುನಾವಣೆಗಳನ್ನು ನ್ಯಾಯಾಂಗದ ಪರಿಶೀಲನೆಯ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಯಿತು. ಈ ಮೂಲಕ ಇಂದಿರಾ ಗಾಂಧಿ ತಮ್ಮ ವೈಯಕ್ತಿಕ ಅಧಿಕಾರವನ್ನು ಸುಪ್ರೀಂ ಕೋರ್ಟ್‌ಗಿಂತಲೂ ಮಿಗಿಲಾಗಿ ಬೆಳೆಸಿಕೊಂಡರು.

ಇಡೀ ಸಾಂವಿಧಾನಿಕ ವ್ಯವಸ್ಥೆಯನ್ನೇ ಬದಲಿಸಿದ 42 ನೇ ತಿದ್ದುಪಡಿ:

1976 ರಲ್ಲಿ ತರಲಾದ ಅತ್ಯಂತ ವಿವಾದಾತ್ಮಕ 42 ನೇ ಸಾಂವಿಧಾನಿಕ ತಿದ್ದುಪಡಿಯು ಸಂಸತ್ತಿನ ಅಧಿಕಾರವನ್ನು ಮಿತಿಯಿಲ್ಲದಂತೆ ವಿಸ್ತರಿಸಿತು ಮತ್ತು ನ್ಯಾಯಾಲಯಗಳ ಅಧಿಕಾರವನ್ನು ಸಂಪೂರ್ಣವಾಗಿ ಕಟೌಟ್ ಮಾಡಿತು. ಇಡೀ ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೇಂದ್ರ ಸರ್ಕಾರದ ಕೈಗೆ ಪರಮಾಧಿಕಾರ ನೀಡಲಾಯಿತು.

ಮಾಧ್ಯಮಗಳ ಧ್ವನಿ ಅಡಗಿಸಿದ ಸೆನ್ಸಾರ್‌ಶಿಪ್:

ತುರ್ತು ಪರಿಸ್ಥಿತಿ ಘೋಷಣೆಯಾದ ಮರುಕ್ಷಣವೇ ಇಡೀ ದೇಶದ ಮಾಧ್ಯಮಗಳ ಮೇಲೆ ಕಠಿಣ ಸೆನ್ಸಾರ್‌ಶಿಪ್ ಹೇರಲಾಯಿತು. ಪತ್ರಿಕೆಗಳು ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಅದನ್ನು ಸರ್ಕಾರದ ಅಧಿಕಾರಿಗಳ ಪೂರ್ವಾಪರ ಪರಿಶೀಲನೆಗೆ (Pre-publication scrutiny) ಕಳುಹಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು.

ಕತ್ತಲಲ್ಲಿ ಮುಳುಗಿದ ಪತ್ರಿಕಾ ಕಚೇರಿಗಳು:

ತುರ್ತು ಪರಿಸ್ಥಿತಿಯ ಕರಾಳ ನಿರ್ಧಾರವನ್ನು ದೇಶದ ಜನರಿಗೆ ತಲುಪದಂತೆ ತಡೆಯಲು, 1975 ರ ಜೂನ್ 25 ರ ಅದೇ ಕರಾಳ ರಾತ್ರಿ ದೆಹಲಿಯ ಬಹುತೇಕ ಪ್ರಮುಖ ಪತ್ರಿಕಾ ಕಚೇರಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಇದರಿಂದಾಗಿ ಮಾರನೇ ದಿನ ಬೆಳಗ್ಗೆ ಪತ್ರಿಕೆಗಳು ಸಕಾಲಕ್ಕೆ ಮುದ್ರಣಗೊಂಡು ಮಾರುಕಟ್ಟೆಗೆ ಬರದಂತೆ ತಡೆಯಲಾಯಿತು.

ಇಂದಿರಾ ಸರ್ಕಾರದ ಹಿಡಿತದಲ್ಲಿದ್ದ ಪ್ರಸಾರ ಮಾಧ್ಯಮಗಳು:

ಪತ್ರಿಕೆಗಳ ಸ್ವತಂತ್ರ ಧ್ವನಿಯಾಗಿದ್ದ 'ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ'ವನ್ನು ಸರ್ಕಾರ ಸಂಪೂರ್ಣವಾಗಿ ವಿಸರ್ಜಿಸಿತು. ದೇಶದ ಅಧಿಕೃತ ಮಾಹಿತಿ ಪ್ರಸಾರ ಮಾಧ್ಯಮಗಳಾದ ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಮತ್ತು ದೂರದರ್ಶನಗಳನ್ನು ಸರ್ಕಾರದ ಪರ ಪ್ರಚಾರದ ಅಸ್ತ್ರಗಳನ್ನಾಗಿ ಪರಿವರ್ತಿಸಲಾಯಿತು.

ಜೈಲು ಪಾಲಾದ ದೇಶದ ದಿಗ್ಗಜ ನಾಯಕರು:

ಈ ಕರಾಳ ಅವಧಿಯಲ್ಲಿ ದೇಶದ ಜನಪ್ರಿಯ ನಾಯಕರಾದ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ನೂರಾರು ಸಂಸದರು ಮತ್ತು ಜೈಪುರದ ಮಹಾರಾಣಿ ಗಾಯತ್ರಿ ದೇವಿ ಅವರಂತಹ ರಾಜಮನೆತನದ ನಾಯಕರನ್ನು ಕೂಡ ಯಾವುದೇ ಮುಲಾಜಿಲ್ಲದೆ ಜೈಲಿಗೆ ತಳ್ಳಲಾಯಿತು.

ಆರ್‌ಎಸ್‌ಎಸ್ ಸಂಘಟನೆಗೆ ನಿಷೇಧ:

ಸದ್ಯ ಆರ್‌ಎಸ್ಎಸ್ ಸಂಘಟನೆ ಕುರಿತು ದೇಶಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿದೆ. ಮತ್ತೊಂದೆಡೆ ಸಂಘ 100 ವರ್ಷಾಚರಣೆಯನ್ನು ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಿದೆ. ಆದರೆ 51 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯನ್ನು ದೇಶಾದ್ಯಂತ ತೀವ್ರವಾಗಿ ವಿರೋಧಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಇಂದಿರಾ ಗಾಂಧಿ ಸರ್ಕಾರ ಅಧಿಕೃತವಾಗಿ ನಿಷೇಧಿಸಿತು. ಸಂಘಟನೆಯ ಸಾವಿರಾರು ಪದಾಧಿಕಾರಿಗಳು ಮತ್ತು ಸ್ವಯಂಸೇವಕರನ್ನು ದೇಶದ ವಿವಿಧ ಮೂಲೆಗಳಲ್ಲಿ ಜೈಲಿಗೆ ಕಳುಹಿಸಲಾಯಿತು.

ಕೊನೆಗೂ ಮುಗಿದ ಕರಾಳ ಪರ್ವ - ಜನತಾ ಸರ್ಕಾರದ ಉದಯ:

ಕೊನೆಗೂ 21 ತಿಂಗಳುಗಳ ಸುದೀರ್ಘ ದೌರ್ಜನ್ಯದ ನಂತರ, ಸಾರ್ವತ್ರಿಕ ಚುನಾವಣೆಗಳ ಘೋಷಣೆಯೊಂದಿಗೆ 1977 ರ ಮಾರ್ಚ್ 21 ರಂದು ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು. ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜಾಗೃತ ಮತದಾರರು ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಸರ್ಕಾರವನ್ನು ಭೀಕರವಾಗಿ ಸೋಲಿಸಿ, ದೇಶದಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಮೊದಲ ಕಾಂಗ್ರೆಸ್ ರಹಿತ 'ಜನತಾ ಪಕ್ಷ ಸರ್ಕಾರವನ್ನು ಅಧಿಕಾರಕ್ಕೆ ತಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

3 ಬಾರಿ ಭಾವಿ ಪತಿಯ ಹತ್ಯೆಗೆ ಯತ್ನಿಸಿ ಕೊನೆಗೆ ಯಶ ಕಂಡ ಸಿಯಾ! ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ ಪ್ರಿಯಕರ
India Latest News Live: 3 ಬಾರಿ ಭಾವಿ ಪತಿಯ ಹತ್ಯೆಗೆ ಯತ್ನಿಸಿ ಕೊನೆಗೆ ಯಶ ಕಂಡ ಸಿಯಾ! ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ ಪ್ರಿಯಕರ