ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಒಡಿಶಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದು ಸಾವು ಸಂಭವಿಸಿದೆ. ಮುಂಜಾಗ್ರತಾ ಕ್ರಮಗಳಿಂದಾಗಿ ಹೆಚ್ಚಿನ ಹಾನಿಯಾಗಿಲ್ಲ ಮತ್ತು ರೈಲು ಹಾಗೂ ವಿಮಾನ ಸಂಚಾರ ಪುನರಾರಂಭವಾಗಿದೆ.
ಭುವನೇಶ್ವರ/ಕೋಲ್ಕತಾ: ಭಾರೀ ಆತಂಕ ಹುಟ್ಟುಹಾಕಿದ್ದ ‘ಡಾನಾ ಚಂಡಮಾರುತ’ ಒಡಿಶಾದ ಮೇಲೆ ಅಪ್ಪಳಿಸಿದೆಯಾದರೂ, ಹೆಚ್ಚಿನ ಅನಾಹುತ ಮಾಡದೇ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರಮುಖವಾಗಿ ‘ಶೂನ್ಯ ಸಾವು’ ಸಂಭವಿಸಬೇಕು ಎಂಬ ಗುರಿ ಬಹುತೇಕ ಈಡೇರಿದ್ದು, ಒಡಿಶಾದಲ್ಲಿ ಯಾರೂ ಸಾವನ್ನಪ್ಪಿಲ್ಲ ಹಾಗೂ ಪ.ಬಂಗಾಳದಲ್ಲಿ ಒಬ್ಬರು ಮಾತ್ರ ಬಲಿಯಾಗಿದ್ದಾರೆ.
ಗುರುವಾರ ತಡರಾತ್ರಿ 12.05ರ ವೇಳೆಗೆ ಒಡಿಶಾದ ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನವನ ಹಾಗೂ ಧಮ್ರಾ ಬಂದರಿನ ನಡುವಿನ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿ ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಪೂರ್ಣಗೊಂಡಿದೆ.
ಚಂಡಮಾರುತದ ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 100 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು ಭಾರೀ ಮಳೆ ಸುರಿಸಿದೆ. ಎರಡೂ ರಾಜ್ಯಗಳಲ್ಲಿ ಮರ, ವಿದ್ಯುತ್, ಟೆಲಿಫೋನ್ ಕಂಬಗಳು ತಲೆಕೆಳಗಾಗಿದ್ದು ಬಿಟ್ಟರೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ.
ಶೂನ್ಯ ಸಾವು ಗುರಿ ಬಹುತೇಕ ಯಶಸ್ವಿ:
ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಕೈಗೊಂಡಿದ್ದ ಮುಂಜಾಗ್ರತಾ ಕ್ರಮಗಳ ಫಲವಾಗಿ ಈ ಬಾರಿ ರಾಜ್ಯದಲ್ಲಿ ಒಂದೇ ಒಂದು ಸಾವು ಕೂಡಾ ಸಂಭವಿಸಿಲ್ಲ. ಈ ಮೂಲಕ ಶೂನ್ಯ ಸಾವು ಗುರಿಯನ್ನು ಸರ್ಕಾರ ಯಶಸ್ವಿಯಾಗಿ ಮುಟ್ಟಿದೆ. ಆದರೆ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ವೃದ್ಧರೊಬ್ಬರು ಹೃದಯಾಘಾತದಿಂದ ಮತ್ತು ಬಾಲಾಸೋರ್‌ನಲ್ಲಿ ತೆಂಗಿನ ಮರ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ನೆರೆಯ ಪಶ್ಚಿಮ ಬಂಗಾಳ ಕೂಡಾ ಅನಾಹುತದಿಂದ ಪಾರಾಗಿದೆ. ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು ಬಿಟ್ಟರೆ ಯಾವುದೇ ಅನಾಹುತ ಸಂಭವಿಸಿಲ್ಲ.
ರೈಲು, ವಿಮಾನ ಸಂಚಾರ ಪುನಾರಂಭ:
ಚಂಡಮಾರುತ ಯಾವುದೇ ಅನಾಹುತ ಮಾಡದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದ್ದ 400ಕ್ಕೂ ಹೆಚ್ಚು ರೈಲು ಮತ್ತು ನೂರಾರು ವಿಮಾನಗಳ ಸಂಚಾರವನ್ನು ಶುಕ್ರವಾರ ಬೆಳಗ್ಗೆಯಿಂದಲೇ ಪುನಾರಂಭಿಸಲಾಯಿತು. ಒಡಿಶಾದಲ್ಲಿ ಸಂಜೆ ವೇಳೆಗೆ ಹಲವು ಭಾಗಗಳಲ್ಲಿ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ಪುನಸ್ಥಾಪಿಸಿ, ಪೂರೈಕೆ ಪುನಾರಂಭಿಸಲಾಯಿತು. ಸಂಜೆ ವೇಳೆಗೆ ಚಂಡಮಾರುತವು ದುರ್ಬಲಗೊಂಡು ಮತ್ತೆ ವಾಯುಭಾರ ಕುಸಿತವಾಗಿ ಪರಿವರ್ತನೆಗೊಂಡಿದೆ ಒಡಿಶಾದ ವಾಯುವ್ಯ ಭಾಗದತ್ತ ಸಾಗಿದೆ.
ಒಡಿಶಾದಲ್ಲಿ ರಕ್ಷಣಾ ಕಾರ್ಯ ಯಶಸ್ವಿ:
ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಚಂಡಮಾರುತ ರಕ್ಷಣಾ ವ್ಯವಸ್ಥೆಯನ್ನು ಈ ಬಾರಿಯೂ ಒಡಿಶಾ ಯಶಸ್ವಿಯಾಗಿ ಜಾರಿ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ 10 ಲಕ್ಷ ಜನರನ್ನು ತೆರವುಗೊಳಿಸಿದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. 14 ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಒಟ್ಟು 385 ತಂಡಗಳನ್ನು ನಿಯೋಜಿಸಲಾಗಿತ್ತು. ರಾಜ್ಯದ ಭದ್ರಕ್ ಜಿಲ್ಲೆಯ ಚಂದಾಬಾಲಿಯಲ್ಲಿ ಗರಿಷ್ಠ 15.86 ಸೆ.ಮೀ ಮಳೆಯಾಗಿದೆ. ಉಳಿದಂತೆ ಕೇಂದ್ರಪಾರ, ಬಾಲಾಸೋರ್, ಜಗತ್‌ಸಿಂಗಾಪುರ್, ಪುರಿ, ಖುರ್ದಾ, ಅಂಗುಲ್ ನಯಾಗಢ ಜಿಲ್ಲೆಗಳಲ್ಲೂ ಭಾರೀ ಬಿರುಗಾಳಿ ಸಹಿತ ಮಳೆಯಾಗಿದೆ.
2025-26ಕ್ಕೆ ಮೂರನೇ ಮಹಾಯುದ್ಧ ಶಿವನಾಣೆ ಸತ್ಯ; ಭಾರತ ಇಬ್ಭಾಗವಾಗಲಿದೆ: ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!
ಬಂಗಾಳದಲ್ಲೂ ರಕ್ಷಣೆ
ಪಶ್ಚಿಮ ಬಂಗಾಳದಲ್ಲೂ ಚಂಡಮಾರುತ, ಭಾರೀ ಗಾಳಿ, ಮಳೆಗೆ ಸೀಮಿತವಾಯಿತು. ಮುಂಜಾಗ್ರತಾ ಕ್ರಮವಾಗಿ 2.5 ಲಕ್ಷಕ್ಕೂ ಹೆಚ್ಚು ಜನರನ್ನು ಕರಾವಳಿ ಮತ್ತು ತಗ್ಗು ಪ್ರದೇಶಗಳಿಂದ ರಕ್ಷಿಸಲಾಗಿತ್ತು. ಪಶ್ಚಿಮ ಮಿಡ್ನಾಪುರ ಮತ್ತು ಕೊಲ್ಕತಾದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿ ಕಾಣಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ರಾತ್ರಿ ರಾಜ್ಯ ಸಚಿವಾಲಯದಲ್ಲೇ ಕುಳಿತು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದರು. ರಾಜಧಾನಿ ಕೋಲ್ಕತಾದಲ್ಲಿ 10 ಸೆ.ಮೀ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಗುರುವಾರ ರಾತ್ರಿಯಂದಲೇ ಜಲಾವೃತವಾಗಿದ್ದವು. ಆದರೆ ದಕ್ಷಿಣ 24 ಪರಂಗಣ ಜಿಲ್ಲೆಯ ಪಥಾರ್‌ಪ್ರತಿಮಾ ನಗರದಲ್ಲಿ ಮನೆಯಲ್ಲಿ ಕೇಬಲ್ ಮೇಲೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಚಂಡಮಾರುತ ಅವಧಿಯಲ್ಲಿ1600 ಮಕ್ಕಳ ಜನನ!
ಒಡಿಶಾದ ಚಂಡಮಾರುತದ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 4431 ಗರ್ಭಿಣಿಯರನ್ನು ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಕರೆದೊಯ್ದು ದಾಖಲಿಸಲಾಗಿತ್ತು. ಈ ಪೈಕಿ 1600 ಮಹಿಳೆಯರು ಗುರುವಾರದಿಂದೀಚೆಗೆ 1600 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎಲ್ಲಾ ತಾಯಂದಿರು ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಲಾಡೆನ್ ಹತ್ಯೆಯಾದ ಪಾಕ್‌ನ ನಗರದಲ್ಲಿ3 ಉಗ್ರ ಸಂಘಟನೆಗಳ ತರಬೇತಿ ಕ್ಯಾಂಪ್