ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನೆಗಳು ಹಿಂತೆಗೆತ ಆರಂಭಿಸಿವೆ. ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದ್ದು, ಅಕ್ಟೋಬರ್ ಅಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಾಲ್ಕು ವರ್ಷಗಳ ಸಂಘರ್ಷಕ್ಕೆ ಇದು ತೆರೆ ಎಳೆಯುವ ನಿರೀಕ್ಷೆಯಿದೆ.
ಲೇಹ್: ಭಾರತ ಹಾಗೂ ಚೀನಾ ನಡುವಿನ ಪೂರ್ವ ಲಡಾಖ್ ಪ್ರದೇಶದ ಗಡಿಯಲ್ಲಿ ಎರಡೂ ದೇಶಗಳು ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಭೇಟಿ ಹಾಗೂ ಅದಕ್ಕೂ ಮುನ್ನ ಉಭಯ ದೇಶಗಳ ನಡುವೆ ಏರ್ಪಟ್ಟ ಒಪ್ಪಂದದಂತೆ ಸೇನೆ ಹಿಂಪಡೆತ ಪ್ರಕ್ರಿಯೆ ಆರಂಭವಾಗಿದೆ. ಈಗ ಈಗ ಅರ್ಧ ಹಿಂತೆಗೆತ ಮುಗಿದಿದ್ದು ಅ.28-29ರವೇಳೆಗೆ ಹಿಂತೆಗೆತ ಸಂಪೂರ್ಣ ಹಿಂತೆಗೆತ ಆಗಲಿದೆ.
ಇದು ನಾಲ್ಕು ವರ್ಷಗಳ ಹಿಂದೆ ಗಲ್ವಾನ್‌ನಲ್ಲಿ ಏರ್ಪಟ್ಟ ಭೀಕರ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವೆ ಉಂಟಾಗಿದ್ದ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿರೀಕ್ಷೆಯಿದೆ. ಪೂರ್ಣ ಹಿಂತೆಗೆತದ ಬಳಕ ಸಂಘರ್ಷ ನಡೆದಿದ್ದ 2020ಕ್ಕಿಂತ ಹಿಂದಿನ ಪರಿಸ್ಥಿತಿ ಗಡಿಯಲ್ಲಿ ನೆಲೆಸಲಿದೆ.
ದೆಪ್ಸಾಂಗ್ ಮತ್ತು ದೆಮ್ಚೋಕ್ ಪ್ರದೇಶಗಳಲ್ಲಿ ಎರಡೂ ದೇಶಗಳು ನಿರ್ಮಿಸಿಕೊಂಡಿದ್ದ ಕೆಲ ತಾತ್ಕಾಲಿಕ ಟೆಂಟ್‌ಗಳನ್ನು ಶುಕ್ರವಾರ ತೆರವುಗೊಳಿಸಲಾಗಿದೆ. ಬಹುತೇಕ ಶೇ.60ರಷ್ಟು ಟೆಂಟ್‌ಗಳ ತೆರವು ಪೂರ್ಣಗೊಂಡಿದೆ. ಟೆಂಟ್‌ಗಳ ತೆರವಿನ ಬಳಿಕ ಸೇನೆ ಹಿಂಪಡೆತ ಆರಂಭವಾಗಲಿದೆ. ಈ ಪ್ರಕ್ರಿಯೆ ಕೆಲ ದಿನಗಳ ಕಾಲ ನಡೆಯಲಿದ್ದು, ಅಕ್ಟೋಬರ್ ಅಂತ್ಯಕ್ಕೆ (ಅ.28-29ರ ವೇಳೆಗೆ) ಎರಡೂ ದೇಶಗಳು ಪೂರ್ಣ ಪ್ರಮಾಣದಲ್ಲಿ ಸೇನೆ ಹಿಂಪಡೆಯಲಿವೆ. ಬಳಿಕ ಈ ಪ್ರದೇಶಗಳಲ್ಲಿ ಇತ್ತೀಚಿನ ಒಪ್ಪಂದದ ಅನುಸಾರ ಜಂಟಿ ಪಹರೆ ಆರಂಭಿಸಲಿವೆ ಎಂದು ಮೂಲಗಳು ಹೇಳಿವೆ.
ರಷ್ಯಾದಲ್ಲಿ ಪ್ರಧಾನಿ ಮೋದಿ ಮತ್ತೆ ಶಾಂತಿ ಮಂತ್ರ: ಉಕ್ರೇನ್ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತದಿಂದ ಎಲ್ಲ ನೆರವು
ಎರಡು ವರ್ಷಗಳ ಹಿಂದೆ ಭಾರತ ಮತ್ತು ಚೀನಾ ಮಿಲಿಟರಿಗಳು ನಾಲ್ಕು ವಿಭಿನ್ನ ಪ್ರದೇಶಗಳಿಂದ ಹಿಂದಕ್ಕೆ ಸರಿದು ಬಫರ್ ಜೋನ್‌ಗಳನ್ನು ಗುರುತಿಸಿಕೊಂಡಿದ್ದವು. ಆ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದವು. ಈಗ ಅವುಗಳನ್ನು ತೆರವುಗೊಳಿಸಿ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಸ್ಥಳೀಯ ಕಮಾಂಡರ್‌ಗಳು ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಷ್ಯಾದಲ್ಲಿ ಮೋದಿ-ಕ್ಸಿ ಭೇಟಿಯ ಮರುದಿನವೇ ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಲ್ಲಿ ಭಾರತ-ಚೀನಾ ಸೇನೆಯ ಅಧಿಕಾರಿಗಳ ಸಭೆ ನಡೆದಿತ್ತು. ಅದರ ಬೆನ್ನಲ್ಲೇ ಸೇನೆ ಹಿಂತೆಗೆತ ಪ್ರಕ್ರಿಯೆ ಆರಂಭವಾಗಿದೆ. ಟೆಂಟ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿದ ಬಳಿಕ ಎರಡೂ ದೇಶಗಳು ಭೂ ಮತ್ತು ವಾಯುಮಾರ್ಗದಲ್ಲಿ ಜಂಟಿ ತಪಾಸಣೆ ನಡೆಸಲಿವೆ. ಬಳಿಕ ಪಹರೆ ಆರಂಭವಾಗಲಿದೆ.
ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿ: ಲಡಾಖ್ ವಿಚಾರದಲ್ಲಿ ಮಹತ್ವದ ಮಾತುಕತೆ