
ಹೈದರಾಬಾದ್(ಮೇ.12): ದೇಶದಲ್ಲಿ ಎಲ್ಲೆಡೆಗಳಿಂದ ಕೇಳಿಬರುತ್ತಿರುವ ಆರೋಪ, ಕೂಗು, ದೂರುಗಳಲ್ಲಿ ಲಸಿಕೆ ಕೊರತೆ ಮೊದಲ ಸ್ಥಾನದಲ್ಲಿದೆ. ಭಾರತಕ್ಕೆ ತೀವ್ರವಾಗಿ ಕಾಡಿದ ಆಕ್ಸಿಜನ್ ಸಮಸ್ಯೆ ಸಂಪೂರ್ಣ ನಿವಾರಣೆಯಾಗದಿದ್ದರೂ, ಒಂದು ಹಂತದ ಪರಿಹಾರ ಸಿಕ್ಕಿದೆ. ಇದೀಗ ಲಸಿಕೆ ಕೊರತೆ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಇದರ ನಡುವೆ ಲಸಿಕೆ ಪೂರೈಕೆಯಲ್ಲಿ ತಾರತಮ್ಯ, ಲಸಿಕೆ ಪೂರೈಕೆಯಾಗಿಲ್ಲ ಎಂಬ ಆರೋಪಗಳನ್ನು ಕೆಲ ರಾಜ್ಯಗಳು ಮಾಡುತ್ತಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಕೋವಾಕ್ಸಿನ್ ಲಸಿಕಾ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಅಂಕಿ ಅಂಶದ ಜೊತೆ ತನ್ನ ನೋವನ್ನು ತೋಡಿಕೊಂಡಿದೆ.
ಸೆಕೆಂಡ್ ಡೋಸ್‌ಗೂ ಇಲ್ಲ ಲಸಿಕೆ : ಎಲ್ಲಾ ಕಡೆ ನೋ ಸ್ಟಾಕ್ ಬೋರ್ಡ್
ನಮ್ಮ ಬದ್ಧತೆ, ಉದ್ದೇಶವನ್ನೇ ಮರೆತು ಕೆಲ ರಾಜ್ಯಗಳು ನಮ್ಮ ಮೇಲೆ ಆರೋಪ ಮಾಡುತ್ತಿರುವುದು ನೋವು ತಂದಿದೆ ಎಂದು ಭಾರತ್ ಬಯೋಟೆಕ್ ಸಂಹ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
ಪ್ರಮಾಣ ಅಲ್ಪ ಕಡಿಮೆಯಾದರೂ, ಮೇ.10 ರಂದು ಕೋವಾಕ್ಸಿನ್ ಲಸಿಕೆಯನ್ನು 18 ರಾಜ್ಯಗಳಿಗೆ ಪೂರೈಸಲಾಗಿದೆ. ಆದರೆ ಕೆಲ ರಾಜ್ಯಗಳು ನಮ್ಮ ಬದ್ಧತೆ, ಉದ್ದೇಶವನ್ನೇ ಮರೆತು ಲಸಿಕೆ ಪೂರೈಕೆ ಕುರಿತು ಆರೋಪ ಮಾಡುತ್ತಿದೆ. ಕಂಪನಿಯ 50 ಸಿಬ್ಬಂದಿಗಳು ಕೊರೋನಾ ಪಾಸಿಟೀವ್ ಕಾರಣ ಗೈರಾಗಿದ್ದಾರೆ. ಕೊರೋನಾ, ಲಾಕ್‌ಡೌನ್ ನಡುವೆಯೂ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ ಎಂದು ಸುಚಿತ್ರ ಎಲ್ಲಾ ಟ್ವೀಟ್ ಮಾಡಿದ್ದಾರೆ.
ಲಸಿಕೆ ಕೊರತೆಗೆ ಪರಿಹಾರ; ಭಾರತ್ ಬಯೋಟೆಕ್-ಒಡಿಶಾ ಸರ್ಕಾರದಿಂದ ಲಸಿಕೆ ಉತ್ಪಾದಕ ಘಟಕ!
ಲಸಿಕೆ ಪೂರೈಸಿದ 18 ರಾಜ್ಯಗಳ ಪಟ್ಟಿಯನ್ನೇ ಸುಚಿತ್ರಾ ಎಲ್ಲಾ ನೀಡಿದ್ದಾರೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ಚತ್ತೀಸಘಡ, ದೆಹಲಿ, ಗುಜರಾತ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ , ಒಡಿಶಾ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಲಸಿಕೆ ಪೂರೈಸಲಾಗಿದೆ ಎಂದು ಸುಚಿತ್ರಾ ಎಲ್ಲಾ ಹೇಳಿದ್ದಾರೆ.
ಸುಚಿತ್ರ ಎಲ್ಲಾ ಪೋಸ್ಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಭಾರತ್ ಬಯೋಟೆಕ್‌ಗೆ ನಮ್ಮ ಬೆಂಬಲವಿದೆ. ಸಂಪೂರ್ಣ ದೇಶ ನಿಮ್ಮ ಜೊತೆಗಿದೆ. ಹಗಲು ರಾತ್ರಿ ನಮಗಾಗಿ ದುಡಿಯುತ್ತಿರುವ ನಿಮಗೆ ಕೋಟಿ ನಮನಗಳು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಹೇಳಿಕೆಗೆ ಈ ರೀತಿಯ ಪೋಸ್ಟ್ ಹಾಕಲಾಗಿದೆ. ಈ ವಿಚಾರದಲ್ಲಿ ನಮ್ಮ ಬೆಂಬಲ ಜಗನ್‌ಗೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಲಸಿಕೆ ಕಂಪನಿಯ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸಿಲ್ಲವೇ? ಉತ್ಪಾದನಾ ಘಟಕದಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿಗಳಿಗೆ ತ್ವರಿತಗತಿಯಲ್ಲಿ ಲಸಿಕೆ ಉತ್ಪಾದನೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ