
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೋದರಳಿಯ ಎಂದು ನಟಿಸಿ ಉದ್ಯಮಿಯೊಬ್ಬರಿಗೆ 3.9 ಕೋಟಿ ರೂ. ವಂಚನೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಮತ್ತೆ ಜಾಮೀನು ನಿರಾಕರಿಸಿದೆ. ಆರೋಪಿ ಅಜಯ್ ಕುಮಾರ್ ನಯ್ಯರ್ ವಿರುದ್ಧದ ಆರೋಪಗಳ ತೀವ್ರತೆಯನ್ನು ಪರಿಗಣಿಸಿ ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ಅವರು ಜಾಮೀನು ಅರ್ಜಿ ವಜಾಗೊಳಿಸಿದರು.
ಆರೋಪಿಯ ಪೂರ್ವಪರ ಹಾಗೂ ಆತನ ವಿರುದ್ಧದ ಆರೋಪಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದಾದಂತಹ ಪ್ರಕರಣಗಳಾಗಿರುವುದರಿಂದ ಹಾಗೂ ಐಪಿಸಿ ಸೆಕ್ಷನ್ 467/471/120B ಅಡಿಯಲ್ಲಿ ಅಪರಾಧಗಳನ್ನು ಸೇರಿಸಲು ತಿದ್ದುಪಡಿಯ ಪರಿಗಣನೆ ಬಾಕಿ ಇರುವುದರಿಂದ, ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸೂಕ್ತ ಎಂದು ನಾನು ಭಾವಿಸುವುದಿಲ್ಲ ಎಂದು ನ್ಯಾಯಾಧೀಶರು ಸೆಪ್ಟೆಂಬರ್ 1 ರ ಆದೇಶದಲ್ಲಿ ತಿಳಿಸಿದ್ದಾರೆ.
90 ಕೋಟಿ ರೂ ಟೆಂಡರ್ ಕೊಡಿಸುವುದಾಗಿ ಉದ್ಯಮಿಗೆ ವಂಚನೆ:
ಆರೋಪಿಯೂ ರಾಷ್ಟ್ರಪತಿಗಳ ಎಸ್ಟೇಟ್ ನವೀಕರಣಕ್ಕಾಗಿ ಚರ್ಮ(leather) ಪೂರೈಕೆಗಾಗಿ ಕೇಂದ್ರ ಸರ್ಕಾರದಿಂದ 90 ಕೋಟಿ ರೂ.ಗಳ ಟೆಂಡರ್ ಕೊಡಿಸುವುದಾಗಿ ದೂರುದಾರರಿಗೆ ಭರವಸೆ ನೀಡಿದ್ದ. ದೂರಿನ ಪ್ರಕಾರ, ಜಲಂಧರ್ ಜಿಮ್ಖಾನಾ ಕ್ಲಬ್‌ನಲ್ಲಿ ಕುಟುಂಬ ಸ್ನೇಹಿತನ ಮೂಲಕ ದೂರುದಾರರಿಗೆ ಆರೋಪಿಯ ಪರಿಚಯವಾಗಿದೆ. ಈ ವೇಳೆ ಆರೋಪಿ ಅಜಯ್ ಕುಮಾರ್ ನಯ್ಯರ್, ಕೇಂದ್ರ ಸಚಿವ ಅಮಿತ್ ಶಾ ಅವರ ಸೋದರಳಿಯ ಅಜಯ್ ಶಾ ತಾನು ಎಂದು ಹೇಳಿ, ಸರ್ಕಾರಿ ಒಪ್ಪಂದದ ಟೆಂಡರ್ ಅನ್ನು ದೂರುದಾರರಿಗೆ ನೀಡುವುದಾಗಿ ಭರವಸೆ ನೀಡಿದರು. ನಂತರ ಆರೋಪಿ ಅಜಯ್, ದೂರುದಾರರಿಗೆ ಅವರ ಕಂಪನಿಯ ಪರವಾಗಿ 90 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ತೋರಿಸಿ ಈ ಟೆಂಡರ್ ಪ್ರಕ್ರಿಯೆ ಶುಲ್ಕವಾಗಿ 2.5 ಕೋಟಿ ರೂ.ಗಳನ್ನು ಪಾವತಿಸಲು ಕೇಳಿದ ಎಂದು ಆರೋಪಿಸಿದೆ.
ಆರೋಪಿಗೆ ಹಲವು ಹಂತಗಳಲ್ಲಿ ಒಟ್ಟು 3.90 ಕೋಟಿ ಪಾವತಿಸಿದ ಉದ್ಯಮಿ:
ನಂತರ ಈ ಆರೋಪಿ ಜೊತೆ ಹಲವಾರು ಸುತ್ತಿನ ಸಭೆಗಳ ನಂತರ, ದೂರುದಾರರು ಟೆಂಡರ್‌ಗಾಗಿ ವಿವಿಧ ಸಂದರ್ಭಗಳಲ್ಲಿ ನಗದು ಮತ್ತು ಆರ್‌ಟಿಜಿಎಸ್ ಮೂಲಕ 3.90 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ. ಇದಾದ ನಂತರ ಆರೋಪಿ ಅಜಯ್ ನಯ್ಯರ್ 127 ಕೋಟಿ ರೂ.ಗಳ ಮತ್ತೊಂದು ಡಿಮ್ಯಾಂಡ್ ಡ್ರಾಫ್ಟ್‌ನ ಫೋಟೋವನ್ನು ದೂರುದಾರರಿಗೆ ತೋರಿಸಿದರು. ಅದರಲ್ಲಿ ಟೆಂಡರ್ ವೆಚ್ಚವನ್ನು 90 ಕೋಟಿ ರೂ.ಗಳಿಂದ 127 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಇದು ವಂಚನೆ ಎಂಬುದು ನಂತರ ಬೆಳಕಿಗೆ ಬಂದಿದ್ದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಡಿಸೆಂಬರ್ 2021ರಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ, 2022ರಲ್ಲಿ ಆರೋಪ ಹೊರಿಸಲಾಗಿದ್ದು, ವಿಚಾರಣೆ ಮುಗಿಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಆರೋಪಿ ಅಜಯ್ ನಯ್ಯರ್ ಜಾಮೀನು ಕೋರಿದ್ದರು. ಆದರೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಇದನ್ನೂ ಓದಿ: 3 ವರ್ಷದಿಂದ ಈ ಲೇಡಿ ಕೆಲಸಕ್ಕೆ ಚಕ್ಕರ್! ಇಲ್ಲಿ ಸರ್ಕಾರಿ ಡಾಕ್ಟರ್, ಕೆನಡಾದಲ್ಲಿ ಫಿಲ್ಮ್ ಮೇಕರ್!
ಇದನ್ನೂ ಓದಿ: ರಾಯಲ್ ಜೋಡಿಯ ವಿಚ್ಛೇದನಕ್ಕೆ ಕಾರಣವಾಯಿತು ನೆಹರೂ ಆರ್ಡರ್ ಮಾಡಿದ್ದ ಕಾರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ