
ಸಾಮಾನ್ಯವಾಗಿ ಸರ್ಕಾರಿ ಉದ್ಯೋಗಿಗಳಿಗೆ ಹಲವು ಸವಲತ್ತುಗಳಿರುವುದು ಗೊತ್ತೆ ಇದೆ. ಅದು ಶೈಕ್ಷಣಿಕ ರಂಗದಲ್ಲಿದ್ದರೆ ಅವರಿಗೆ ಉನ್ನತ ವ್ಯಾಸಂಗಕ್ಕೆ ವರ್ಷಗಳ ಕಾಲ ರಜೆ ಸಿಗುವುದು, ವಿದೇಶ ಪ್ರವಾಸ ಇತ್ಯಾದಿಗಳಿಗೆ ಸ್ಯಾಲರಿ ಸಹಿತ ರಜೆ ಸಿಗುವುದನ್ನು ನೀವು ಕೇಳಿರಬಹುದು. ಸ್ವತ ಸರ್ಕಾರಿ ಉದ್ಯೋಗಿಯಾಗಿದ್ದರೆ ನಿಮಗಿದರ ಅನುಭವ ಇರಬಹುದು. ಇದಕ್ಕೆ ಸರಿಯಾದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಇಲ್ಲೊಂದು ಕಡೆ ಮಹಿಳಾ ವೈದ್ಯೆಯೊಬ್ಬರು ಬರೋಬ್ಬರಿ 3 ವರ್ಷಗಳಿಗೂ ಅಧಿಕ ಕಾಲ ಯಾವುದೇ ಅನುಮತಿ ಪಡೆಯದೇ ಸ್ಯಾಲರಿ ಪಡೆದು ಕೆಲಸಕ್ಕೆ ರಜೆ ಹಾಕಿದ್ದಾರೆ. ಹಾಗಂತ ಆಕೆ ಯಾವುದೇ ತಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೋರ್ಸ್ ಮಾಡ್ತಿಲ್ಲ ಬದಲಾಗಿ ಆಕೆ ಕೆನಡಾದಲ್ಲಿ ಚಲನಚಿತ್ರ ನಿರ್ಮಾಣ ಕೆಲಸ ಮಾಡುತ್ತಿರುವುದಾಗಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟು ವರ್ಷಗಳ ಕಾಲ ಈಕೆಯ ಉದ್ಯೋಗಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಹೇಗೆ ಆಕೆಗೆ ವೇತನ ಸಹಿತ ರಜೆ ನೀಡಿದರು. ಆಕೆಯನ್ನು ಕೇಳುವವರು ಯಾರು ಇರಲಿಲ್ಲವೇ ಎಂಬ ಪ್ರಶ್ನೆ ಮೂಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಆರಂಭವಾಗಿದೆ. ಜೊತೆಗೆ ಆಕೆಯನ್ನು ಸೇವೆಯಿಂದ ಏಕೆ ವಜಾ ಮಾಡಬಾರದು ಎಂದು ನೋಟೀಸ್ ಕಳುಹಿಸಲಾಗಿದೆ.
ವೇತನ ಸಹಿತ ಮೂರು ವರ್ಷ ಸೇವೆಗೆ ಗೈರು:
ಅಂದಹಾಗೆ ದೆಹಲಿಯ ಜಿಬಿ ಪಂತ್ ಸರ್ಕಾರಿ ಆಸ್ಪತ್ರೆಯ ವೈದ್ಯೆಯೇ ಹೀಗೆ 3 ವರ್ಷಗಳ ಕಾಲ ಕರ್ತವ್ಯ ತಪ್ಪಿಸಿ, ಕೆನಡಾದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವವರು. ದೆಹಲಿಯ ಜಿಬಿ ಪಂತ್ ಆಸ್ಪತ್ರೆಯಲ್ಲಿ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಮಂಜು ಸಬ್ಬರ್ವಾಲ್ ಎಂಬಾಕೆ ಕಳೆದ 3 ವರ್ಷಗಳಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಈಕೆ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಾನು ಕೆನಡಾ ಮೂಲದ ಚಲನಚಿತ್ರ ನಿರ್ಮಾಪಕಿ ಎಂದು ಬರೆದುಕೊಂಡಿದ್ದು, ಆಕೆಯ ದೀರ್ಘಕಾಲದ ಅನುಪಸ್ಥಿತಿಯ ಬಗ್ಗೆ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇಲ್ಲಿ ಸರ್ಕಾರಿ ಸಂಬಳ ಪಡೆದು ಕೆನಡಾದಲ್ಲಿ ಮತ್ತೊಂದು ಕೆಲಸ ಮಾಡ್ತಿದ್ದ ಮಂಜು ಸಬರ್ವಾಲ್:
ಡಾ. ಮಂಜು ಸಬ್ಬರ್ವಾಲ್ ಕಳೆದ 3 ವರ್ಷಗಳಿಂದ ಸರ್ಕಾರಿ ಸಂಬಳ ಪಡೆಯುತ್ತಿದ್ದರೂ, ಸರಿಯಾದ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಆಕೆಗೆ ನೋಟಿಸ್ ಜಾರಿ ಮಾಡಿದೆ. ಜುಲೈ 28 ರಂದು ಸಬ್ಬರ್ವಾಲ್‌ಗೆ ಕಳುಹಿಸಿದ ನೋಟಿಸ್‌ನಲ್ಲಿ, 'ನಿಮ್ಮ ಈ ಅನಧಿಕೃತ ಗೈರುಹಾಜರಿಯು, ನೀವು ನಿಮ್ಮ ಸೇವೆಗಳನ್ನು ಕಳೆದುಕೊಂಡಂತೆ ಎಂದು ಏಕೆ ಪರಿಗಣಿಸಬಾರದು ಮತ್ತು ಕಳೆದ ಮೂರು ವರ್ಷಗಳಿಂದ ನೀವು ಪಡೆದ ಸಂಬಳ ಮತ್ತು ಭತ್ಯೆಯನ್ನು ಏಕೆ ಹಿಂದಿರುಗಿಸಬಾರದು ಇದಕ್ಕೆ ಅಗತ್ಯ ಕಾರಣ ನೀಡಿ ಎಂದು ವಿವರ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.
ದೆಹಲಿ ಸರ್ಕಾರಿ ಸ್ವಾಮ್ಯದ ಜಿಬಿ ಪಂತ್ ಆಸ್ಪತ್ರೆಯಲ್ಲಿ ಜೀವರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರಾಗಿ, ಡಾ. ಸುಬ್ಬರ್ವಾಲ್ ಅವರು ಪ್ರಯೋಗಾಲಯಗಳ ಮೇಲ್ವಿಚಾರಣೆ ಮತ್ತು ಸಂಬಂಧಿತ ಉಪಕರಣಗಳು ಮತ್ತು ರಾಸಾಯನಿಕಗಳ ಖರೀದಿಯ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಸರ್ಕಾರಿ ನಿಯಮಗಳ ಪ್ರಕಾರ ವೈದ್ಯರು ಆರು ತಿಂಗಳಲ್ಲಿ 10 ದಿನಗಳ ಗಳಿಕೆ ರಜೆ, 10 ದಿನಗಳ ಸಾಂದರ್ಭಿಕ ರಜೆ ಮತ್ತು 30 ದಿನಗಳ ಹೆಚ್ಚುವರಿ ಬೋಧನಾ ರಜೆಯನ್ನು 15 ದಿನಗಳ ಎರಡು ಭಾಗಗಳಾಗಿ ವಿಂಗಡಿಸಿ ಪಡೆಯಲು ಅರ್ಹರಾಗಿರುತ್ತಾರೆ. ಆದರೂ ಪೂರ್ವಾನುಮೋದನೆ ಇಲ್ಲದೆ ಯಾರೂ ಯಾವುದೇ ರಜೆಯನ್ನು ಪಡೆಯುವಂತಿಲ್ಲ. ಹಾಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಏಕೆ ವಜಾ ಮಾಡಬಾರದು ಎಂದು ನೋಟೀಸ್‌ನಲ್ಲಿ ಕೇಳಲಾಗಿದೆ.
ಈ ಜಿಬಿ ಪಂತ್ ಆಸ್ಪತ್ರೆಯೊಂದಿಗೆ ಸಹಯೋಗ ಹೊಂದಿದ್ದ ಜಿಐಪಿಎಂಇಆರ್ ವೈದ್ಯಕೀಯ ಕಾಲೇಜಿನ ಉದ್ಯೋಗಿಯೊಬ್ಬರು ಮೇ ತಿಂಗಳಲ್ಲಿ ಸಬ್ಬರ್ವಾಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಜೀವರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರು 2022 ರಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಕೋರ್ಸ್ ಮಾಡಲು ಕೆನಡಾಕ್ಕೆ ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸದೆ ತನ್ನ ಅನುಪಸ್ಥಿತಿಯಲ್ಲಿ ವಿಭಾಗದ ಮುಖ್ಯಸ್ಥರಾಗಲು ಮತ್ತೊಬ್ಬ ವೈದ್ಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಇದು ಸುಮಾರು 50 ಲಕ್ಷ ರೂ.ಗಳ ಆರ್ಥಿಕ ವಂಚನೆಗೆ ಕಾರಣವಾಯಿತು. ಮೇ ತಿಂಗಳಲ್ಲಿ ಸಂಬಳ ನೀಡುವ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿತು. ಆಸ್ಪತ್ರೆಯ ಅಧಿಕಾರಿಗಳು ಆಕೆಯ ಹಾಜರಾತಿಯಲ್ಲಿ ದೊಡ್ಡ ಲೋಪವನ್ನು ಗಮನಿಸಿದರು. ಈ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿದ ನಂತರ, ಅವರು ಪ್ರತಿ ವರ್ಷ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದಾದ ನಂತರ, ಅವರ ಸಂಬಳವನ್ನು ತಡೆಹಿಡಿಯಲಾಯಿತು ಮತ್ತು ಅವರನ್ನು ವಿಭಾಗದ ಮುಖ್ಯಸ್ಥರ ಸ್ಥಾನದಿಂದ ತೆಗೆದುಹಾಕಲಾಯಿತು.
ಸೋಶಿಯಲ್ ಮಿಡಿಯಾ ಪೇಜ್‌ನಲ್ಲು, ಸಬರ್ವಾಲ್ ತನ್ನನ್ನು ಟೆಲ್ಲಿ ಪ್ರಶಸ್ತಿ ವಿಜೇತೆ, ಚಲನಚಿತ್ರ ನಿರ್ಮಾಪಕಿ, ಬರಹಗಾರ್ತಿ, ಸಂಪಾದಕಿ ಮತ್ತು ವೈದ್ಯೆ ಎಂದು ಬರೆದುಕೊಂಡಿದ್ದು, ಐಎಮ್‌ಡಿಬಿ ಪ್ರಕಾರ ಅವರು ಮೂರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ರಾಯಲ್ ಜೋಡಿಯ ವಿಚ್ಛೇದನಕ್ಕೆ ಕಾರಣವಾಯಿತು ನೆಹರೂ ಆರ್ಡರ್ ಮಾಡಿದ್ದ ಕಾರು!
ಇದನ್ನೂ ಓದಿ: ಕದ್ದು ತಿನ್ನುತ್ತಿರುವಾಗಲೇ ಟೀಚರ್ ಕೈಗೆ ಸಿಕ್ಕಿಬಿದ್ದ ಪುಟಾಣಿ: ವೀಡಿಯೋ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ