ಭ್ರಷ್ಟರೆಲ್ಲ ಇಂದು ಒಂದೇ ವೇದಿಕೆಗೆ: ವಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಹಾರ; ಕರ್ನಾಟಕದಲ್ಲಿ ಬಿಜೆಪಿ ನಂ. 1 ಎಂದ ಮೋದಿ

By Kannadaprabha News  |  First Published Mar 29, 2023, 9:01 AM IST

ಭ್ರಷ್ಟಾಚಾರಿ ಬಚಾವೋ ಅಭಿಯಾನ ಆರಂಭವಾಗಿದೆ. ಆದರೆ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲಿಸಲ್ಲ ಎಂದು ಅದಾನಿ ಹಗರಣ ಪ್ರಸ್ತಾಪಿಸುತ್ತಿರುವ ವಿಪಕ್ಷಗಳಿಗೆ ಪ್ರಧಾನಿ ಚಾಟಿ ಬೀಸಿದ್ದಾರೆ.


ನವದೆಹಲಿ (ಮಾರ್ಚ್‌ 29, 2023): ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಅದಾನಿ ಹಗರಣ ಹಾಗೂ ರಾಹುಲ್‌ ಅನರ್ಹತೆ ವಿರುದ್ಧ ಒಗ್ಗಟ್ಟಾಗಿ ಸಮರ ಸಾರಿರುವ ನಡುವೆಯೇ, ಇದಕ್ಕೆ ಎದಿರೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಭ್ರಷ್ಟಾಚಾರದಲ್ಲಿ ಮುಳುಗಿರುವವರೆಲ್ಲ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಭ್ರಷ್ಟಾಚಾರಿ ಬಚಾವೋ ಅಭಿಯಾನ ಆರಂಭವಾಗಿದೆ’ ಎಂದು ಪ್ರಹಾರ ನಡೆಸಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ (New Delhi BJP Headquarters) ಕೆಲವು ಹೊಸ ಕಟ್ಟಡ, ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಂಗಳವಾರ ರಾತ್ರಿ ಮಾತನಾಡಿದ ಅವರು, ‘ವಿಪಕ್ಷಗಳು (Opposition Parties) ನಮ್ಮ ವಿರುದ್ಧ ನಾನಾ ಆರೋಪ ಮಾಡುತ್ತಿವೆ. ಆದರೆ ಇದಕ್ಕೆಲ್ಲ ನಾವು ತಲೆಬಾಗಲ್ಲ. ಭ್ರಷ್ಟಾಚಾರದ (Corruption) ವಿರುದ್ಧ ನಮ್ಮ ಸಮರ ಮುಂದುವರಿಯಲಿದೆ. ನಾವು ಭ್ರಷ್ಟರ ಬೇರುಗಳನ್ನು ಅಲ್ಲಾಡಿಸಿದ್ದೇವೆ. ಕಾಂಗ್ರೆಸ್‌ (Congress) ಆಡಳಿತದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (Money Laundering Act) ಒಟ್ಟು 5,000 ಕೋಟಿ ರೂ. ಜಪ್ತಿ ಮಾಡಲಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 8 ವರ್ಷದಲ್ಲಿ ನಾವು ಸುಮಾರು 1.10 ಲಕ್ಷ ಕೋಟಿ ರೂ. ಜಪ್ತಿ ಮಾಡಿದ್ದೇವೆ. 20 ಸಾವಿರ ಆರ್ಥಿಕ ಅಪರಾಧಿಗಳು ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾರೆ’ ಎಂದರು.

Tap to resize

Latest Videos

ಇದನ್ನು ಓದಿ: ದೊಡ್ಡ ಕನಸಿನೊಂದಿಗೆ ಹೆಜ್ಜೆ ಇಟ್ಟ ಸಣ್ಣ ಪಾರ್ಟಿ, ಹೊಸ ಕಚೇರಿ ಉದ್ಘಾಟಿಸಿ ಬಿಜೆಪಿ ಏಳುಬೀಳು ನೆನೆದ ಮೋದಿ!

ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ‘ಕಾಂಗ್ರೆಸ್‌ ಇಂದು ‘ದಂಗಾಯಿ (ದಂಗೆಕೋರ), ಡಿಸ್‌ ಆನೆಸ್ಟಿ(ಅಪ್ರಾಮಾಣಿಕ), ಡೈನಾಸ್ಟಿ (ವಂಶಪಾರಂಪರಿಕ) ಪಕ್ಷವಾಗಿ ಮಾರ್ಪಟ್ಟಿದೆ’ ಎಂದು ಮೂದಲಿಸಿದರು. ‘ದೇಶವು 1984ರ ಕಪ್ಪು ಅಧ್ಯಾಯವನ್ನು (ಸಿಖ್‌ ವಿರೋಧಿ ದಂಗೆ) ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಜನಾದೇಶ ಸಿಕ್ಕಿತು. ಆ ಅಲೆಯಲ್ಲಿ ನಾವು ಸಂಪೂರ್ಣವಾಗಿ ನಾಶವಾದೆವು. ಆದರೆ ನಾವು ಖಿನ್ನತೆಗೆ ಒಳಗಾಗಲಿಲ್ಲ ಮತ್ತು ಇತರರನ್ನು ದೂಷಿಸಲಿಲ್ಲ’ ಎನ್ನುವ ಮೂಲಕ ಈಗ ಬಿಜೆಪಿ ವಿರುದ್ಧ ಹರಿಹಾಯುತ್ತಿರುವ ಹಾಗೂ ಅನೇಕ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ ವಿರುದ್ಧ ಚಾಟಿ ಬೀಸಿದರು.

ಕರ್ನಾಟಕದಲ್ಲಿ ಬಿಜೆಪಿ ನಂ.1 ಪಕ್ಷ: ಮೋದಿ
ಬಿಜೆಪಿ ದೇಶದಲ್ಲಿ ವಿಕಸನಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಕರ್ನಾಟಕದಲ್ಲಿ ಬಿಜೆಪಿ ನಂ.1 ಪಕ್ಷವಾಗಿದೆ. ದಕ್ಷಿಣದ ಇತರ ಭಾಗಗಳಲ್ಲೂ ಬಿಜೆಪಿ ಈಗ ವ್ಯಾಪ್ತಿ ವಿಸ್ತರಿಸುತ್ತಿದೆ’ ಎಂದರು.

ಇದನ್ನೂ ಓದಿ: ಕುದುರೆ ರೇಸ್‌ ಓಡಲು ಕತ್ತೆ ತಂದಿದ್ದೀರಿ: ರಾಹುಲ್‌ ಬಗ್ಗೆ ಸಚಿವ ಪುರಿ ಟೀಕೆ

‘ನಮ್ಮ ಪಕ್ಷ ಹಿಂದೆ ಲೋಕಸಭೆಯಲ್ಲಿ ಕೇವಲ 2 ಸೀಟು ಹೊಂದಿತ್ತು. ಇಂದು 303 ಸೀಟಿಗೆ ಏರಿದೆ. ವಿಶ್ವದ ದೊಡ್ಡ ರಾಜಕೀಯ ಪಕ್ಷವಾಗಿ ಹಾಗೂ ಭಾರತದ ಭವಿಷ್ಯದ ಆಶಾಕಿರಣವಾಗಿ ಹೊರಹೊಮ್ಮಿದೆ. ಇದಕ್ಕೆಲ್ಲ ಪಕ್ಷದ ಕಾರ್ಯಕರ್ತರ ಶ್ರಮ ಕಾರಣ. ಆಧುನಿಕ ಭಾರತ ನಿರ್ಮಾಣದ ಹೊಣೆಯನ್ನು ಬಿಜೆಪಿ ಹೊತ್ತಿದೆ’ ಎಂದು ಶ್ಲಾಘಿಸಿದರು. ಬಿಜೆಪಿ ಗೆಲ್ಲುತ್ತ ಹೋದಂತೆ ಪ್ರತಿರೋಧವೂ ಹೆಚ್ಚಲಿದೆ. ಇದಕ್ಕೆ ಅಂಜುವುದು ಬೇಡ ಎಂದು ಧೈರ್ಯ ತುಂಬಿದರು.

ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್‌ ಕೀ ಬಾತ್‌ ಭಾಷಣದಲ್ಲಿ ಜನತೆಗೆ ಮೋದಿ ಕರೆ

click me!